ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುತ್ವ ವಿಚಾರಧಾರೆಯ 25 ಜನರಿಗೆ ಬಿಜೆಪಿ ಟಿಕೆಟ್‌ಗೆ ಬೇಡಿಕೆ: ಮುತಾಲಿಕ್‌

Last Updated 6 ಡಿಸೆಂಬರ್ 2022, 8:27 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): 'ಬರುವ ವಿಧಾನಸಭೆ ಚುನಾವಣೆಯಲ್ಲಿ ಹಿಂದುತ್ವದ ವಿಚಾರಧಾರೆ ಹೊಂದಿರುವ 25 ಜನರಿಗೆ ಬಿಜೆಪಿ ಟಿಕೆಟ್‌ ಕೊಡಬೇಕೆಂದು ಆ ಪಕ್ಷದ ವರಿಷ್ಠರಿಗೆ ಬೇಡಿಕೆ ಸಲ್ಲಿಸಲಾಗಿದೆ’ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಹೇಳಿದರು.


25 ಜನರಿಗೆ ಟಿಕೆಟ್‌ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಪಕ್ಷದ ಹಿರಿಯರ ಗಮನಕ್ಕೆ ತರಲಾಗಿದೆ. ಪರಿಶಿಷ್ಟ ಜಾತಿ/ಪಂಗಡದವರು, ಮಹಿಳೆಯರು, ಶಿಕ್ಷಕರು, ಪದವೀಧರರಿಗೆ ಮೀಸಲಾತಿ ಕೊಡುವಂತೆ ಹಿಂದೂಗಳಿಗೂ ಮೀಸಲು ಸೌಲಭ್ಯ ಕೊಡಬೇಕು ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.


ಬಿಜೆಪಿ ಯಾರ ಅಪ್ಪನದು ಅಲ್ಲ, ನಮ್ಮ ಪರಿಶ್ರಮದ ಫಲದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಟಿಕೆಟ್‌ ಕೇಳುವುದು ನಮ್ಮ ಹಕ್ಕು. ನಾನು ಕೂಡ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸುವೆ. ನಾಲ್ಕೈದು ಕ್ಷೇತ್ರಗಳಲ್ಲಿ ಸರ್ವೇ ನಡೆಯುತ್ತಿದೆ. ಜೇವರ್ಗಿಯ ಸಿದ್ಧಲಿಂಗ ಸ್ವಾಮೀಜಿ, ಧಾರವಾಡದ ಪರಮಾತ್ಮ ಸ್ವಾಮೀಜಿ ಅವರು ಚುನಾವಣೆಗೆ ಸ್ಪರ್ಧಿಸಲು ಸಿದ್ಧರಾಗಿದ್ದಾರೆ. ಹಿಂದುತ್ವವಾದಿಗಳಿಗೆ ಬಿಜೆಪಿ ಟಿಕೆಟ್‌ ಕೊಡದಿದ್ದರೆ ಸ್ವಂತ ಬಲದ ಮೇಲೆ ಚುನಾವಣೆಗೆ ನಿಲ್ಲುತ್ತೇವೆ ಎಂದು ಹೇಳಿದರು.

ಲವ್‌ ಜಿಹಾದ್‌, ಲಿವಿಂಗ್‌ ಟುಗೆದರ್‌ ನಿಷೇಧಿಸಿ:
ಲವ್‌ ಜಿಹಾದ್‌, ‘ಲಿವಿಂಗ್‌ ಟುಗೆದರ್’ ತಡೆಯಲು ಕೇಂದ್ರ ಸರ್ಕಾರ ವಿಶೇಷ ಕಾನೂನು ತರಬೇಕು. ‘ಲಿವಿಂಗ್‌ ಟುಗೆದರ್‌‘ ಅನೈತಿಕ, ಅವ್ಯವಹಾರಕ್ಕೆ ಅವಕಾಶ ಮಾಡಿಕೊಡುವ ಪದ್ಧತಿ. ನಮ್ಮ ದೇಶದಲ್ಲಿ ಮದುವೆ ಒಂದು ಒಪ್ಪಂದವಲ್ಲ. ಶ್ರೇಷ್ಠ ಬಂಧನ. ಪ್ರೀತಿ–ಪ್ರೇಮದ ಹೆಸರಲ್ಲಿ ಹಿಂದೂ ಹುಡುಗಿಯರನ್ನು ಪುಸಲಾಯಿಸಿ ಲವ್‌ ಜಿಹಾದ್‌ ನಡೆಸಲಾಗುತ್ತಿದೆ. ಲವ್‌ ಜಿಹಾದ್‌ ಬಲೆಗೆ ಬೀಳುವ ಹಿಂದೂ ಹುಡುಗಿಯರನ್ನು ಮಾರಾಟ ಮಾಡಿ ವೇಶ್ಯಾವಾಟಿಕೆ, ಭಯೋತ್ಪಾದನೆಗೆ ದೂಡಲಾಗುತ್ತಿದೆ. ಮತಾಂತರವೂ ಆಗುತ್ತಿದೆ. ಇದಕ್ಕೆ ಕಾನೂನಿನ ಮೂಲಕ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಅಂಜನಾದ್ರಿ ನಿಲುವು ಸ್ಪಷ್ಟಪಡಿಸಲಿ:
ಕೊಪ್ಪಳ ಜಿಲ್ಲೆ ಗಂಗಾವತಿಯ ಅಂಜನಾದ್ರಿಯೇ ಹನುಮ ಹುಟ್ಟಿದ ಸ್ಥಳವೆಂದು ರಾಜ್ಯ ಸರ್ಕಾರ ಹೇಳಬೇಕು. ಅದರ ಮೂಲಕ ಬೇರೆ ರಾಜ್ಯದವರು ಅದರ ಬಗ್ಗೆ ಭವಿಷ್ಯದಲ್ಲಿ ಚಕಾರ ಎತ್ತದಂತೆ ನೋಡಿಕೊಳ್ಳಬೇಕು. ಅಂಜನಾದ್ರಿ ಅಭಿವೃದ್ಧಿಗೆ ನೀಲನಕಾಶೆ ತಯಾರಿಸಬೇಕು. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಅಭಿವೃದ್ಧಿಗೊಳಿಸಬೇಕು. ಅದಕ್ಕೆ ನಿಶ್ಚಿತ ಗಡುವು ಹಾಕಿಕೊಳ್ಳಬೇಕು. ಈ ಸಂಬಂಧ ಶೀಘ್ರದಲ್ಲೆ ಮುಖ್ಯಮಂತ್ರಿಯವರನ್ನು ಭೇಟಿಯಾಗುವೆ ಎಂದು ತಿಳಿಸಿದರು.


ಆನೆಗೊಂದಿ ಸುತ್ತಮುತ್ತಲಿನ ರೆಸಾರ್ಟ್‌ಗಳಲ್ಲಿ ಡ್ರಗ್‌, ಸೆಕ್ಸ್‌ ಮಾಫಿಯಾ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ. ಪವಿತ್ರ ಹನುಮನ ಜನ್ಮಸ್ಥಳದ ಪಾವಿತ್ರ್ಯತೆ ಕಾಪಾಡಬೇಕು. ಒಂದುವೇಳೆ ರಾಜ್ಯ ಸರ್ಕಾರ ಅದನ್ನು ತಡೆಯದಿದ್ದಲ್ಲಿ ಶ್ರೀರಾಮ ಸೇನೆ ದೊಡ್ಡ ಹೋರಾಟ ನಡೆಸಿ ಕರ ಸೇವೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.


ಧಾರ್ಮಿಕ ದತ್ತಿ ಇಲಾಖೆಯು ದೇವಸ್ಥಾನಗಳ ಪರಿಸರದಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬಾರದು. ಸರ್ಕಾರ ಬದ್ಧತೆ ತೋರಿಸಬೇಕು. ಗೋಹಂತಕರು, ನಾಸ್ತಿಕರು, ಬಹುದೇವೋಪಾಸನೆ ಒಪ್ಪಲಾರದವರು, ಮುಸ್ಲಿ, ಕ್ರೈಸ್ತರಿಗೆ ದೇವಸ್ಥಾನಗಳ ಪರಿಸರದಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬಾರದು ಎಂದು ಆಗ್ರಹಿಸಿದರು.


ಶ್ರೀರಾಮ ಸೇನೆಯ ವಿಭಾಗೀಯ ಅಧ್ಯಕ್ಷ ಸಂಜೀವ ಮರಡಿ, ಕೊಪ್ಪಳ ಜಿಲ್ಲಾಧ್ಯಕ್ಷ ರಾಮಣ್ಣ ಉಪ್ಪಾರ, ಪ್ರಧಾನ ಕಾರ್ಯದರ್ಶಿ ಶಿವಕುಮಾರ, ಹೊಸಪೇಟೆ ತಾಲ್ಲೂಕು ಅಧ್ಯಕ್ಷ ಜಗದೀಶ ಕಾಮಟಗಿ, ಕೂಡ್ಲಿಗಿ ತಾಲ್ಲೂಕು ಅಧ್ಯಕ್ಷ ಮಂಜುನಾಥ ಬಿ.ಎಸ್‌. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT