ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2014ರ ಪ್ರೌಢಶಾಲೆಗಳ ಸಹ ಶಿಕ್ಷಕರ ನೇಮಕಾತಿ ಅಕ್ರಮ: ರಾಜಕಾರಣಿಗಳ ಹೆಸರು?

‘ಎಫ್‌ಡಿಎ ಸಿದ್ಧಪಡಿಸಿದ್ದ ಪಟ್ಟಿಗೆ ಸಹಿ’
Last Updated 27 ಸೆಪ್ಟೆಂಬರ್ 2022, 21:53 IST
ಅಕ್ಷರ ಗಾತ್ರ

ಬೆಂಗಳೂರು: 2014-15ನೇ ಸಾಲಿನ ಪ್ರೌಢಶಾಲೆಗಳ ಸಹ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿಸಲಾಗಿರುವ ಶಿಕ್ಷಣ ಇಲಾಖೆಯ ನಿರ್ದೇಶಕರು ಸೇರಿದಂತೆ ಆರು ಮಂದಿ ವಿಚಾರಣೆಯನ್ನು ಸಿಐಡಿ ಅಧಿಕಾರಿಗಳು ಮುಂದುವರಿಸಿದ್ದು, ಬಂಧಿತರಿಂದ ಹೇಳಿಕೆ ಪಡೆದುಕೊಳ್ಳುತ್ತಿದ್ದಾರೆ.

ಕರ್ನಾಟಕ ಪಠ್ಯಪುಸ್ತಕ ಸಂಘದ ನಿರ್ದೇಶಕ ಎಂ.ಪಿ. ಮಾದೇಗೌಡ, ಸಮಗ್ರ ಶಿಕ್ಷಣ ಅಭಿಯಾನ ನಿರ್ದೇಶಕಿ ಗೀತಾ, ನಿವೃತ್ತ ಜಂಟಿ ನಿರ್ದೇಶಕರಾದ ಡಿ.ಕೆ. ಶಿವಕುಮಾರ್, ಕೆ. ರತ್ನಯ್ಯ, ಜಿ.ಆರ್. ಬಸವರಾಜ್ ಹಾಗೂ ಕಂಪ್ಯೂಟರ್ ಪ್ರೋಗ್ರಾಮರ್ ನರಸಿಂಹರಾವ್ ಅವರನ್ನು ಸೋಮವಾರ ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಎಲ್ಲರೂ ಸಿಐಡಿ ಕಸ್ಟಡಿಯಲ್ಲಿದ್ದಾರೆ.

‘ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಈಗಾಗಲೇ ಪುರಾವೆಗಳನ್ನು ಸಂಗ್ರಹಿಸಲಾಗಿದೆ. ಅವುಗಳನ್ನು ಮುಂದಿಟ್ಟುಕೊಂಡೇ, ಬಂಧಿತ ಆರೋಪಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಸಹ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕಡತಗಳ ನಿರ್ವಹಣೆ ಜವಾಬ್ದಾರಿಯನ್ನು ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಕೆ.ಎಸ್. ಪ್ರಸಾದ್‌ಗೆ ವಹಿಸಲಾಗಿತ್ತು. ಜಿಲ್ಲಾವಾರು ನೇಮಕಾತಿ ಮಂಡಳಿಗಳಿಂದ ದಾಖಲೆ ಸಮೇತ ಮಾಹಿತಿ ಸಂಗ್ರಹಿಸಿದ್ದ ಪ್ರಸಾದ್, ಹೆಚ್ಚುವರಿ ಪಟ್ಟಿ ಸಿದ್ಧಪಡಿಸಿದ್ದ. ಅದುವೇ ಅಂತಿಮ ಪಟ್ಟಿಯೆಂದು ಹೇಳಿ ನಮ್ಮಿಂದ ಸಹಿ ಮಾಡಿಸಿದ್ದ’ ಎಂಬುದಾಗಿ ನಿರ್ದೇಶಕರು ಸಿಐಡಿ ಬಳಿ ಹೇಳಿರುವುದಾಗಿ ಮೂಲಗಳು ಮಾಹಿತಿ ನೀಡಿವೆ.

‘ಹುದ್ದೆಗೆ ಅರ್ಹರಲ್ಲದ ಅಭ್ಯರ್ಥಿಗಳ ಹೆಸರುಗಳನ್ನು ಹೆಚ್ಚುವರಿ ಪಟ್ಟಿಯಲ್ಲಿ ಸೇರಿಸಿದ್ದ ಮಾಹಿತಿ ನಮಗೆ ಗೊತ್ತಿರಲಿಲ್ಲ. ಹೆಚ್ಚು ಪರಿಶೀಲನೆ ಸಹ ನಡೆಸಲಿಲ್ಲ. ಎಫ್‌ಡಿಎ ಸಿದ್ಧಪಡಿಸಿದ್ದ ಪಟ್ಟಿಯೇ ನಿಜವೆಂದು ನಂಬಿ, ನೇಮಕಾತಿ ಆದೇಶ ಹಾಗೂ ಇತರೆಡೆ ಸಹಿ ಮಾಡಿದೆವು’ ಎಂಬುದಾಗಿಯೂ ನಿರ್ದೇಶಕರು ತಿಳಿಸಿರುವುದಾಗಿ ಮೂಲಗಳು ಹೇಳಿವೆ.

ನೋಟಿಸ್ ನೀಡಲು ಸಿದ್ಧತೆ: ‘ನೇಮಕಾತಿ ಪ್ರಕ್ರಿಯೆ ವೇಳೆ ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಸಲು ಕೆಲ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಪ್ರಭಾವ ಬೀರಿದ್ದರೆಂಬುದು ಗೊತ್ತಾಗಿದೆ. ಈ ಬಗ್ಗೆ ಎಫ್‌ಡಿಎ ಪ್ರಸಾದ್ ಹಾಗೂ ನಿರ್ದೇಶಕರು ಕೆಲವರ ಹೆಸರು ಹೇಳಿದ್ದಾರೆ. ಅವರೆಲ್ಲರಿಗೂ ನೋಟಿಸ್ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

‘ನಿಗದಿತ ದಿನದಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ತಿಳಿಸಲಾಗುವುದು. ಹಾಜರಾಗದಿದ್ದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದೂ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT