ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಪರಂಪರೆ ಕುಬ್ಜಗೊಳಿಸುವ ಯತ್ನ: ಆತಂಕ ವ್ಯಕ್ತಪಡಿಸಿದ ಏಳು ಸಾಹಿತಿಗಳು

ಸಾಹಿತಿಗಳ ಆಕ್ರೋಶ l ಮತ್ತಷ್ಟು ಲೇಖಕರಿಂದ ಪ್ರತಿರೋಧ; ಕವಿತೆ, ಕತೆ ವಾಪಸ್‌
Last Updated 31 ಮೇ 2022, 20:37 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ಸರ್ಕಾ ರವು‍ಪಠ್ಯ ಪುಸ್ತಕಗಳ ಪರಿಷ್ಕರಣೆಗೆ ಸಮಿತಿ ರಚಿಸಿ, ಶಾಲಾ ಪಠ್ಯಗಳನ್ನು ಕೇಸರೀಕರಣಗೊಳಿಸುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿರುವ ಏಳುಜನ ಸಾಹಿತಿಗಳು, ಲೇಖಕರು ತಮ್ಮ ಪಠ್ಯದ ಬೋಧನೆಗೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆದಿದ್ದಾರೆ.

ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಪತ್ರ ಬರೆದಿರುವ ಮೂಡ್ನಾಕೂಡು ಚಿನ್ನಸ್ವಾಮಿ, ‘ಪಠ್ಯಗಳನ್ನು ಕೇಸರೀಕರಣಗೊಳಿಸುತ್ತಿರುವ ಬಗ್ಗೆ ಕನ್ನಡ ಸಾರಸ್ವತ ಲೋಕ ವಿಚಲಿತಗೊಂಡಿದೆ. ಬಸವಣ್ಣವರ ಬಗ್ಗೆ ತಪ್ಪು ಮಾಹಿತಿ, ಕುವೆಂಪು ಅವರನ್ನು ಅವಮಾನಿಸುವುದು ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಮಾಡುವ ಅಪಚಾರ. ಸ್ವಸ್ಥ ಸಮಾಜಕ್ಕಾಗಿ ಮುಂದಿನ ಪೀಳಿಗೆಯನ್ನು ತಯಾರು ಮಾಡುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಕ್ಷೇತ್ರ ಅನವಶ್ಯಕ ವಿದ್ಯಮಾನಗಳಿಂದ ದಾಳಿಗೆ ಒಳಗಾಗಿರುವುದು ವಿಷಾದನೀಯ. ಪ್ರಗತಿಪರತೆಯನ್ನು ಪ್ರತಿಪಾದಿಸುವವರನ್ನು ಎಡಪಂಥೀಯರು ಎಂದು ದೂರುವುದು ಆರೋಗ್ಯಕರ ಸಮಾಜದ ಲಕ್ಷಣವಲ್ಲ. ಈ ಹಿನ್ನೆಲೆಯೊಳಗೆ ಐದನೇ ತರಗತಿಗೆ ಪಠ್ಯವಾಗಿರುವ ‘ನನ್ನ ಕವಿತೆಗೆ’
ಎಂಬ ಪದ್ಯಕ್ಕೆ ನೀಡಿರುವ ಅನುಮತಿ ವಾಪಸ್ ಪಡೆಯುತ್ತಿದ್ದೇನೆ’ ಎಂದು ಪ್ರತಿಪಾದಿಸಿದ್ದಾರೆ.

‘ಇತ್ತೀಚೆಗೆ ನಡೆಯುತ್ತಿರುವ ಅನಾರೋಗ್ಯಕರ ಬೆಳವಣಿಗೆಯಿಂದ ತೀವ್ರ ಅಸಮಾಧಾನವಾಗಿದೆ. ಈ ಕಾರಣಕ್ಕೆ 10ನೇ ತರಗತಿಯ ನುಡಿಕನ್ನಡ ತೃತೀಯ ಭಾಷಾ ಕನ್ನಡ ಪಠ್ಯಪುಸ್ತಕದಲ್ಲಿರುವ ‘ಹೀಗೊಂದು ಟಾಪ್ ಪ್ರಯಾಣ’ ಎಂಬ ಲಲಿತ ಪ್ರಬಂಧಕ್ಕೆ ನೀಡಿದ ಅನುಮತಿ ವಾಪಸ್ ಪಡೆಯುತ್ತಿದ್ದೇನೆ’ ಎಂದು ಲೇಖಕ ಈರಪ್ಪ ಎಂ. ಕಂಬಳಿ ಅವರು ಸಚಿವ ನಾಗೇಶ್‌ಗೆ ಪತ್ರ ಬರೆದಿದ್ದಾರೆ.

‘ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ಬಸವಣ್ಣ, ಕುವೆಂಪುರವರ ಘನತೆಯನ್ನು ಕುಗ್ಗಿಸಿ ಅವಮಾನಿಸಿದೆ. ಈ ಸಂಕುಚಿತ ಧೋರಣೆಯ ಸಮಿತಿಯನ್ನು ರದ್ದುಪಡಿಸಬೇಕು. ಇಲ್ಲದಿದ್ದರೆ 8ನೇ ತರಗತಿಯ ಕನ್ನಡ ಪಠ್ಯದಲ್ಲಿರುವ ‘ಬಿಳಿದಾಳೆಯ ಆನೆಗಳು’ ಎಂಬ ನನ್ನ ಬರಹವನ್ನು ಪರಿಷ್ಕೃತಿ ಪಠ್ಯದಲ್ಲಿ ಸೇರಿಸಲು ಒಪ್ಪಿಗೆ ನೀಡುವುದಿಲ್ಲ’ ಎಂದು ಪತ್ರಕರ್ತ ಪಾರ್ವತೀಶ ಬಿಳಿದಾಳೆ ಅವರು ಸಚಿವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

‘ಪರಿಷ್ಕರಣೆ ಸಮಿತಿ ಅಧ್ಯಕ್ಷರು ಕುವೆಂಪು ಅವರನ್ನು ಗೇಲಿ ಮಾಡಿದ್ದಾರೆ’ ಎಂದಿರುವ ನಿವೃತ್ತ ಪ್ರಾಂಶುಪಾಲ ಕೆ.ಎಸ್. ಮಧುಸೂದನ್, ಒಂಬತ್ತನೆ ತರಗತಿಯ ದ್ವಿತೀಯ ಭಾಷಾ ಕನ್ನಡ ಪಠ್ಯಪುಸ್ತಕ ರಚನಾ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕತೆ ಹಿಂಪಡೆದ ಬೊಳುವಾರು

‘ಐದನೇ ತರಗತಿಯ ಪರಿಷ್ಕೃತ ಪಠ್ಯಪುಸ್ತಕದಲ್ಲಿ ‘ಸುಳ್ಳು ಹೇಳಬಾರದು’ ಎಂಬ ನನ್ನ ಕತೆ ಇದೆ. ಪರಿಷ್ಕೃತಗೊಳ್ಳಲಿರುವ ಇತರೆ ಕೆಲವು ಪಠ್ಯದಲ್ಲಿರುವ ಆಶಯಗಳು ನನ್ನ ಕತೆಯ ಆಶಯಕ್ಕೆ ಸರಿಹೊಂದದಿರುವ ಸಾಧ್ಯತೆಗಳಿವೆ. ಇದರಿಂದ ನಮ್ಮ ಪುಟ್ಟಮಕ್ಕಳು ಗೊಂದಲಕ್ಕೆ ಒಳಗಾಗುವ ಸಾಧ್ಯತೆಗಳುಂಟು. ನನ್ನ ಕತೆಯನ್ನು ಕಿತ್ತುಹಾಕಿ, ಪರಿಷ್ಕೃತ ಪಠ್ಯದ ಆಶಯಗಳಿಗೆ ಸರಿಹೊಂದುವ ಬೇರೊಂದು ಪಠ್ಯವನ್ನು ಸೇರಿಸಿಕೊಳ್ಳಿ’ ಎಂದು ಸಾಹಿತಿ ಬೊಳುವಾರು ಮಹಮ್ಮದ್ ಕುಂಞಿ ಅವರು ಸಚಿವ ಬಿ.ಸಿ. ನಾಗೇಶ್ ಅವರಲ್ಲಿ ಮನವಿ ಮಾಡಿದ್ದಾರೆ.

ಕವಿತೆ ಬಳಕೆಗೆ ರೂಪ ನಕಾರ

‘ಒಂಬತ್ತನೆಯ ತರಗತಿ ತೃತೀಯ ಭಾಷಾ ಕನ್ನಡ ಪಠ್ಯದಿಂದ ‘ಅಮ್ಮನಾಗುವುದೆಂದರೆ’ ಕವಿತೆ ಕೈ ಬಿಡಬೇಕು’ ಎಂದು ಲೇಖಕಿ ರೂಪ ಹಾಸನ ಅವರು ಸಚಿವ ನಾಗೇಶ್‌ ಅವರಿಗೆ ಮನವಿ ಮಾಡಿದ್ದಾರೆ.

‘ಪಠ್ಯಪುಸ್ತಕಗಳು ಆಳುವ ಪಕ್ಷದ ತತ್ವ, ಸಿದ್ಧಾಂತಕ್ಕೆ ಅನುಗುಣವಾಗಿ ಮರುಪರಿಷ್ಕರಣೆಗೊಂಡಿವೆ. ಪಠ್ಯಬಳಕೆಗೆ ನೀಡಿದ್ದ ಅನುಮತಿಯನ್ನು ಕೆಲವು ಹಿರಿಯ ಲೇಖಕರು ಹಿಂಪಡೆದು ಸಾತ್ವಿಕ ಪ್ರತಿರೋಧ ತೋರಿದ್ದಾರೆ. ತಪ್ಪನ್ನು ಸರಿಪಡಿಸಿ, ತಕ್ಷಣವೇ ಕ್ರಮ ಕೈಗೊಳ್ಳಬೇಕಾದ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಮರು ಪಠ್ಯಪರಿಷ್ಕರಣಾ ಸಮಿತಿಯಲ್ಲಿ ಮಹಿಳೆಯರಿಲ್ಲ. ಹತ್ತನೇ ತರಗತಿ ಕನ್ನಡ ಪಠ್ಯದಲ್ಲಿ ಯಾವ ಲೇಖಕಿಯ ಗದ್ಯ-ಪದ್ಯವೂ ಇಲ್ಲ. ಇದು ಸರ್ಕಾರವು ಮಹಿಳಾ ಸಂಕುಲಕ್ಕೆ ಮಾಡಿದ ಅವಮಾನ’ ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಒಂದು ಸೋಜಿಗದ ಪದ್ಯ ಕೈಬಿಡಿ: ತಾಳ್ಯ

‘ಶಿಕ್ಷಣ ಕ್ಷೇತ್ರದ ಮೇಲೆ ನಡೆಯುತ್ತಿರುವ ಸಾಂಸ್ಕೃತಿಕ ಹಲ್ಲೆ ಮಿತಿ ಮೀರುತ್ತಿದ್ದು, ಈ ಹಿನ್ನೆಲೆಯಲ್ಲಿ ಆರನೇ ತರಗತಿಯ ದ್ವಿತೀಯ ಭಾಷಾ ಪಠ್ಯಪುಸ್ತಕದಲ್ಲಿರುವ ನನ್ನ ಕವಿತೆ ‘ಒಂದು ಸೋಜಿಗದ ಪದ್ಯ’ವನ್ನು ವಾಪಸ್ ಪಡೆಯುತ್ತಿದ್ದೇನೆ’ ಎಂದು ಕವಿ ಚಂದ್ರಶೇಖರ ತಾಳ್ಯ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಶಿಕ್ಷಣ ಸಚಿವರಿಗೆ ಪತ್ರ ಬರೆದಿರುವ ಅವರು, ‘ಅಸಾಂವಿಧಾನಿಕ ನಿರ್ಧಾರಗಳಿಂದ ಇಡೀ ಶೈಕ್ಷಣಿಕ ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಈ ಅನೈತಿಕ ನಡೆ ನನ್ನಂಥ ಲೇಖಕನನ್ನು ಅಧೀರರನ್ನಾಗಿ ಮಾಡುತ್ತಿದೆ. ಇದು ಕನ್ನಡ ಪರಂಪರೆಯನ್ನು ಕುಬ್ಜಗೊಳಿಸುವ ಅಕ್ರಮ ನಡೆ. ಪಠ್ಯ ಪರಿಷ್ಕರಣೆಯ ನೆಪದಲ್ಲಿ ನಡೆಯುತ್ತಿರುವ ಸಂಸ್ಕೃತಿ ತಿರುಚೀಕರಣ ನಮ್ಮ ಸಂಸ್ಕೃತಿಯನ್ನೇ ವಿರೂಪಗೊಳಿಸುವಂತಹದು’ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ಕವಿತೆ ವಾಪಸ್ ಪಡೆದ ಸರಜೂ ಕಾಟ್ಕರ್

ಈಗಿನ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಹಾಗೂ ಅದರ ನಿಲುವುಗಳ ಸಾಕಷ್ಟು ಚರ್ಚೆ ಆಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ಮತ್ತು ಜನಸಮೂಹದಲ್ಲಿ ಗೊಂದಲ ಮೂಡಿದೆ. ಹೀಗಾಗಿ ಒಂಬತ್ತನೇ ತರಗತಿ ಕನ್ನಡ ತೃತೀಯ ಭಾಷೆ ಪಠ್ಯದಲ್ಲಿ ‘ಶಬ್ದಗಳು’ ಎಂಬ ನನ್ನ ಕವಿತೆ ಇತ್ತು. ನನ್ನ ನಂಬುಗೆ ಹಾಗೂ ಇಷ್ಟು ವರ್ಷದ ಬದ್ಧತೆಯ ಕಾರಣಕ್ಕೆ ನನ್ನ ಕವಿತೆಗೆ ನೀಡಿದ್ದ ಒಪ್ಪಿಗೆಯನ್ನು ಹಿಂಪಡೆಯುತ್ತಿದ್ದೇನೆ ಎಂದು ಕವಿ, ಪತ್ರಕರ್ತ ಸರಜೂ ಕಾಟ್ಕರ್ ಅವರು ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT