ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕಾಯತ್‌ ಮೇಲೆ ಹಲ್ಲೆ ನಡೆಸಿದಾತ ಸನ್ನಡತೆ ಮೇಲೆ ಬಿಡುಗಡೆಯಾಗಿದ್ದ ಕೊಲೆ ಆರೋಪಿ

Last Updated 1 ಜೂನ್ 2022, 3:19 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ಕಿಸಾನ್‌ ಒಕ್ಕೂಟದ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ (55) ಮೇಲೆ ಮೈಕ್‌ನಿಂದ ಹಲ್ಲೆ ಮಾಡಿದ ಆರೋಪದಡಿ ಬಂಧಿಸಲಾಗಿರುವ ಶಿವಕುಮಾರ್ (50), ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಸನ್ನಡತೆ ಆಧಾರದಲ್ಲಿ ಬಿಡುಗಡೆಯಾಗಿದ್ದ ಸಂಗತಿ ಪೊಲೀಸರ ತನಿಖೆಯಿಂದ ಗೊತ್ತಾಗಿದೆ

ನಗರದ ಗಾಂಧಿಭವನ ಸಭಾಭವನದಲ್ಲಿ ಸೋಮವಾರ (ಮೇ 30) ಆಯೋಜಿಸಿದ್ದ ರೈತ ಮುಖಂಡರ ಪತ್ರಿಕಾಗೋಷ್ಠಿಯಲ್ಲಿ ರಾಕೇಶ್ ಮೇಲೆ ಹಲ್ಲೆ ಮಾಡಿ, ಕಪ್ಪು ಮಸಿ ಎರಚಿ ‘ಮೋದಿ... ಮೋದಿ...’ ಘೋಷಣೆ ಕೂಗಲಾಗಿತ್ತು. ಈ ಕೃತ್ಯ ಎಸಗಿದ್ದ ಆರೋಪದಡಿ ಭಾರತ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಭರತ್ ಶೆಟ್ಟಿ, ಶಿವಕುಮಾರ್ ಹಾಗೂ ಪ್ರದೀಪ್ ಎಂಬುವರನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದರು.

‘ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಮಂಗಳವಾರ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ 6 ದಿನ ಕಸ್ಟಡಿಗೆ ಪಡೆಯಲಾಗಿದೆ. ಅವರ ಪೂರ್ವಾಪರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಹಾಸನದಲ್ಲಿ ಕೊಲೆ: ‘ಪತ್ರಿಕಾಗೋಷ್ಠಿ ವೇಳೆ ವೇದಿಕೆಗೆ ನುಗ್ಗಿದ್ದ ಆರೋಪಿ ಶಿವಕುಮಾರ್, ರಾಕೇಶ್ ಅವರ ಮೇಲೆ ಹಲ್ಲೆ ಮಾಡಿದ್ದ. ಕೃತ್ಯ ತಡೆದಿದ್ದ ರೈತ ಸಂಘಟನೆ ಕಾರ್ಯಕರ್ತರಿಗೂ ಕುರ್ಚಿಯಿಂದ ಹೊಡೆದಿದ್ದ. ಇದ ರಿಂದಾಗಿ ಪರಸ್ಪರ ಮಾರಾಮಾರಿ ನಡೆದಿತ್ತು. ಆರೋಪಿ ಶಿವಕುಮಾರ್, ಹಾಸನದಲ್ಲಿ ನಡೆದಿದ್ದ ವ್ಯಕ್ತಿಯೊಬ್ಬರ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ. ಆರೋಪ ಸಾಬೀತಾಗಿದ್ದರಿಂದ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಕೆಲ ವರ್ಷ ಜೈಲಿನಲ್ಲಿದ್ದ ಆರೋಪಿ, ಸನ್ನಡತೆ ಆಧಾರದಲ್ಲಿ 2015ರಲ್ಲಿ ಬಿಡುಗಡೆಯಾಗಿದ್ದ.’ ಎಂದು ಪೊಲೀಸರು ತಿಳಿಸಿದರು.

‘ಜೈಲಿನಿಂದ ಹೊರಬಂದ ನಂತರ ಸಹೋದರಿ ಜೊತೆ ಸಂಘಟನೆಯೊಂದರಲ್ಲಿ ಸಕ್ರಿಯನಾಗಿದ್ದ. ಭರತ್ ಶೆಟ್ಟಿ ಹಾಗೂ ಇತರರ ಜೊತೆ ಒಡನಾಟ ಹೊಂದಿ, ಹಲವು ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಿದ್ದ. ಈತ ಮತ್ತಷ್ಟು ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದ ಮಾಹಿತಿ ಇದ್ದು, ಈ ಬಗ್ಗೆ ತನಿಖೆ ಮುಂದುವರಿಸಲಾಗಿದೆ. ‘ಇನ್ನೊಬ್ಬ ಆರೋಪಿ ಪ್ರದೀಪ್, ಕ್ಯಾಬ್ ಚಾಲಕ. ಸಂಘಟನೆಯೊಂದರಲ್ಲಿ ಸಕ್ರಿಯನಾಗಿದ್ದ. ಆತನೇ ರಾಕೇಶ್ ಹಾಗೂ ಇತರರಿಗೆ ಮಸಿ ಎರಚಿದ್ದ. ಆರೋಪಿಗಳ ಜೊತೆಯಲ್ಲಿ ಕೆಲ ಮಹಿಳೆಯರು ಇದ್ದರು. ಅವರೆಲ್ಲ ತಲೆಮರೆಸಿಕೊಂಡಿದ್ದಾರೆ’ ಎಂದರು.

‘ಕನ್ನಡ ಮಾತನಾಡಲಿಲ್ಲವೆಂಬ ಕಾರಣಕ್ಕೆ ಹಲ್ಲೆ ಮಾಡಿ, ಮಸಿ ಎರಚಿದೆವು’ ಎಂಬುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಆದರೆ, ಇದು ದಿಕ್ಕು ತಪ್ಪಿಸುವ ಹೇಳಿಕೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT