ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜರಂಗ ದಳದ ಮುಖಂಡನ ಮೇಲೆ ಹಲ್ಲೆ: ಶಿವಮೊಗ್ಗ ಪ್ರಕ್ಷುಬ್ಧ

ಆರೋಪಿಗಳ ಬಂಧನ -– ಇಂದು ಶಾಂತಿಸಭೆ
Last Updated 3 ಡಿಸೆಂಬರ್ 2020, 19:50 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರದ ಲಕ್ಷರ್ ಮೊಹಲ್ಲಾದ ಬಳಿಗುರುವಾರ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಬಜರಂಗ ದಳದ ಮುಖಂಡ ನಾಗೇಶ್ ಮೇಲೆ ನಾಲ್ವರು ಹಲ್ಲೆ ನಡೆಸಿದ್ದಾರೆ. ಘಟನೆಯ ಬೆನ್ನಲ್ಲೇ ಹಲವೆಡೆ ಘರ್ಷಣೆಗಳು ನಡೆದಿದ್ದು, ಪೊಲೀಸರು ಗಾಂಧಿ ಬಜಾರ್‌ನ ಎಲ್ಲ ಅಂಗಡಿಗಳನ್ನು ಬಂದ್ ಮಾಡಿಸಿದ್ದಾರೆ.

ಅಶೋಕ ರಸ್ತೆಯ ನಾಗೇಶ್ ವಾಯುವಿಹಾರಕ್ಕೆ ನಿತ್ಯವೂ ನೆಹರೂ ಕ್ರೀಡಾಂಗಣಕ್ಕೆ ಬರುತ್ತಿದ್ದರು. ಸಮಯದ ಖಚಿತ ಮಾಹಿತಿ ಇದ್ದ ದುಷ್ಕರ್ಮಿಗಳು ಮಾರ್ಗ ಮಧ್ಯೆ ಹಲ್ಲೆ ನಡೆಸಿದ್ದಾರೆ. ಮೂಗು, ಬಾಯಿ, ತಲೆಗೆ ಬಲವಾದ ಪೆಟ್ಟುಗಳು ಬಿದ್ದಿವೆ. ತಕ್ಷಣ ಅಲ್ಲಿದ್ದವರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆಯ ನಂತರ ಗಾಂಧಿ ಬಜಾರ್‌,ಆಜಾದ್ ನಗರ,ರವಿವರ್ಮ ಬೀದಿಯಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದಿದೆ. ರಾಮಣ್ಣ ಶ್ರೇಷ್ಠಿ ಪಾರ್ಕ್‌ ಬಳಿ ನಾಲ್ಕು ಕಾರು, ಕಸ್ತೂರ ಬಾ ರಸ್ತೆಯಲ್ಲಿ ಒಂದು ಆಟೊರಿಕ್ಷಾ ಜಖಂಗೊಂಡಿವೆ. ಚೋರ್ ಬಜಾರ್‌ನಲ್ಲಿ ಮೂವರು ವ್ಯಾಪಾರಿಗಳ ಮೇಲೆ ಹಲ್ಲೆ ನಡೆದಿದೆ. ಇಡೀ ಗಾಂಧಿ ಬಜಾರ್ ಸ್ತಬ್ಧವಾಗಿದೆ. ಗ್ರಾಹಕರನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಲಾಗಿದೆ.

ಪೂರ್ವವಲಯ ಐಜಿಪಿ ಎಸ್‌.ರವಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ವದಂತಿಗಳಿಗೆ ಕಿವಿಗೊಡದೇ ಶಾಂತಿ ಕಾಪಾಡುವಂತೆ ಕೋರಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ನಿಷೇಧಾಜ್ಞೆ ಜಾರಿ

ಹಲ್ಲೆ ಪ್ರಕರಣದ ನಂತರ ನಗರದ ಹಲವೆಡೆ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾದ ಕಾರಣ ಡಿ. 5ರವರೆಗೆ ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗಳಿಸಲಾಗಿದೆ. ನಿಯಮ ಮೀರಿ ಯಾರೂ ಗುಂಪು ಸೇರಬಾರದು. ಕಾನೂನು ಸುವ್ಯವಸ್ಥೆ, ಶಾಂತಿಗೆ ಭಂಗ ತರಬಾರದು ಎಂದು ತಹಶೀಲ್ದಾರ್ ಎನ್‌.ಜೆ. ನಾಗರಾಜ್ ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT