ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಠಾಣೆಗೆ 3 ಮಹಿಳಾ ಸಿಬ್ಬಂದಿ ನಿಯೋಜನೆ: ಗೃಹ ಸಚಿವ

ತಪ್ಪೆಸಗುವ ಪೊಲೀಸರ ವಿರುದ್ಧ ದೂರು ನೀಡುವ ವ್ಯವಸ್ಥೆ ಶೀಘ್ರ ಜಾರಿ: ಆರಗ
Last Updated 28 ಸೆಪ್ಟೆಂಬರ್ 2021, 17:49 IST
ಅಕ್ಷರ ಗಾತ್ರ

ಮೈಸೂರು: ‘ಕರ್ತವ್ಯಲೋಪ ಎಸಗುವ ಪೊಲೀಸರ ವಿರುದ್ಧ ದೂರು ನೀಡಲು ಐಜಿಪಿ ಕಚೇರಿ ಮತ್ತು ರಾಜ್ಯದ ಎಲ್ಲ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗುವುದು’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ನಗರದ ಪೊಲೀಸ್‌ ತರಬೇತಿ ಶಾಲೆಯಲ್ಲಿ ಮಂಗಳವಾರ ಮಹಿಳಾ ಪೊಲೀಸ್‌ ಕಾನ್‌ಸ್ಟೆಬಲ್‌ಗಳ ನಿರ್ಗಮನ ಪಥಸಂಚಲನದಲ್ಲಿ ಪಾಲ್ಗೊಂಡು ಮಾತನಾಡಿ, ‘ಪೊಲೀಸ್‌ ಠಾಣೆಗಳಲ್ಲಿ ಅಪರಾಧ ನಡೆದ ಕೆಲವು ಉದಾಹರಣೆಗಳಿವೆ. ಸಾರ್ವಜನಿಕರ ದೂರು ಸ್ವೀಕರಿಸದೇ ಇರುವುದು, ದೂರುದಾರರನ್ನು ಬೆದರಿ
ಸುವ ಘಟನೆಗಳು ನಡೆದಿವೆ. ಈ ಸಮಸ್ಯೆ ನೀಗಿಸಲು ಎರಡು ಸಹಾಯ
ವಾಣಿ ಆರಂಭಿಸಲಾಗುವುದು. ಪೊಲೀಸರ ವಿರುದ್ಧವೂ ಸಾರ್ವಜನಿಕರು ಧೈರ್ಯದಿಂದ ದೂರು ನೀಡುವಂತಾಗಬೇಕು’ ಎಂದರು.

ಶೇ 25ಕ್ಕೆ ಹೆಚ್ಚಿಸಲು ಕ್ರಮ: ‘ಪ್ರತಿ 100 ಪೊಲೀಸರಿಗೆ 25 ಮಹಿಳಾ ಸಿಬ್ಬಂದಿ ಇರಬೇಕು. ರಾಜ್ಯದಲ್ಲಿ ಈಗ ಶೇ 10 ರಷ್ಟು ಇದ್ದಾರೆ. ಅದನ್ನು ಕ್ರಮೇಣ ಶೇ 25ಕ್ಕೆ ಹೆಚ್ಚಿಸಲಾಗುತ್ತದೆ. ಪ್ರತಿ ಠಾಣೆಯಲ್ಲಿ ಕನಿಷ್ಠ ಮೂವರು ಮಹಿಳಾ ಪೊಲೀಸ್‌ ಕಾನ್‌ಸ್ಟೆಬಲ್‌ಗಳ ನಿಯೋಜನೆಗೆ ಕ್ರಮವಹಿಸಲಾಗಿದೆ’ ಎಂದರು.

250 ಎಸ್‌ಒಸಿಒ ನೇಮಕ: ‘ರಾಜ್ಯದ ಎಲ್ಲಾ ವಿಧಿ ವಿಜ್ಞಾನ ಪ್ರಯೋಗಾಲಯಗಳನ್ನು(ಎಫ್‌ಎಸ್‌ಎಲ್‌) ಬಲಪಡಿಸಲಾಗುವುದು. ಅಪರಾಧ ನಡೆದ ಸ್ಥಳದಿಂದ ವೈಜ್ಞಾನಿಕವಾಗಿ ಸಾಕ್ಷ್ಯಗಳನ್ನು ಸಂಗ್ರಹಿಸಲು 250 ಸೀನ್ ಆಫ್ ಕ್ರೈಮ್ ಆಫೀಸರ್(ಎಸ್‌ಒಸಿಒ) ನೇಮಕ ಮಾಡಿಕೊಳ್ಳಲಾಗುವುದು. ಪ್ರಸ್ತುತ ಆ ಕೆಲಸವನ್ನು ತರಬೇತಿ ಪಡೆದ ಪೊಲೀಸರು ಮಾಡುತ್ತಿದ್ದು, ಇನ್ನಷ್ಟು ಸುಧಾರಣೆ ತರಲು ತಜ್ಞರನ್ನು ನಿಯೋಜಿಸಿಕೊಳ್ಳಲಾಗುವುದು. ಇದು ದೇಶದಲ್ಲೇ ಮೊದಲು‘ ಎಂದು ನುಡಿದರು.

ಅನೈತಿಕ ಪೊಲೀಸ್‌ಗಿರಿ–ಕ್ರಮ: ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ‘ಬೆಂಗಳೂರು ಮತ್ತು ಮಂಗಳೂರಿನಲ್ಲಿ ನಡೆದಿರುವ ಅನೈತಿಕ ಪೊಲೀಸ್‌ಗಿರಿ ಪ್ರಕರಣಗಳ ಬಗ್ಗೆ ವಿಶೇಷ ಗಮನ ವಹಿಸಲಾಗಿದೆ. ಅಂಥ ಘಟನೆಗಳು ಮರುಕಳಿಸಿದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು’ ಎಂದರು.

‘ಔರಾದ್ಕರ್ ವರದಿಯಿಂದ ಈಗಾಗಲೇ ಶೇ. 80 ರಷ್ಟು ಸಿಬ್ಬಂದಿಗೆ ಅನುಕೂಲವಾಗಿದೆ. ಆದರೆ, ಆರ್ಥಿಕ ಸೌಲಭ್ಯದ ಲಾಭ ಹೊಸಬರಿಗೆ ಮಾತ್ರ ಸಿಗುತ್ತಿದ್ದು, ಹಳಬರಿಗೆ ಲಭಿಸಿಲ್ಲ. ಈ ತಾರತಮ್ಯ ಸರಿಪಡಿಸಲು, ಹಳಬರಿಗೆ ಹೆಚ್ಚುವರಿ ಭತ್ಯೆ ಸೇರಿ ಇನ್ನಿತರ ಸೌಲಭ್ಯ ನೀಡಲಾಗುತ್ತಿದೆ’ ಎಂದರು.

ಸಚಿವರ ಮನವಿ: ಪಾದಯಾತ್ರೆ ರದ್ದು

ಮೈಸೂರು: ಮಹದೇವಮ್ಮ ದೇವಾಲಯ ಒಡೆದಿರುವುದನ್ನು ಖಂಡಿಸಿ ನಂಜನಗೂಡಿನ ಉಚ್ಚಗಣಿಯಿಂದ ವಿಧಾನಸೌಧಕ್ಕೆ ಪಾದಯಾತ್ರೆ ಕೈಗೊಂಡಿದ್ದ ಹಿಂದೂ ಜಾಗರಣ ವೇದಿಕೆಯು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕೋರಿಕೆಯಿಂದ ಹೋರಾಟ ಕೈಬಿಟ್ಟಿದೆ.

ನಗರದ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದುರು ಮಂಗಳವಾರ ಜಮಾಯಿಸಿದ ವೇದಿಕೆಯ ಕಾರ್ಯಕರ್ತರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಆಗ ಸ್ಥಳಕ್ಕೆ ಬಂದ ಆರಗ ಜ್ಞಾನೇಂದ್ರ, ಪಾದಯಾತ್ರೆ ಕೈಬಿಡುವಂತೆ ವೇದಿಕೆಯ ಸಂಚಾಲಕ ಜಗದೀಶ್‌ ಕಾರಂತ್‌ ಅವರ ಮನವೊಲಿಸಿದರು.

‘ಕೋರ್ಟ್ ತೀರ್ಪನ್ನು ತಪ್ಪಾಗಿ ಗ್ರಹಿಸಿ ದೇಗುಲ ತೆರವುಗೊಳಿಸಲಾಗಿದೆ. ಅದಕ್ಕಾಗಿ ತಹಶೀಲ್ದಾರ್‌ ಅವರನ್ನು ವರ್ಗಾವಣೆ ಮಾಡಲಾಗಿದೆ. ದೇವಾಲಯಗಳ ಸಂರಕ್ಷಣೆಗಾಗಿ ವಿಧಾನಸಭೆಯಲ್ಲಿ ಚರ್ಚೆ ನಡೆದಿದ್ದು, ಮಸೂದೆ ಮಂಡನೆಯಾಗಿದೆ. ಪವಿತ್ರ ಸ್ಥಳಗಳನ್ನು ರಕ್ಷಿಸುವಲ್ಲಿ ಸರ್ಕಾರ ಬದ್ಧವಾಗಿದೆ. ನಿಮ್ಮ ಮಾರ್ಗದರ್ಶನ, ಸಲಹೆಗಳನ್ನು ಸರ್ಕಾರ ಕೇಳುತ್ತದೆ. ಹೋರಾಟವನ್ನು ಕೈ ಬಿಡಬೇಕು’ ಎಂದು ಸಚಿವ ಒತ್ತಾಯಿಸಿದರು.

‘ಸಚಿವರ ಭರವಸೆ ಹಿನ್ನೆಲೆಯಲ್ಲಿ ಪಾದಯಾತ್ರೆ ಕೈಬಿಡಲಾಗಿದೆ’ ಎಂದು ವೇದಿಕೆಯ ವಿಭಾಗದ ಅಧ್ಯಕ್ಷ ಲೋಹಿತ್‌ ಅರಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

****
ದತ್ತಪೀಠದಲ್ಲಿ ಅರ್ಚಕರ ನೇಮಕಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪನ್ನು ಪಾಲಿಸುತ್ತೇವೆ. ಅಲ್ಲಿ ಕಾನೂನು, ಸುವ್ಯವಸ್ಥೆ ಕಾಪಾಡುತ್ತೇವೆ.
– ಆರಗ ಜ್ಞಾನೇಂದ್ರ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT