ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

100 ಪ್ರಕರಣ ದಾಖಲಿಸಲಿ, ಜಯಿಸುವೆ: ಬಿಎಸ್‌ವೈ

’ಮೋದಿ, ಅಮಿತ್‌ ಶಾ ಆಶೀರ್ವಾದ ಇರುವವರೆಗೆ ಮುಖ್ಯಮಂತ್ರಿ ಆಗಿರುವೆ‘
Last Updated 5 ಫೆಬ್ರುವರಿ 2021, 20:18 IST
ಅಕ್ಷರ ಗಾತ್ರ

ಬೆಂಗಳೂರು: ‘ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಜಾರಿಗೆ ಬಂದ ಮೇಲೆ ಹಾದಿ ಬೀದಿಯಲ್ಲಿ ಹೋಗುವವರೆಲ್ಲ ದಾಖಲೆಗಳನ್ನು ಪಡೆದು ಸುಳ್ಳು ಪ್ರಕರಣಗಳನ್ನು ದಾಖಲಿಸುವ ಪ್ರವೃತ್ತಿ ಹೆಚ್ಚಾಗಿದೆ. ಇದಕ್ಕೆಲ್ಲ ಬೆದರುವುದಿಲ್ಲ. ನನ್ನ ವಿರುದ್ಧ ನೂರು ಪ್ರಕರಣ ದಾಖಲಿಸಲಿ. ಅವುಗಳನ್ನೆಲ್ಲ ದಿಟ್ಟವಾಗಿ ಎದುರಿಸಿ ಜಯಿಸುವೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಸರ್ಕಾರದ ಪರವಾಗಿ ವಿಧಾನಸಭೆಯಲ್ಲಿ ಶುಕ್ರವಾರ ಉತ್ತರ ನೀಡಿದ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಪುನರುಚ್ಚರಿಸಿದರು.

ಡಿನೋಟಿಫಿಕೇಷನ್‌ ಪ್ರಕರಣದಲ್ಲಿ ಜಾಮೀನು ಪಡೆದಿರುವ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದರು.

ಅದಕ್ಕೆ ತಿರುಗೇಟು ಕೊಟ್ಟ ಯಡಿಯೂರಪ್ಪ, ‘ನಿಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಜಾಮೀನಿನ ಮೇಲೆ ಹೊರಗೆ ಇಲ್ಲವೇ. ಸಾಕಷ್ಟು ರಾಷ್ಟ್ರೀಯ ನಾಯಕರು ಜಾಮೀನು ಪಡೆದಿರುವುದನ್ನು ಮರೆತಿದ್ದೀರಾ’ ಎಂದು ಛೇಡಿಸಿದರು.

‘ಎಲ್ಲಿಯವರೆಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಕೇಂದ್ರ ನಾಯಕರು ಹಾಗೂ ಜನರ ಆಶೀರ್ವಾದ ಇರುತ್ತದೆಯೋ ಅಲ್ಲಿಯವರೆಗೆ ಮುಖ್ಯಮಂತ್ರಿಯಾಗಿರುತ್ತೇನೆ. ಟೀಕೆ-ಟಿಪ್ಪಣಿಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ಹೇಳಿದರು.

’ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ 25 ಸ್ಥಾನಗಳನ್ನು ಗೆದ್ದಿದೆ. ಸಿದ್ದರಾಮಯ್ಯ ನಾಯಕತ್ವದ ಕಾಂಗ್ರೆಸ್‌ಗೆ ಸಿಕ್ಕಿದ್ದು ಒಂದು ಸ್ಥಾನವಷ್ಟೇ. 15 ಕ್ಷೇತ್ರಗಳ ಉಪಚುನಾವಣೆಯಲ್ಲಿ 12ರಲ್ಲಿ ಗೆದ್ದಿದ್ದೇವೆ. ಇತ್ತೀಚೆಗೆ ನಡೆದ ಎರಡು ಕ್ಷೇತ್ರಗಳ ಉಪಚುನಾವಣೆಗಳಲ್ಲೂ ಜಯಭೇರಿ ಬಾರಿಸಿದ್ದೇವೆ. ಮೂರು ಕ್ಷೇತ್ರಗಳ ಉಪಚುನಾವಣೆ ಹಾಗೂ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲೂ ಭಾರಿ ಅಂತರದಿಂದ ಗೆಲ್ಲಲಿದ್ದೇವೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ. ಕಾಂಗ್ರೆಸ್‌ ಪಕ್ಷ ಶಾಶ್ವತವಾಗಿ ವಿರೋಧ ಪಕ್ಷದಲ್ಲಿ ಇರುವಂತೆ ಮಾಡುತ್ತೇವೆ‘ ಎಂದು ಸವಾಲು ಎಸೆದರು.

‘ನಮ್ಮ ಸರ್ಕಾರ ಇದ್ದಾಗ, ಹೆಬ್ಬಾಳ ಬಿಟ್ಟು ಎಲ್ಲ ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಕ್ಷ ಜಯಗಳಿಸಿತ್ತು. ಬಳ್ಳಾರಿ ಹಾಗೂ ಮಂಡ್ಯ ಕ್ಷೇತ್ರದ ಫಲಿತಾಂಶ ಏನಾಯಿತು ಎಂಬುದನ್ನು ನೆನಪಿಸಿಕೊಳ್ಳಿ’ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

‘ನಿಮ್ಮನ್ನು ರಾಜ್ಯದ ಜನರು ತಿರಸ್ಕರಿಸಿದ್ದಾರೆ. ನಿಮ್ಮ ಧೋರಣೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಿ ಎಂಬ ಸಲಹೆ ಕೊಡುತ್ತಿದ್ದೇನೆ’ ಎಂದು ಯಡಿಯೂರಪ್ಪ ಛೇಡಿಸಿದರು.

‘ಎಸಿಬಿ ಸ್ಥಾಪಿಸಿ ಪ್ರಕರಣ ಇತ್ಯರ್ಥ ಪಡಿಸಿಕೊಂಡ ಸಿದ್ದರಾಮಯ್ಯ’

‘ಸಿದ್ದರಾಮಯ್ಯ ವಕೀಲರು ಹಾಗೂ ಬಹಳ ಬುದ್ಧಿವಂತರು. ಮುಖ್ಯಮಂತ್ರಿಯಾಗಿದ್ದಾಗ ಭ್ರಷ್ಟಾಚಾರ ನಿಗ್ರಹ ದಳವನ್ನು ಸ್ಥಾಪಿಸಿ ತಮ್ಮ ಹಾಗೂ ಸಚಿವರ ಮೇಲಿನ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡರು. ಸಾವಿರಾರು ಎಕರೆಯನ್ನು ರೀಡೂ ಮಾಡಿಸಿದರು‘ ಎಂದು ಯಡಿಯೂರಪ್ಪ ಹೇಳಿದರು.

’ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಸಿದ್ದರಾಮಯ್ಯ ನಿತ್ಯ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಅವರಿಗೆ ಬೆಳಗಿನ ಜಾವ ಕನಸು ಬೀಳುತ್ತದೆ‘ ಎಂದು ವ್ಯಂಗ್ಯವಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ನಿಮ್ಮ ಪಕ್ಷದವರ ಮಾಹಿತಿಯ ಆಧಾರದಲ್ಲೇ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಹೇಳಿದ್ದೆ. ಯುಗಾದಿ ನಂತರ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ನಿಮ್ಮ ಪಕ್ಷದವರೇ ಹೇಳುತ್ತಿದ್ದಾರಲ್ಲ. ಸಂಪುಟ ವಿಸ್ತರಣೆಯ ಬಳಿಕ ನಿಮ್ಮ ಪಕ್ಷದವರು ಏನೆಲ್ಲ ಹೇಳಿಕೆ ನೀಡಿದ್ದರು ಎಂಬುದು ನೆನಪಿದೆಯಲ್ಲ. ನಾಲ್ಕೇ ದಿನಗಳಲ್ಲಿ ಐದು ಬಾರಿ ಖಾತೆ ಬದಲಾವಣೆ ಮಾಡಿದ್ದು ಏಕೆ. ಇದು ಸದೃಢ ಮುಖ್ಯಮಂತ್ರಿ ಮಾಡುವ ಕೆಲಸವೇ‘ ಎಂದು ಪ್ರಶ್ನಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT