ಶನಿವಾರ, ಜುಲೈ 24, 2021
20 °C
ಜೂನ್‌ 2ರಂದು ಅರವಿಂದ ಬೆಲ್ಲದಗೆ ಕರೆ?

ಯುವರಾಜ್ ಬಳಸಿದ್ದ ಮೊಬೈಲ್ ಸಿಡಿಆರ್‌ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅವರಿಗೆ ಕರೆ ಮಾಡಿದ್ದ ಎನ್ನಲಾದ ಯುವರಾಜ್ ಅಲಿಯಾಸ್ ಸೇವಾಲಾಲ್ ಸ್ವಾಮೀಜಿಯನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆದಿರುವ ಎಸಿ‍ಪಿ ನೇತೃತ್ವದ ತಂಡ, ಆತ ಬಳಸಿದ್ದ ಮೊಬೈಲ್ ಕರೆಗಳ ಸಿಡಿಆರ್‌ ಪರಿಶೀಲಿಸಲು ಮುಂದಾಗಿದೆ.

ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭಾನುವಾರ ಭೇಟಿ ನೀಡಿದ್ದ ಎಸಿಪಿ ಯತಿರಾಜ್ ನೇತೃತ್ವದ ತಂಡ, ಯುವರಾಜ್‌ನನ್ನೇ ವಿಚಾರಣೆ ನಡೆಸಿತ್ತು. ಪೊಲೀಸ್ ಕಸ್ಟಡಿ, ಆಸ್ಪತ್ರೆ ಹಾಗೂ ಜೈಲಿನಲ್ಲಿದ್ದ ವೇಳೆ ಮೊಬೈಲ್ ಬಳಕೆ ಮಾಡಿದ್ದ ಬಗ್ಗೆ ಮಾಹಿತಿಯನ್ನೂ ಕಲೆಹಾಕಿತ್ತು.

ಯುವರಾಜ್ ಬಳಸಿದ್ದ ಎನ್ನಲಾದ ಮೊಬೈಲ್ ನಂಬರ್‌ಗಳ ಪಟ್ಟಿ ಸಿದ್ಧಪಡಿಸಿರುವ ತಂಡ, ಅವುಗಳ ಕರೆ ವಿವರವನ್ನು ನೀಡುವಂತೆ ಸಂಬಂಧಪಟ್ಟ ಮೊಬೈಲ್ ಸೇವಾ ಕಂಪನಿಗಳನ್ನು ಕೋರಿದೆ. ಮಂಗಳವಾರ ಸಿಡಿಆರ್ ವಿವರ ಸಿಗುವ ಸಾಧ್ಯತೆ ಇದೆ. ಯುವರಾಜ್ ಯಾರಿಗೆಲ್ಲ ಕರೆ ಮಾಡಿದ್ದನೆಂಬುದು ಸಿಡಿಆರ್‌ನಿಂದ ತಿಳಿಯಲಿದೆ.

ಜೂನ್ 2ರಂದು ಕರೆ: ‘ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ಬಂಧಿ
ತನಾಗಿ ನ್ಯಾಯಾಂಗ ಬಂಧನದಲ್ಲಿರುವ ಯುವರಾಜ್, ಇದೇ ಜೂನ್ 2ರಂದು ಅರವಿಂದ ಬೆಲ್ಲದ ಅವರಿಗೆ ಎರಡು ಬಾರಿ ಕರೆ ಮಾಡಿರುವುದು ಪುರಾವೆಗಳಿಂದ ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.

‘ಕಾರ್ಯಕ್ರಮವೊಂದರಲ್ಲಿ ಬೆಲ್ಲದ ಪಾಲ್ಗೊಂಡಿದ್ದರು. ಅವರ ಮೊಬೈಲ್ ಆಪ್ತ ಸಹಾಯಕನ ಬಳಿ ಇತ್ತು. ಅವರೇ ಯುವರಾಜ್‌ನ ಕರೆ ಸ್ವೀಕರಿಸಿ, ಕೆಲ ಸಮಯ ಬಿಟ್ಟು ವಾಪಸು ಕರೆ ಮಾಡಿಸುವುದಾಗಿ ಹೇಳಿದ್ದರು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ಶಾಸಕ ಬೆಲ್ಲದಗೆ ಮೊಬೈಲ್ ಕೊಟ್ಟಿದ್ದ ಆಪ್ತ ಸಹಾಯಕ, ‘ಯಾರೋ ಸ್ವಾಮೀಜಿ ಕರೆ ಮಾಡಿದ್ದರು’ ಎಂಬುದಾಗಿ ಹೇಳಿದ್ದರು.’

‘ಅದೇ ನಂಬರ್‌ಗೆ ವಾಪಸು ಕರೆ ಮಾಡಿದ್ದ ಬೆಲ್ಲದ, ‘ಯಾರು’ ಎಂದು ಪ್ರಶ್ನಿಸಿದ್ದರು. ಯುವರಾಜ್, ‘ನಾನು ಯುವ
ರಾಜ್ ಸ್ವಾಮೀಜಿ. ನಿಮ್ಮ ತಂದೆ ಚಂದ್ರಕಾಂತ ಬೆಲ್ಲದ ಅವರಿಗೆ ನನ್ನ ಪರಿಚಯವಿದೆ. ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ. ಇದೀಗ ಜೈಲಿನಲ್ಲಿ ಇದ್ದೇನೆ. ದಯವಿಟ್ಟು ನನ್ನನ್ನು ಜೈಲು ವಾಸದಿಂದ ಪಾರು ಮಾಡಿ’ ಎಂದಿದ್ದ. ಅದನ್ನು ಕೇಳುತ್ತಿದ್ದಂತೆ ಬೆಲ್ಲದ ಕರೆ ಕಡಿತಗೊಳಿಸಿದ್ದರು.

ಅದಾದ 15 ದಿನಗಳ ಬಳಿಕ ಬೆಲ್ಲದ ಅವರು ಗೃಹ ಸಚಿವರಿಗೆ ದೂರು ನೀಡಿದ್ದಾರೆ. ಈ ಎಲ್ಲ ಸಂಗತಿ ಅವರ ಹೇಳಿಕೆಯಲ್ಲಿದೆ’ ಎಂದೂ ಮೂಲಗಳು ತಿಳಿಸಿವೆ.

ಆಸ್ಪತ್ರೆಗೂ ದಾಖಲು: ‘ಹುಷಾರಿಲ್ಲವೆಂದು ಹೇಳಿ ಯುವರಾಜ್, ಆಗಾಗ ಆಸ್ಪತ್ರೆಗೂ ದಾಖಲಾಗುತ್ತಿದ್ದ. ಆ ಸಂದರ್ಭದಲ್ಲಿ ಆತ ಮೊಬೈಲ್ ಬಳಸಿರುವ ಮಾಹಿತಿ ಇದೆ. ಸಿಡಿಆರ್ ಬಂದ ಬಳಿಕ ಯಾವೆಲ್ಲ ನೆಟ್‌ವರ್ಕ್‌ನಿಂದ ಮೊಬೈಲ್ ಬಳಸಲಾಗಿದೆ ಎಂಬುದು ತಿಳಿಯಲಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು