ಸೋಮವಾರ, ಆಗಸ್ಟ್ 8, 2022
23 °C
ಸಿ.ಎಂಗೆ ಬಹಿರಂಗ ಪತ್ರ

ಮುಸ್ಲಿಂ, ಕ್ರೈಸ್ತ, ದಲಿತರ ಮೇಲೆ ಹಲ್ಲೆ ಆಘಾತಕಾರಿ: ಬೊಮ್ಮಾಯಿಗೆ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಜ್ಯದಲ್ಲಿ ಮುಸ್ಲಿಂ, ಕ್ರೈಸ್ತ ಮತ್ತು ದಲಿತರ ಮೇಲೆ ನಾನಾ ರೀತಿಯ ಹಲ್ಲೆಗಳು ನಡೆಯುತ್ತಿರುವುದು ನಮಗೆ ಆಘಾತ ಮೂಡಿಸಿದೆ’ ಎಂದು ಚಿಂತಕರು, ಲೇಖಕರು, ಹೋರಾಟಗಾರರನ್ನು ಒಳಗೊಂಡ 76 ಮಂದಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

‘ಕಳೆದ ಒಂದು ತಿಂಗಳಿಂದ ತಮ್ಮನ್ನು ಭೇಟಿ ಮಾಡಿ ಈ ಪತ್ರ ನೀಡಲು ತಮ್ಮ ಕಚೇರಿಯ ಮೂಲಕ ಪ್ರಯತ್ನಿಸಿದ್ದೆವು. ಅದು ವಿಫಲವಾಗಿದ್ದರಿಂದ ಪತ್ರ ಬರೆಯುತ್ತಿದ್ದೇವೆ’ ಎಂದೂ ಅವರು ಹೇಳಿದ್ದಾರೆ.

ಎಂ.ಎಸ್.ಸತ್ಯು, ರಾಮಚಂದ್ರ ಗುಹಾ, ಗಿರೀಶ್‌ ಕಾಸರವಳ್ಳಿ, ಶಶಿ ದೇಶಪಾಂಡೆ, ವೈದೇಹಿ, ಎಸ್‌.ಜಿ. ವಾಸುದೇವ್, ವಿವೇಕ್ ಶಾನುಭಾಗ, ಕೇಶವ ಮಳಗಿ, ಯಲ್ಲಪ್ಪರೆಡ್ಡಿ, ನಾಗೇಶ ಹೆಗಡೆ, ಶರತ್ ಅನಂತಮೂರ್ತಿ, ಕವಿತಾ ಲಂಕೇಶ್‌,  ನಿವೃತ್ತ ಐಎಎಸ್‌, ಐಎಫ್‌ಎಸ್‌, ಐಪಿಎಸ್‌ ಅಧಿಕಾರಿಗಳಾದ ರವಿ ಜೋಷಿ, ಚಿರಂಜೀವಿ ಸಿಂಗ್, ಅಜಯ ಕುಮಾರ್ ಸಿಂಗ್‌, ಪಾಸ್ಕಲ್ ನಜರೆತ್‌, ಟಿ.ಆರ್. ರಘುನಂದನ್‌, ವಿಜಯಲತಾ ರೆಡ್ಡಿಸೇರಿದಂತೆ 76 ಜನ ಪತ್ರಕ್ಕೆ ಸಮ್ಮತಿ ಸೂಚಿಸಿದ್ದಾರೆ. ಲೇಖಕರು, ವಿಜ್ಞಾನಿಗಳು, ಕಲಾವಿದರು, ಛಾಯಾಗ್ರಾಹಕರು, ಪತ್ರಕರ್ತರು ಈ ಪಟ್ಟಿಯಲ್ಲಿದ್ದಾರೆ.

‘ಕರ್ನಾಟಕದಲ್ಲಿ ಶಾಂತಿ ಮತ್ತು ಸೌಹಾರ್ದ ಮೂಡಿಸಿ, ನಾಡನ್ನು ಸರ್ವಜನಾಂಗದ ಶಾಂತಿಯ ತೋಟವಾಗಿ ಮರುಸ್ಥಾಪಿಸಬೇಕು. ಇಲ್ಲವಾದರೆ ರಾಜ್ಯ ಪ್ರಗತಿಯತ್ತ ಸಾಗುವುದರ ಬದಲು ಸರ್ಕಾರದ ನಿಷ್ಕ್ರಿಯತೆಯಿಂದ ಅಧಃಪತನಕ್ಕೆ ಸಾಗಲಿದೆ’ ಎಂದು ಅವರು ಎಚ್ಚರಿಸಿದ್ದಾರೆ.

‘ದಿಗಿಲು ಹುಟ್ಟಿಸುವ ಭಾರತ’ ಮತ್ತು ‘ಕಳಂಕಿತ ಭಾರತ’ದ ವಾತಾವರಣದಲ್ಲಿ ‘ಭಾರತದಲ್ಲಿ ತಯಾರಿಸು’(ಮೇಕ್‌ ಇನ್ ಇಂಡಿಯಾ) ಎನ್ನುವ ಘೋಷ ವಾಕ್ಯವನ್ನು ಸಾಕಾರಗೊಳಿಸುವುದು ಸಾಧ್ಯವಿಲ್ಲದ ಮಾತು’ ಎಂದಿದ್ದಾರೆ.

ಸಂಕುಚಿತ ಮತೀಯವಾದಿಗಳು, ದ್ವೇಷಪೂರಿತ ವ್ಯಕ್ತಿಗಳು ಧರ್ಮ ಮತ್ತು ಜಾತಿಯ ಆಧಾರದಲ್ಲಿ ಅಲ್ಪಸಂಖ್ಯಾತರನ್ನು ಪ್ರತ್ಯೇಕಿಸಿ ದೂರವಿಡುವ ಮತ್ತು ಅವರನ್ನು ದಮನಗೊಳಿಸುವ ಪ್ರಯತ್ನ ನಡೆಸಿದ್ದಾರೆ. ಚುನಾಯಿತ ಪ್ರತಿನಿಧಿಗಳೂ ಸೇರಿ ಜವಾಬ್ದಾರಿ ಹುದ್ದೆಗಳಲ್ಲಿರುವ ಹಲವರು ಅಲ್ಪಸಂಖ್ಯಾತ ಸಮುದಾಯದವರಲ್ಲಿ ಭೀತಿ ಮೂಡಿಸುತ್ತಿದ್ದಾರೆ. ಈ ಸಮುದಾಯಗಳ ಮೇಲೆ ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರ ಹಾಕಿ ಅವರನ್ನು ದ್ವಿತೀಯ ದರ್ಜೆ ನಾಗರಿಕರಂತೆ ಪರಿಗಣಿಸಿ ಅವರ ಸಾಂವಿಧಾನಿಕ ಹಕ್ಕುಗಳನ್ನು ಹತ್ತಿಕ್ಕುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

ಈ ಎಲ್ಲ ಬೆಳವಣಿಗೆಗಳಿಂದಾಗಿ ರಾಜ್ಯದ ಪ್ರಗತಿ ಕುಂಠಿತಗೊಳ್ಳಲಿದೆ.ರಾಜ್ಯದ ಕೀರ್ತಿಗೂ ಭಂಗ ಬರಲಿದೆ.
ಹೂಡಿಕೆದಾರರು ಮತ್ತು ಉದ್ಯಮಿಗಳು ರಾಜ್ಯದ ಮೇಲೆ ನಂಬಿಕೆ ಕಳೆದುಕೊಳ್ಳಲಿದ್ದಾರೆ. ನಾಗರಿಕರಲ್ಲಿ ಅಪ
ನಂಬಿಕೆ ಮತ್ತು ಅಸುರಕ್ಷಿತ ಭಾವನೆ ಮೂಡಿಸಿ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ ಎಂದಿದ್ದಾರೆ.

ಪ್ರಮುಖ ಒತ್ತಾಯಗಳು:

*ಪೊಲೀಸ್‌ ಪಡೆಯು ಸಾಂವಿಧಾನಿಕ ಕರ್ತವ್ಯಕ್ಕೆ ಬದ್ಧವಾಗಿ ಕಾನೂನು ಪಾಲನೆಯನ್ನು ಎತ್ತಿಹಿಡಿದು ಸಮಾಜದ ದುರ್ಬಲ ವರ್ಗದ ನಾಗರಿಕರ ರಕ್ಷಣೆ ಮಾಡಬೇಕು. ಮತೀಯವಾದಿ ಮತ್ತು ಜಾತಿವಾದಿ ಅಪರಾಧಗಳಿಗೆ ತುತ್ತಾಗುವ ನಾಗರಿಕರಿಗೆ ಪೂರ್ಣ ನ್ಯಾಯ ದೊರಕಬೇಕು.

*ಕೋಮು ಗಲಭೆಗಳಿಂದ ಹಿಂಸೆ, ಸಾವು ಮತ್ತು ಜೀವನ ನಷ್ಟವಾದಾಗ ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ವಿಫಲರಾಗುವ ಅಧಿಕಾರಿಗಳ ವಿರುದ್ಧ ವಿಶೇಷವಾಗಿ ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತ ಮತ್ತು ಪೊಲೀಸ್‌ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.

* ಅಲ್ಪಸಂಖ್ಯಾತರ ವಿರುದ್ಧ ಸಾಮಾಜಿಕ, ಆರ್ಥಿಕ ಬಹಿಷ್ಕಾರದ ಕರೆ ನೀಡಿ ಸಮಾಜದ ಸ್ವಾಸ್ತ್ಯ ಕೆಡಿಸುತ್ತಿರುವ ವ್ಯಕ್ತಿಗಳ ವಿರುದ್ಧ ಕಠಿಣವಾಗಿ ಕಾನೂನು ಕ್ರಮ ತೆಗೆದುಕೊಳ್ಳಬೇಕು. ದೈಹಿಕ ಹಿಂಸೆಗೆ ಪ್ರಚೋದನೆ ನೀಡುವಂತ ಪ್ರವೃತ್ತಿಗೆ ತಡೆಯೊಡ್ಡಬೇಕು.

* ಸಾಮಾಜಿಕ ಜಾಲತಾಣಗಳು, ಇತರ ಮಾಧ್ಯಮಗಳು ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಸುಳ್ಳು ಸುದ್ದಿ, ಗಾಳಿ ಸುದ್ದಿ ಹಬ್ಬಿಸುವ ಕೃತ್ಯ ನಡೆಯುತ್ತಿದೆ. ಇಂತಹ ಅಪರಾಧಗಳನ್ನು ಎಸಗುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು