ಬುಧವಾರ, ಅಕ್ಟೋಬರ್ 21, 2020
23 °C
ತೆಲಂಗಾಣದ ಗುಡೆಬೆಳ್ಳೂರ ಗ್ರಾಮದಲ್ಲಿ ತಲೆಮರೆಸಿಕೊಂಡಿದ್ದ ಮಾರುತಿ

ಚಿಟಗುಪ್ಪ: ಕಾರಿನೊಂದಿಗೆ ₹71 ಲಕ್ಷ ಅಪಹರಿಸಿದ್ದ ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಟಗುಪ್ಪ: ತನ್ನ ಮಾಲೀಕನ ಇನ್ನೊವಾ ಕಾರಿನೊಂದಿಗೆ ₹71 ಲಕ್ಷ ಅಪಹರಿಸಿದ್ದ ಕಾರು ಚಾಲಕನನ್ನು ತಾಲ್ಲೂಕಿನ ಮನ್ನಾಎಖ್ಖೇಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ತುರುವನೂರ ಗ್ರಾಮದ ಮಾರುತಿ ರವಿ ಸೂಧಾ ಬಂಧಿತ ಆರೋಪಿ.

‘ಬಳ್ಳಾರಿ ಜಿಲ್ಲೆಯ ಬಸವೇಶ್ವರ ಕಾಲೊನಿಯ ವ್ಯಾಪಾರಿ ರಾಜೇಶ್ ಸಿದ್ದಪ್ಪ ಎಂಬುವರು 2018ರ ಜೂನ್‌ 10ರಂದು ಬೀದರ್‌ ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಿಗೆ ಇನ್ನೊವಾ ಕಾರಿನಲ್ಲಿ ಭೇಟಿ ನೀಡಿ, ಬೀಜ ಮಾರಾಟ ಮಾಡಿದ ಹಣ ಸಂಗ್ರಹಿಸಿದ್ದರು. ಮನ್ನಾಎಖ್ಖೇಳ್ಳಿ ಗ್ರಾಮಕ್ಕೆ ಬಂದು ಡಿಸಿಸಿ ಬ್ಯಾಂಕ್‌ ಎದುರು ಕಾರು ನಿಲ್ಲಿಸಿ, ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಹಣ ಸಂಗ್ರಹಿಸಲು ಹೋಗಿದ್ದರು. ಈ ಅವಕಾಶ ಬಳಸಿಕೊಂಡ ಕಾರು ಚಾಲಕ ಮಾರುತಿ, ಇನ್ನೊವಾ ಕಾರು ಮತ್ತು ಅದರಲ್ಲಿದ್ದ ₹71 ಲಕ್ಷದೊಂದಿಗೆ ಪರಾರಿಯಾಗಿದ್ದ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಆರೋಪಿಯ ಪತ್ತೆಗಾಗಿ ಸಿಪಿಐ ಶರಣಬಸವೇಶ್ವರ ಭಜಂತ್ರಿ ನೇತೃತ್ವದಲ್ಲಿ ಪಿಎಸ್ಐಗಳಾದ ಮಹಾಂತೇಶ್, ಮಡಿ ವಾಳಪ್ಪ ಹಾಗೂ ಸಿಬ್ಬಂದಿ ಈರಪಣ್ಣ, ಮಹ್ಮದ್ ಅಕ್ರಮ್, ವಿಕ್ರಮ್, ಮಾರುತಿ ರೆಡ್ಡಿ, ಹನುಮೇಶ್, ವಿಜಯಕುಮಾರ್‍ ಬರ್ಮಾ, ಶಿವಶರಣ, ರಾಜಕುಮಾರ್‍ ಮತ್ತು ಎಸ್‌.ಪಿ ಕಚೇರಿಯ ತಾಂತ್ರಿಕ ಸಿಬ್ಬಂದಿ ವಿಜಯಕುಮಾರ, ಬಾಲಾಜಿ ಅವರನ್ನೊಳ್ಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಕೊನೆಗೂ ಆರೋಪಿ ಯನ್ನು ಬಂಧಿಸಲಾಯಿತು’ ಎಂದರು.

‘ತೆಲಂಗಾಣ ರಾಜ್ಯದ ಮಹೆಬೂಬನಗರದ ಮಕ್ತಾಲ್‌ ತಾಲ್ಲೂಕಿನ ಗುಡೆಬೆಳ್ಳೂರ್‍ ಗ್ರಾಮದಲ್ಲಿ ಕಾರು ಚಾಲಕ ಮಾರುತಿ ವಾಸವಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಆತನನ್ನು ಬಂಧಿಸಲಾಯಿತು. ಆರೋಪಿಯು ₹71 ಲಕ್ಷದ ಪೈಕಿ ₹6 ಲಕ್ಷದಲ್ಲಿ ಬಲೇನೊ ಕಾರು ಖರೀದಿಸಿದ್ದ. ಆತನಿಂದ ಹೊಸ ಕಾರು ಮತ್ತು ₹47 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ’ ಎಂದು ವಿವರಿಸಿದರು.

‘ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿ ಪತ್ತೆ ಮಾಡಲು ಶ್ರಮಿಸಿದ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ವಿಶೇಷ ಪುರಸ್ಕಾರ ನೀಡಲಾಗುವುದು’ ಎಂದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಡಾ.ಗೋಪಾಲ್, ಡಿವೈಎಸ್‌ಪಿ ಸೋಮಲಿಂಗ ಕುಂಬಾರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.