ಗುರುವಾರ , ಮಾರ್ಚ್ 23, 2023
21 °C

ಗೃಹ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ ನಟ ಪುನೀತ್‌ ರಾಜ್‌ಕುಮಾರ್‌ ಪತ್ನಿ ಅಶ್ವಿನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿತ್ರನಟ ಪುನೀತ್‌ ರಾಜ್‌ಕುಮಾರ್‌ ನಿಧನರಾದ ಸಂದರ್ಭದಲ್ಲಿ ಸಂಪೂರ್ಣವಾಗಿ ಅವರ ಕುಟುಂಬಕ್ಕೆ ಬೆಂಬಲವಾಗಿ ನಿಂತು, ಸುಸೂತ್ರವಾಗಿ ಅಂತ್ಯಸಂಸ್ಕಾರ ನೆರವೇರಿಸಲು ವ್ಯವಸ್ಥೆ ಮಾಡಿರುವುದಕ್ಕಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಪುನೀತ್‌ ಪತ್ನಿ ಅಶ್ವಿನಿ ಕೃತಜ್ಞತೆ ಸಲ್ಲಿಸಿದ್ದಾರೆ.

ಗೃಹ ಸಚಿವರಿಗೆ ಭಾನುವಾರ ಪತ್ರ ಬರೆದಿರುವ ಅವರು, ‘ಪುನೀತ್‌ ಅವರ ಅಕಾಲಿಕ ಅಗಲಿಕೆಯಿಂದ ನಮಗಷ್ಟೇ ಅಲ್ಲ, ಇಡೀ ರಾಜ್ಯಕ್ಕೆ ಆಘಾತ ಉಂಟುಮಾಡಿತ್ತು. ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಪುನೀತ್‌ ಅವರನ್ನು ನಮ್ಮ ನೋವನ್ನು ಅಡಗಿಸಿಟ್ಟುಕೊಂಡು ಸಕಲ ಗೌರವಗಳೊಂದಿಗೆ ಕಳುಹಿಸಿಕೊಡುವುದು ಅನಿವಾರ್ಯವಾಗಿತ್ತು. ಈ ಸಂದರ್ಭದಲ್ಲಿ ನೀವು ನಮಗೆ ಬೆಂಬಲವಾಗಿ ನಿಂತಿದ್ದಿರಿ’ ಎಂದು ಹೇಳಿದ್ದಾರೆ.

‘ಲಕ್ಷಾಂತರ ಅಭಿಮಾನಿಗಳು ಅಂತಿಮ ದರ್ಶನ ಪಡೆಯುವುದಕ್ಕೆ ವ್ಯವಸ್ಥೆ ಮಾಡುವುದರ ಜತೆಗೆ, ಅಂತ್ಯಸಂಸ್ಕಾರ ಪೂರ್ಣವಾಗುವವರೆಗೂ ಜತೆಗಿದ್ದು ಧೈರ್ಯ ನೀಡಿದ್ದೀರಿ. ಮೂರು ದಿನಗಳ ಕಾಲ ಯಾವುದೇ ಅಹಿತಕರ ಘಟನೆ ನಡೆಯದಂತೆ ನೀವು ಕೈಗೊಂಡ ಕ್ರಮಗಳಿಂದಾಗಿ ನಾವು ಅವರಿಗೆ ಸೂಕ್ತವಾದ ರೀತಿಯಲ್ಲಿ ವಿದಾಯ ಹೇಳಲು ಸಾಧ್ಯವಾಗಿದೆ. ನಿಮ್ಮ ಈ ಸಹಕಾರಕ್ಕೆ ನಮ್ಮ ಇಡೀ ಕುಟುಂಬ ಮತ್ತು ಎಲ್ಲ ಅಭಿಮಾನಿಗಳ ಪರವಾಗಿ ಕೃತಜ್ಞತೆಗಳು’ ಎಂದು ಅಶ್ವಿನಿ ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು