ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೈಸ್ತರ ಮೇಲೆ ದಾಳಿ 11 ತಿಂಗಳಲ್ಲಿ 39 ಪ್ರಕರಣ: ಪಿಯುಸಿಎಲ್‌ನಿಂದ ವರದಿ ಬಿಡುಗಡೆ

Last Updated 14 ಡಿಸೆಂಬರ್ 2021, 21:50 IST
ಅಕ್ಷರ ಗಾತ್ರ

ಬೆಂಗಳೂರು: ಈ ವರ್ಷದ ಜನವರಿಯಿಂದ ನವೆಂಬರ್‌ವರೆಗೆ ಚರ್ಚ್‌ಗಳು, ಪಾದ್ರಿಗಳು ಹಾಗೂ ಕ್ರೈಸ್ತ ಸಮುದಾಯದವರ ಮೇಲಿನ ದಾಳಿ ಹಾಗೂ ಹಿಂಸಾಚಾರಕ್ಕೆ ಸಂಬಂಧಿಸಿದ 39 ಪ್ರಕರಣಗಳು ರಾಜ್ಯದಲ್ಲಿ ನಡೆದಿವೆ ಎಂದು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಸಂಘಟನೆ ಹೇಳಿದೆ.

ರಾಜ್ಯದಲ್ಲಿ ಕ್ರೈಸ್ತರ ಮೇಲಿನ ಹಿಂಸಾಚಾರದ ಅಧ್ಯಯನ ನಡೆಸಿರುವ ಪಿಯುಸಿಎಲ್‌ ‘ಧರ್ಮಾಚರಣೆಯ ಅಪರಾಧೀಕರಣ’ ವರದಿಯನ್ನು ಇಲ್ಲಿ ಮಂಗಳವಾರ ಬಿಡುಗಡೆ ಮಾಡಿತು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿಯುಸಿಎಲ್ ರಾಜ್ಯ ಘಟಕದ ಅಧ್ಯಕ್ಷ ವೈ.ಜೆ.ರಾಜೇಂದ್ರ, ‘ಹುಬ್ಬಳ್ಳಿ, ಯಾದಗಿರಿ, ಬೆಂಗಳೂರು, ಕಾರವಾರ, ತಿಪಟೂರು, ರಾಮನಗರ, ಬೆಳಗಾವಿ, ಮಂಡ್ಯ ಸೇರಿದಂತೆ ರಾಜ್ಯದ ವಿವಿಧೆಡೆ ನಡೆದಿರುವ ಕ್ರೈಸ್ತರ ಮೇಲಿನ 39 ಹಿಂಸಾಚಾರಗಳಲ್ಲೂ ಹಿಂದುತ್ವವಾದಿ ಸಂಘಟನೆಗಳ ಪಾತ್ರವಿದೆ. ಪ್ರಾರ್ಥನಾ ಸಭೆಗಳನ್ನು ತಡೆಯಲು ಬಿಜೆಪಿ, ಆರ್‌ಎಸ್‌ಎಸ್‌, ಬಜರಂಗದಳ, ಹಿಂದೂ ಜಾಗರಣ ವೇದಿಕೆ ಸೇರಿ, ಕೋಮುವಾದಿ ಶಕ್ತಿಗಳು ಸ್ಥಳೀಯ ನಾಯಕರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿವೆ’ ಎಂದರು.

‘ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಕ್ರೈಸ್ತರ ಮೇಲಿನ ದಾಳಿಗೆ ಸಂಬಂಧಿಸಿದ 300ಕ್ಕೂ ಹೆಚ್ಚು ಪ್ರಕರಣಗಳನ್ನು ಎಪಿಆರ್‌ಸಿ, ಯುಸಿಎಫ್ ಹಾಗೂ ಯುನೈಟೆಡ್‌ ಅಗೇನ್ಸ್ಟ್‌ ಹೇಟ್‌ ಸಂಸ್ಥೆಗಳು ವರದಿ ಮಾಡಿದ್ದವು. ವರದಿಯಾಗದ ಪ್ರಕರಣಗಳೂ ಬಹಳಷ್ಟಿವೆ’ ಎಂದು ತಿಳಿಸಿದರು.

ವಕೀಲರಾದ ಮಾನವಿ ಅತ್ರಿ,‘ಕ್ರೈಸ್ತ ಧರ್ಮ ಪ್ರಚಾರ ವಿರೋಧಿಸಿ ಈ ದಾಳಿಗಳು ನಡೆದಿಲ್ಲ. ಬದಲಾಗಿ ಧರ್ಮದ ಆಚರಣೆಯ ಹಕ್ಕಿನ ಮೇಲೆ ನಡೆದ ದಾಳಿಗಳಿವು. ಈ ದುಷ್ಕೃತ್ಯಗಳಲ್ಲಿ ಪೊಲೀಸರ ಪಾತ್ರವೂ ಮಿತಿಮೀರಿದೆ. ಸಂತ್ರಸ್ತರ ವಿರುದ್ಧವೇ ಪೊಲೀಸರು ಮೊಕದ್ದಮೆ ದಾಖಲಿಸಿರುವುದು ಕಂಡು ಬಂದಿದೆ. ದಾಳಿ ನಡೆಸಿದವರನ್ನು ಬಂಧಿಸುವ ಬದಲು ಪೊಲೀಸರು ಪಾದ್ರಿಗಳನ್ನು ಹಾಗೂ ಕ್ರೈಸ್ತ ಧರ್ಮದ ಅನುಯಾಯಿಗಳನ್ನೇ ಬಂಧಿಸಿದ್ದಾರೆ. ಪ್ರಾರ್ಥನೆ ಸ್ಥಗಿತಗೊಳಿಸುವಂತೆಯೂ ಸೂಚನೆ ನೀಡಿದ್ದಾರೆ.ಬಿಜೆಪಿ ಶಾಸಕರೊಬ್ಬರು ಹಾಗೂ ಸಚಿವರೊಬ್ಬರು ಕ್ರೈಸ್ತರ ಮೇಲೆ ದಬ್ಬಾಳಿಕೆ ಮಾಡಿದ ಪೊಲೀಸರಿಗೆ ಬೆಂಬಲಕ್ಕೆ ನಿಂತಿದ್ದರು’ ಎಂದರು.

ನೆರೆ ಹೊರೆಯವರು, ಪೊಲೀಸ್‌ ಅಧಿಕಾರಿಗಳು, ಹಿಂದುತ್ವವಾದಿ ನಾಯಕರು ನಡೆಸಿರುವ ದ್ವೇಷಾಪರಾಧಗಳಿಂದ ಕ್ರೈಸ್ತರ ಜೀವನೋಪಾಯ, ಆಹಾರ ಭದ್ರತೆ ಹಾಗೂ ಸಾಮಾನ್ಯ ಯೋಗಕ್ಷೇಮದ ಮೇಲೂ ತೀವ್ರ ಪರಿಣಾಮ ಉಂಟಾಗಿದೆ. ಈ ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಮಾನವ ಹಕ್ಕುಗಳ ಆಯೋಗ ಹಾಗೂ ಅಲ್ಪಸಂಖ್ಯಾತರ ಆಯೋಗ ಕ್ರಮ ಕೈಗೊಳ್ಳಬೇಕು. ‘ಬಲವಂತದ ಮತಾಂತರ’ ಎಂಬ ವೈಭವೀಕೃತ ಸುದ್ದಿ ಬಿತ್ತರಿಸುವುದನ್ನು ಮೊದಲು ನಿಲ್ಲಿಸಬೇಕು ಎಂದು ಪಿಯುಸಿಎಲ್‌ ಒತ್ತಾಯಿಸಿದೆ.

‘ಮತಾಂತರ ನಿಷೇಧ ಮಸೂದೆ ಬೇಡ’
‘ರಾಜ್ಯದಲ್ಲಿಈಗಲೇ ಕ್ರೈಸ್ತರ ಮೇಲೆ ವಾರಕ್ಕೊಂದಾದರೂ ದಾಳಿಗಳು ನಡೆಯುತ್ತಿವೆ. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಾದರೆ, ಅದು ಕ್ರೈಸ್ತರಿಗೆ ಮತ್ತಷ್ಟು ತೊಂದರೆ ನೀಡಲು ಆಕ್ರಮಣಕಾರರಿಗೆ ಪೂರ್ಣಾಧಿಕಾರ ನೀಡಲಿದೆ. ವಿಧಾನ ಮಂಡಲ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆಯನ್ನು ಯಾವ ಕಾರಣಕ್ಕೂ ಸರ್ಕಾರ ಮಂಡಿಸಬಾರದು’ ಎಂದುವೈ.ಜೆ.ರಾಜೇಂದ್ರ ಆಗ್ರಹಿಸಿದರು.

*

ಕ್ರೈಸ್ತರ ಮೇಲಿನ ಹಿಂಸೆಗಳಲ್ಲಿ ಭಾಗಿಯಾಗುವ ಪೊಲೀಸರು ಅಸಹಿಷ್ಣುತೆ, ಧರ್ಮಾಂಧ ಸಂಸ್ಕೃತಿಯನ್ನು ಉತ್ತೇಜಿಸುತ್ತಿದ್ದಾರೆ.
-ಸುಜಾಯತ್‌ಉಲ್ಲಾ, ಪಿಯುಸಿಎಲ್‌ ಬೆಂಗಳೂರು ನಗರ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT