ಶನಿವಾರ, ಜುಲೈ 2, 2022
26 °C

ದೆಹಲಿ, ಪಂಜಾಬ್‌ ನಂತರ ಕರ್ನಾಟಕದಲ್ಲಿ ಎಎಪಿ ಸರ್ಕಾರ: ಅರವಿಂದ ಕೇಜ್ರಿವಾಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ದೆಹಲಿ, ಪಂಜಾಬ್‌ ನಂತರ ಕರ್ನಾಟಕದಲ್ಲಿ ಸರ್ಕಾರ ರಚಿಸಲಿದ್ದೇವೆ’ ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಆಮ್‌ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ರೈತರ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಹಿಂದೆ ಶೇ 20ರಷ್ಟು ಕಮಿಷನ್ ಪಡೆಯುವ ಸರ್ಕಾರ ಇತ್ತು. ಈಗ ಶೇ 40ರಷ್ಟು ಕಮಿಷನ್‌ ಸರ್ಕಾರಇದೆ. ಆದರೆ, ದೆಹಲಿಯಲ್ಲಿ ಕಮಿಷನ್‌ ಪಡೆಯದ ಸರ್ಕಾರ ಇದೆ. ನಮ್ಮದು ಅತ್ಯಂತ ಪ್ರಾಮಾಣಿಕ ಮತ್ತು ಭ್ರಷ್ಟಾಚಾರ ಮುಕ್ತ ಸರ್ಕಾರ’ ಎಂದು ಪ್ರತಿಪಾದಿಸಿದರು.

‘ನಾನು ಅತ್ಯಂತ ಪ್ರಾಮಾಣಿಕ ಎಂದು ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಮಾಣಪತ್ರ ನೀಡಿದ್ದಾರೆ. ಏಕೆಂದರೆ, ನನ್ನ ಮನೆ ಮೇಲೆ ಸಿಬಿಐ, ಆದಾಯ ತೆರಿಗೆ ಸೇರಿದಂತೆ ಎಲ್ಲ ಇಲಾಖೆಗಳ ಮೂಲಕ ದಾಳಿ ನಡೆಸಲಾಯಿತು. ಆದರೆ, ಅವರಿಗೆ ಏನೂ ದೊರೆಯಲಿಲ್ಲ. ನನಗೆ ರಾಜಕೀಯ ಮಾಡಲು ಬರುವುದಿಲ್ಲ. ಆದರೆ, ನನಗೆ ಜನಸಾಮಾನ್ಯರ ನೋವುಗಳು, ಭಾವನೆಗಳು ಅರ್ಥವಾಗುತ್ತವೆ’ ಎಂದರು.

’ದೆಹಲಿಯಲ್ಲಿ ಐದು ವರ್ಷಗಳಲ್ಲಿ ಸರ್ಕಾರಿ ಶಾಲೆಗಳನ್ನು ಬದಲಾಯಿಸಿದ್ದೇವೆ. ಈ ವರ್ಷ ನಾಲ್ಕು ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆಗಳನ್ನು ತೊರೆದು ಸರ್ಕಾರಿ ಶಾಲೆಗಳಿಗೆ ದಾಖಲಾಗಿದ್ದಾರೆ. ದೆಹಲಿಯಲ್ಲಿ ಆಸ್ಪತ್ರೆಗಳ ಪರಿಸ್ಥಿತಿಯೂ ಹದಗೆಟ್ಟಿತ್ತು. ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಎಲ್ಲ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದೇವೆ’ ಎಂದು ವಿವರಿಸಿದರು.

‘ನಾವು ಪ್ರಾಮಾಣಿಕರಾಗಿದ್ದೇವೆ. ಹೀಗಾಗಿಯೇ ಹಣ ಉಳಿಸಿದ್ದೇವೆ. ಶಿಕ್ಷಣ, ಆರೋಗ್ಯ, ವಿದ್ಯುತ್‌, ನೀರು ಮತ್ತು ಬಸ್‌ಗಳಿಗೆ ಮಹಿಳೆಯರಿಗೆಪ್ರಯಾಣದ ಸೌಲಭ್ಯವನ್ನು ಉಚಿತವಾಗಿ ಕಲ್ಪಿಸಿದ್ದೇವೆ. ನಮಗೆ ಗೂಂಡಾಗಿರಿ ಮಾಡಲು ಬರುವುದಿಲ್ಲ. ಆದರೆ, ಶಾಲೆಗಳನ್ನು ನಿರ್ಮಿಸುವುದು ಗೊತ್ತಿದೆ. ನಿಮಗೆ ಉತ್ತಮ ಶಾಲೆ ಮತ್ತು ಆಸ್ಪತ್ರೆಗಳು ಬೇಕಾಗಿದ್ದರೆ ಆಮ್‌ ಆದ್ಮಿ ಪಕ್ಷಕ್ಕೆ ವೋಟ್‌ ಹಾಕಿ. ಇಡೀ ದೇಶದ ರೈತರು ನಮ್ಮ ಜತೆ ಕೈಜೋಡಿಸಬೇಕು’ ಎಂದು ಕೋರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು