ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆಯ ತುರಾಯಿ ಬಗ್ಗವಳ್ಳಿ ಸಿಪಾಯಿ! ಲೆಫ್ಟಿನಂಟ್ ಜನರಲ್ ಬಿ.ಎಸ್ ರಾಜು ಕುರಿತ ಲೇಖನ

Last Updated 7 ಮೇ 2022, 20:15 IST
ಅಕ್ಷರ ಗಾತ್ರ

ಚಿಕ್ಕಮಗಳೂರು ಜಿಲ್ಲೆಯ ಆ ಪುಟ್ಟ ಊರಿನ ಮನೆಯೊಂದರ ಜಗುಲಿಯ ಮೇಲೆ ಕುಳಿತು ಅಲ್ಲಿ ಹರಡಿದ್ದ ಛಾಯಾಚಿತ್ರಗಳ ಮೇಲೆ ಕಣ್ಣು ಹಾಯಿಸುವಾಗ ಎಲ್ಲರಿಗೂ ದೊಡ್ಡ ಸೋಜಿಗ. ಆ ಹೆಂಚಿನ ಗೂಡನ್ನು ಭಾರತೀಯ ಸೇನೆಯ ಉಪ ಮುಖ್ಯಸ್ಥನ (ಲೆಫ್ಟಿನಂಟ್ ಜನರಲ್)ಹುದ್ದೆಗೇರಿದವರ ಮನೆಯೆಂದು ನಂಬಲು ಯಾರೂ ತಯಾರಿರಲಿಲ್ಲ. ಅಲ್ಲಿದ್ದ ಚಿತ್ರಗಳ ರಾಶಿಯಲ್ಲಿ ಬೈಕ್‌ ಮೇಲೆ ಪತ್ನಿಯನ್ನು ಕೂರಿಸಿಕೊಂಡು ಹೊರಟ ವ್ಯಕ್ತಿಯ ಚಿತ್ರವೊಂದು ಥಟ್ಟನೇ ಗಮನಸೆಳೆಯಿತು. ‘ಇವರೇ ಸರ್‌, ನಮ್ಮೂರಿನ ಹೆಮ್ಮೆಯ ಪುತ್ರ ಬಗ್ಗವಳ್ಳಿ ಸೋಮಶೇಖರ್‌ (ಬಿ.ಎಸ್‌.) ರಾಜು. ನಮ್ಮೂರಿಗೆ ಬಂದಾಗ ಅವರು ಇಷ್ಟೇ ಸಿಂಪಲ್ಲಾಗಿ ಇರೋದು ನೋಡಿ’ ಎಂದು ಜತೆಯಲ್ಲಿದ್ದವರು ಖುಷಿಯಿಂದ ಹೇಳಿದರು.

ಸೇನೆಯ ಎರಡನೇ ಉನ್ನತ ಹುದ್ದೆಗೇರಿದ ಯೋಧರೊಬ್ಬರನ್ನು ಕೊಟ್ಟ ಈ ಪುಟ್ಟ ಗ್ರಾಮವನ್ನು ಹುಡುಕಿಕೊಂಡು ನಮ್ಮ ಸವಾರಿ ಬಂದಿತ್ತು. ಸಾಮಾನ್ಯ ಕುಟುಂಬದಲ್ಲಿ ಜನಿಸಿ, ದೊಡ್ಡ ಎತ್ತರಕ್ಕೆ ಬೆಳೆದ ಈ ಹೆಮ್ಮೆಯ ಯೋಧನ ಕಥೆ, ಊರಿನ ಪ್ರತಿಯೊಂದು ಹಾದಿ–ಬೀದಿಯಲ್ಲೂ ಅನುರಣಿಸುತ್ತಿತ್ತು. ಕೆಲವು ದಿನಗಳ ಹಿಂದೆ ನವದೆಹಲಿಯಲ್ಲಿ ಹೊಸ ಹುದ್ದೆ ಅಲಂಕರಿಸುವ ಸಮಾರಂಭದಲ್ಲಿ ಅಮ್ಮ ಮತ್ತು ಪತ್ನಿಯೊಂದಿಗೆ ರಾಜು ಅವರು ಭಾಗವಹಿಸಿದ್ದ ಚಿತ್ರವನ್ನು ನೋಡಿದ್ದೆವು. ಅವರ ಸರಳ ವ್ಯಕ್ತಿತ್ವದ ಝಲಕ್‌ವೊಂದು ಆಗಲೇ ಸಿಕ್ಕಿತ್ತು. ಆ ದೃಶ್ಯವನ್ನೇ ಚಿತ್ತಭಿತ್ತಿಯಲ್ಲಿ ಹೊತ್ತುಕೊಂಡು ಬಗ್ಗವಳ್ಳಿಗೆ ಹೋದಾಗ ರಾಜು ಅವರ ಮಾನವೀಯ ಅಂತಃಕರಣದ ಹಲವು ಕಥೆಗಳು ಸುರುಳಿಯಂತೆ ಬಿಚ್ಚಿಕೊಂಡವು.

ಚಿಕ್ಕಮಗಳೂರು ಜಿಲ್ಲೆಯಬಗ್ಗವಳ್ಳಿಯಲ್ಲಿ ಬಿ.ಎಸ್. ರಾಜು ಅವರ ಮನೆ
ಚಿಕ್ಕಮಗಳೂರು ಜಿಲ್ಲೆಯಬಗ್ಗವಳ್ಳಿಯಲ್ಲಿ ಬಿ.ಎಸ್. ರಾಜು ಅವರ ಮನೆ

ಬಗ್ಗವಳ್ಳಿಯ ಸೋಮಶೇಖರ್‌ ಮತ್ತು ವಿಮಲಾ ದಂಪತಿಯ ಪುತ್ರ ಈ ಯೋಧ. ಬಾಲ್ಯದಲ್ಲಿ ಇದೇ ಹೆಂಚಿನ ಮನೆಯಲ್ಲಿ ಓಡಾಡಿ ಬೆಳೆದ ಹುಡುಗ. ಸಹೋದರಿಯರಾದ ಶೀಲಾ, ಶೈಲಾ, ಮತ್ತು ಸಹೋದರ ಗಿರೀಶ್‌ ಅವರಿದ್ದ ದೊಡ್ಡ ಕುಟುಂಬದಲ್ಲಿ ರಾಜು ಬೆಳೆದರು. ‘ಚಿಕ್ಕಂದಿನಿಂದಲೂ ರಾಜು ವಿದ್ಯಾಭ್ಯಾಸ ಮತ್ತು ಕ್ರೀಡೆ ಎರಡರಲ್ಲೂ ಮುಂದಿದ್ದರು. ನಾಯಕತ್ವ ಗುಣ ಕೂಡ ಅವರಲ್ಲಿ ಮೊದಲಿನಿಂದಲೂ ಇತ್ತು. ಮಗ ಸೇನೆಗೆ ಸೇರಬೇಕು ಎಂಬ ಅಭಿಲಾಷೆ ಸೋಮಶೇಖರ್‌ ಅವರಿಗಿತ್ತು. ರಾಜು ಎನ್‌ಡಿಎ ಪರೀಕ್ಷೆ ಪಾಸಾಗಿ ಸೇನೆ ಸೇರಿದಾಗ ಕುಟುಂಬದ ಹರ್ಷಕ್ಕೆ ಪಾರವೇ ಇರಲಿಲ್ಲ’ ಎಂದು ರಾಜು ಅವರ ಸಹೋದರ (ಚಿಕ್ಕಪ್ಪನ ಪುತ್ರ) ಬಿ.ಪಿ. ಪ್ರಭುಕುಮಾರ್‌ ನೆನೆದರು.

ವಿಜಯಪುರದ ಸೈನಿಕ ಶಾಲೆಯಲ್ಲಿ ಓದಿದ ರಾಜು ಅವರು, ಮುಂದೆ ಪುಣೆಯ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯನ್ನು ಸೇರಿದರು. ಅಲ್ಲಿಂದ ವೆಲ್ಲಿಂಗ್ಟನ್‌ನ ಡಿಫೆನ್ಸ್‌ ಸರ್ವೀಸಸ್‌ ಸ್ಟಾಫ್‌ ಕಾಲೇಜ್‌ ಮತ್ತು ಇಂಗ್ಲೆಂಡ್‌ನ ‘ರಾಯಲ್‌ ಕಾಲೇಜ್‌ ಆಫ್‌ ಡಿಫೆನ್ಸ್‌ ಸ್ಟಡಿ’ಯಲ್ಲಿ ಉನ್ನತ ವ್ಯಾಸಂಗ ನಡೆಸಿದರು. ಅಮೆರಿಕದ ಸೇನಾ ಶಾಲೆಯಿಂದ ಭಯೋತ್ಪಾದನೆ ನಿಗ್ರಹ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಅವರು ಪಡೆದರು. ಸೋಮಶೇಖರ್‌ ಅವರ ಕುಟುಂಬದಲ್ಲಿ ಸೇನೆ ಸೇರಿದ ಮೊದಲಿಗ ರಾಜು. ಅವರ ತಂದೆ ಉಪನ್ಯಾಸಕರಾಗಿದ್ದನ್ನು ಬಿಟ್ಟರೆ ಪೂರ್ವಿಕರು ಪಕ್ಕಾ ಕೃಷಿಕರು. ಗ್ರಾಮದಲ್ಲಿರುವ ಕರಳುಬಳ್ಳಿಯವರು ಈಗಲೂ ಕೃಷಿಯಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಸೋಮಶೇಖರ್‌ ಅವರು ಪಾಲಿಟೆಕ್ನಿಕ್‌ನಲ್ಲಿ ಬೋಧಕರಾಗಿದ್ದರು.

ಹಲವು ಗೆಲುವುಗಳಿಗೆ ಕಾರಣವಾದ ಹಿರಿಮೆ ಹೊಂದಿರುವ ಜಾಟ್‌ ರೆಜಿಮೆಂಟ್‌ನ 11ನೇ ಬೆಟಾಲಿಯನ್ನಿನ ಯೋಧನಾಗಿ 1984ರ ಡಿಸೆಂಬರ್‌ನಲ್ಲಿ ರಾಜು ಅವರು ಭಾರತೀಯ ಸೇನೆಯನ್ನು ಸೇರಿದರು. ಹಲವು ಸಮರಗಳಲ್ಲಿ ಭಾಗಿಯಾದ ವ್ಯಾಪಕ ಅನುಭವ ಅವರಿಗಿದೆ. ಕಾಶ್ಮೀರ ಕಣಿವೆಯಲ್ಲಿ ಮಿಲಿಟರಿ ಕಾರ್ಯಾಚರಣೆಯ ಹೊಣೆ ಹೊತ್ತ ಚಿನಾರ್‌ ಕಾರ್ಪ್ಸ್‌ನ ಮುಖ್ಯಸ್ಥರಾಗಿಯೂ ಅವರು ಕರ್ತವ್ಯ ನಿರ್ವಹಿಸಿದ್ದಾರೆ.

ರಾಜು ಅವರ ಮುಖ್ಯ ಕೊಡುಗೆ ಇರುವುದು ಉಗ್ರರ ಚಟುವಟಿಕೆಗಳನ್ನು ತಹಬಂದಿಗೆ ತರಲು ಅವರು ಬಳಸಿದ ದಾರಿಯಲ್ಲಿ. ಶಸ್ತ್ರಾಸ್ತ್ರ ತ್ಯಾಗಮಾಡಿ ಬಂದ ಯುವಕರನ್ನು ಮುಖ್ಯವಾಹಿನಿಗೆ ಸೇರಿಸಿಕೊಳ್ಳಲು ಅವರು ಮುತುವರ್ಜಿ ತೋರಿದರು.

‘ನೀವು ಮುಖ್ಯವಾಹಿನಿಗೆ ವಾಪಸು ಬನ್ನಿ. ನಿಮ್ಮ ಕಾಳಜಿಯನ್ನು ನಾವು ಮಾಡುತ್ತೇವೆ. ಕಾರ್ಯಾಚರಣೆ ಸಂದರ್ಭದಲ್ಲೂ ನೀವು ವಾಪಸ್‌ ಬರಲು ಇಚ್ಛಿಸಿದರೆ ನಿಮ್ಮನ್ನು ಬರಮಾಡಿಕೊಳ್ಳಲು ಸಿದ್ಧ’ ಎಂದು ರಾಜು ಕರೆಕೊಟ್ಟಿದ್ದರು. ಇದರಿಂದ ಕಣಿವೆಯಲ್ಲಿ ಉಗ್ರರ ಚಟುವಟಿಕೆಗಳು ಬಹುಪಾಲು ತಗ್ಗಲು ಸಾಧ್ಯವಾಯಿತು. ಭಯೋತ್ಪಾದನೆ ಚಟುವಟಿಕೆಗಳತ್ತ ಒಲವು ತೋರುವ ಯುವಕರ ಸಂಖ್ಯೆಯೂ ಕಡಿಮೆಯಾಯಿತು.

ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಅಧಿಕಾರಿಯಾಗಿ ಸೋಮಾಲಿಯಾದಲ್ಲಿ, ಭೂತಾನ್‌ನಲ್ಲಿ ಕಾರ್ಯನಿರ್ವಹಿಸಿದ್ದಾರೆ. ‘ಆಪರೇಷನ್‌ ಪರಾಕ್ರಮ್‌’ ಕಾರ್ಯಾಚರಣೆಯಲ್ಲೂ ಅವರು ಭಾಗಿಯಾಗಿದ್ದರು. ಭಾರತ–ಪಾಕಿಸ್ತಾನ ಗಡಿಯಲ್ಲಿ ಭದ್ರತೆಯ ಹೊಣೆಯನ್ನೂ ಹೊತ್ತಿದ್ದರು. 2017–18ರಲ್ಲಿ ಕಾಶ್ಮೀರದಲ್ಲಿ ದಂಗೆಯನ್ನು ಹತ್ತಿಕ್ಕುವ ನೇತೃತ್ವ ವಹಿಸಿಕೊಂಡಾಗ ಅವರ ಮಾನವೀಯ ನಡೆ ಸ್ಥಳೀಯರ ಮನ ಗೆದ್ದಿತ್ತು. ‘ಸೇನೆಯು ಪ್ರತಿಯೊಬ್ಬ ಭಾರತೀಯ ಪ್ರಜೆಯ ಸ್ನೇಹಿತ. ನನ್ನ ಹಿಂದಿದ್ದ ಅಧಿಕಾರಿಯ ಸಂದೇಶವೂ ಇದೇ ಆಗಿತ್ತು. ನನ್ನ ಪ್ರತಿಯೊಂದು ನಡೆಯೂ ಈ ಪರಿಪಾಟವನ್ನು ಮುಂದುವರಿಸುವುದಕ್ಕೆ ಪೂರಕವಾಗಿ ಇರಲಿದೆ’ ಎಂದು ರಾಜು ಹೇಳಿದ್ದರು.

‘ಪ್ರತಿಯೊಂದು ಸಾವೂ ದುರದೃಷ್ಟಕರ. ಉಗ್ರರನ್ನು ಕೊಲ್ಲುವುದು ನಮ್ಮ ಬಯಕೆಯಲ್ಲ. ಶರಣಾಗತಿಗಾಗಿ ನಾವು ಅವರಿಗೆ ಅವಕಾಶವನ್ನು ನೀಡಲು ಇಚ್ಛಿಸುತ್ತೇವೆ’ ಎನ್ನುವ ಅವರ ಹೇಳಿಕೆ ಕಣಿವೆಯಲ್ಲಿ ದೊಡ್ಡ ಸಂಚಲನವನ್ನು ಉಂಟು ಮಾಡಿತ್ತು. ಚಿನಾರ್‌ ಕಾರ್ಪ್ಸ್‌ನಿಂದ ಶುರುಮಾಡಿದ್ದ ಹೆಲ್ಪ್‌ಲೈನ್‌ನ ಪ್ರಯೋಜನವನ್ನು ಕಾಶ್ಮೀರದ ನಾಗರಿಕರು ದೊಡ್ಡ ಪ್ರಮಾಣದಲ್ಲೇ ಪಡೆದುಕೊಂಡರು. ಕೋವಿಡ್‌ ಸಾಂಕ್ರಾಮಿಕದ ಕಾಲಘಟ್ಟದಲ್ಲಿ ‘ಖೈರಿಯತ್‌ ಗಸ್ತು’ ಮೂಲಕ ನಾಗರಿಕರಿಗೆ ಔಷಧೋಪಚಾರ ಮಾಡಿದ್ದು ಸಹ ರಾಜು ಅವರ ನೇತೃತ್ವದ ಸೇನಾಪಡೆ.

Caption
Caption

ಹುಟ್ಟೂರಿನ ಜನರ ಜತೆ ರಾಜು ಅವರಿಗೆ ಅವಿನಾಭಾವ ಸಂಬಂಧ. ಆರು ತಿಂಗಳು, ವರ್ಷಕ್ಕೊಮ್ಮೆ ಊರಿಗೆ ಭೇಟಿ ಕಾಯಂ. ವಾಹನ ಚಾಲನೆ ಅಚ್ಚುಮೆಚ್ಚು. ಊರಿಗೆ ಬಂದಾಗ ಬೈಕಿನಲ್ಲಿ ತೋಟ, ಜಮೀನುಗಳಿಗೆ ಓಡಾಡುವುದು ರೂಢಿ. ಮಿಲಿಟರಿ ಸೇರಬಯಸುವವರಿಗೆ ರಾಜು ಅವರು ಸ್ಫೂರ್ತಿಯ ಸೆಲೆ. ಸೇನೆಗೆ ಸೇರಿ ದೇಶ ಸೇವೆ ಮಾಡುವಂತೆ ಯುವಜನರಿಗೆ ಪ್ರೋತ್ಸಾಹ ನೀಡುವ ಗಣಿ. ರಾಜು ಅವರಿಗೆ ಚಾರಣ ಎಂದರೆ ಇಷ್ಟ. ಕುಟುಂಬದವರ ಜತೆ ಬೆಟ್ಟ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಛಾಯಾಗ್ರಹಣ, ಹಳೆಯ ಹಾಡು ಕೇಳುವುದು ನೆಚ್ಚಿನ ಹವ್ಯಾಸ. ತಂತ್ರಜ್ಞಾನದ ಬಗ್ಗೆ ಅದಮ್ಯ ಆಸಕ್ತಿ, ನವೀನ ಅವಿಷ್ಕಾರಗಳನ್ನು ತಿಳಿದುಕೊಳ್ಳುವ ಉತ್ಸಾಹಿ.

ರಾಜು ಅವರು ಮುದ್ದೆ, ಬಸ್ಸಾರು ಪ್ರಿಯ. ಅವರಿಗೆ ಒಗ್ಗರಣೆ ಚಟ್ನಿ, ಕಡ್ಲೆ ಚಟ್ನಿ ಇಷ್ಟ. ‘ಊರಿಗೆ ಬಂದಾಗ ರಾಗಿ ಮುದ್ದೆ, ಬಸ್ಸಾರು ಮಾಡಿಸಿಕೊಂಡು ಊಟ ಮಾಡುತ್ತಾರೆ. ಊಟ ಮಾಡಿದ ತಟ್ಟೆ–ಲೋಟ ಅವರೇ ತೊಳೆದಿಡುತ್ತಾರೆ. ಶಿಸ್ತು, ಕಾರ್ಯಸಾಧನೆ, ಸಮಯಪಾಲನೆಯಲ್ಲಿ ಅವರದು ಮಾದರಿ ವ್ಯಕ್ತಿತ್ವ’ ಎಂದು ಸಂಬಂಧಿಕರಾದ ರಾಜೇಶ್ವರಿ ಹೇಳಿದರು.

ಸೋಮಶೇಖರ್ ಅವರು ಸ್ವಗ್ರಾಮಕ್ಕೆ ಗ್ರಂಥಾಲಯವನ್ನು ಕೊಡುಗೆಯಾಗಿ ನೀಡಿದ್ದಾರೆ. ಅಪ್ಪ ಹಾಕಿಕೊಟ್ಟ ಸಮಾಜ ಕಾರ್ಯಗಳನ್ನು ರಾಜು ಅವರು ಮುಂದುವರೆಸಿದ್ದಾರೆ. ಗ್ರಾಮದ ಜನರ ಪ್ರೀತಿ–ವಿಶ್ವಾಸ ಗಳಿಸಿದ್ದಾರೆ. ಪ್ರತಿವರ್ಷ ಗ್ರಾಮದ ಶಾಲೆಯ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ಉಚಿತವಾಗಿ ನೀಡುವ ಪರಿಪಾಟ ಕಾಪಿಟ್ಟುಕೊಂಡು ಬಂದಿದ್ದಾರೆ.

‘ದೊಡ್ಡಪ್ಪ ಪ್ರತಿವರ್ಷ ಎರಡು ಲಕ್ಷ ರೂಪಾಯಿಯ ಪುಸ್ತಕ, ಪೆನ್ನು ಮೊದಲಾದ ಲೇಖನ ಸಾಮಗ್ರಿಗಳನ್ನು ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೀಡುತ್ತಾರೆ. ಮಿಲಿಟರಿಗೆ ಸೇರಬಯಸುವ ಯುವಜನರಿಗೆ ತರಬೇತಿ ಕೇಂದ್ರ ಸ್ಥಾಪನೆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ನಿವೃತ್ತಿಗೆ ಒಂದೂವರೆ ವರ್ಷ ಇದೆ. ಸ್ವಗ್ರಾಮದಲ್ಲಿ ಮನೆಯೊಂದನ್ನು ಕಟ್ಟಿಸುವ ಯೋಚನೆಯೂ ಅವರಿಗಿದೆ’ ಎಂದು ರಾಜು ಅವರ ಚಿಕ್ಕಪ್ಪನ ಮಗ ಯಶವಂತ್‌ ವಿವರಿಸಿದರು.

ಗ್ರಾಮದ ತುಂಬೆಲ್ಲ ಕಣ್ಮಣಿ ರಾಜು ಅವರ ಸಾಧನೆಯದ್ದೇ ಗುಣಗಾನ. ಊರಿನ ಮುಖ್ಯ ವೃತ್ತಕ್ಕೆ ಅವರ ಹೆಸರು ನಾಮಕರಣ ಮಾಡುವ ನಿಟ್ಟಿನಲ್ಲಿ ಚರ್ಚೆಗಳು ಗರಿಗೆದರಿವೆ. ಗ್ರಾಮದ ಹಿರಿಯರು ಗ್ರಾಮ ಪಂಚಾಯಿತಿಗೆ ಈ ಸಲಹೆಯನ್ನು ನೀಡಿದ್ದಾರೆ. ‘ರಾಜು ಅವರು ಗ್ರಾಮದ ಬಡಕುಟುಂಬದ ಕೆಲ ವಿದ್ಯಾರ್ಥಿಗಳ ಶಿಕ್ಷಣ ವೆಚ್ಚವನ್ನು ಭರಿಸುತ್ತಾರೆ. ಅವರ ನೆರವು ಪಡೆದು ಒಬ್ಬರು ಹೈಸ್ಕೂಲು ಶಿಕ್ಷಕರಾಗಿದ್ದಾರೆ. ಈ ಯೋಧ ನಮಗೆಲ್ಲ ಮಾದರಿ’ ಎಂದು ಗ್ರಾಮಸ್ಥ ಪ್ರಸನ್ನಕುಮಾರ್‌ ಹೆಮ್ಮೆಪಟ್ಟರು. ಇಂತಹ ಯೋಧ ಕನ್ನಡಿಗ ಎನ್ನುವುದು ನಾಡಿನ ಪಾಲಿಗೂ ಹೆಮ್ಮೆಯ ವಿಷಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT