ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿಶಿಣದ ಗಣಪತಿ ತಯಾರಿಸುವವರಿಗೆ ಬಹುಮಾನ: ಸಚಿವ ಆನಂದ್‌ ಸಿಂಗ್‌

Last Updated 27 ಆಗಸ್ಟ್ 2021, 11:05 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ವರ್ಷ 10 ಲಕ್ಷ ಅರಿಸಿನ ಗಣೇಶ ನಿರ್ಮಿಸಿ ವಿಶ್ವ ದಾಖಲೆ ಬರೆಯಲು ಮುಂದಾಗಿದ್ದು, ಇದಕ್ಕಾಗಿ ಅಭಿಯಾನವನ್ನೂ ಆರಂಭಿಸಿದೆ. ಇದರಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ ವಿಶೇಷ ಬಹುಮಾನ ನೀಡಲು ನಿರ್ಧರಿಸಲಾಗಿದೆ’ ಎಂದು ಸಚಿವ ಆನಂದ್‌ ಸಿಂಗ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು ‘ಅರಿಸಿನ ಗಣಪತಿ ತಯಾರಿಕೆ ಮತ್ತು ಅದರ ಮಹತ್ವದ ಕುರಿತ ವಿಡಿಯೊವನ್ನು ಮಂಡಳಿಯ ಆ್ಯಪ್‌ನಲ್ಲಿ ಹಾಕಲಾಗಿತ್ತು. ಅದನ್ನು ಈವರೆಗೆ ಒಟ್ಟು 1 ಕೋಟಿ ಜನ ವೀಕ್ಷಣೆ ಮಾಡಿದ್ದಾರೆ. ಈ ಪೈಕಿ ಗಣಪತಿ ತಯಾರಿಕೆಯಲ್ಲಿ ಎಷ್ಟು ಮಂದಿ ತೊಡಗಿಕೊಂಡಿದ್ದಾರೆ ಎಂಬುದು ಗೊತ್ತಿಲ್ಲ. ಈ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಸಾರ್ವಜನಿಕರನ್ನು ಉತ್ತೇಜಿಸಬೇಕು. ಹೀಗಾಗಿ ಅತ್ಯುತ್ತಮವಾಗಿ ಗಣೇಶ ಮೂರ್ತಿ ನಿರ್ಮಿಸುವ ಮೂವರಿಗೆ ಬಹುಮಾನ ನೀಡಿ ಸನ್ಮಾನಿಸಲು ತೀರ್ಮಾನಿಸಿದ್ದೇವೆ’ ಎಂದರು.

‘ನಾಗರಿಕರು ತಾವು ತಯಾರಿಸಿದ ಅರಿಸಿನ ಗಣಪತಿ ಮೂರ್ತಿಯ ಫೋಟೊ ತೆಗೆದು ಅದನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ಆ್ಯಪ್‌ಗೆ ಅಪ್‌ಲೋಡ್‌ ಮಾಡಬೇಕು. ಈ ಪೈಕಿ ಅತ್ಯುತ್ತಮವಾದ ಮೂರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ’ ಎಂದು ತಿಳಿಸಿದರು.

‘ರಾಗಿ, ಅಕ್ಕಿ ಹಿಟ್ಟುಗಳಿಂದಲೂ ಗಣೇಶ ಮೂರ್ತಿ ನಿರ್ಮಿಸಬಹುದು. ಹಿಂದೂ ಧರ್ಮದಲ್ಲಿ ಅರಿಸಿನಕ್ಕೆ ಶ್ರೇಷ್ಠ ಸ್ಥಾನವಿದೆ. ಅದರಲ್ಲಿ ರೋಗ ನಿರೋಧಕ ಅಂಶಗಳು ಹೆಚ್ಚಿರುತ್ತವೆ. ಈ ಉದ್ದೇಶದಿಂದ ಅರಿಸಿನ ಗಣಪತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರ ವಿಸರ್ಜನೆಯೂ ಬಹಳ ಸುಲಭ’ ಎಂದರು.

‘ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ (ಪಿಒಪಿ) ತಯಾರಿಸುವ ಗಣೇಶ ಮೂರ್ತಿಗಳು ಪರಿಸರಕ್ಕೆ ಮಾರಕ. ಇದನ್ನು ಸಂಪೂರ್ಣವಾಗಿ ನಿಷೇಧಿಸುವ ಆಲೋಚನೆ ಇದೆ. ಈ ಉದ್ಯಮವನ್ನು ನಂಬಿಕೊಂಡು ಅನೇಕ ಕಲಾವಿದರು ಬದುಕು ಕಟ್ಟಿಕೊಂಡಿದ್ದಾರೆ. ಏಕಾಏಕಿ ನಿರ್ಧಾರ ಕೈಗೊಂಡರೆ ಅವರಿಗೂ ತೊಂದರೆಯಾಗಬಹುದು. ಹೀಗಾಗಿ ಅವರೊಂದಿಗೆ ಸಭೆ ನಡೆಸಿ ಅಭಿಪ್ರಾಯ ಆಲಿಸಲಾಗುತ್ತದೆ. ಅವರಿಗೆ ಅಗತ್ಯ ನೆರವು ನೀಡುವ ಬಗ್ಗೆಯೂ ಚಿಂತನೆ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ತೀರ್ಮಾನ ಪ್ರಕಟಿಸುತ್ತೇವೆ’ ಎಂದು ಹೇಳಿದರು.

‘ಹೊರ ರಾಜ್ಯಗಳಲ್ಲಿ ತಯಾರಾದ ಪಿಒಪಿ ಗಣೇಶ ಮೂರ್ತಿಗಳನ್ನು ತಂದು ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ.ಅಂತಹವರ ಮೇಲೆ ವಿಶೇಷ ನಿಗಾ ಇಡಲಾಗುತ್ತದೆ. ಅಧಿಕಾರಿಗಳು ವ್ಯಾಪಾರಿಗಳಿಂದ ಕಮಿಷನ್‌ ಪಡೆದು ಮಾರಾಟಕ್ಕೆ ಅನುವು ಮಾಡಿಕೊಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಸಾರ್ವಜನಿಕ ಗಣೇಶೋತ್ಸವದ ಬಗ್ಗೆ ಪರ ವಿರೋಧದ ಚರ್ಚೆಗಳು ಶುರುವಾಗಿವೆ. ಈ ಬಗ್ಗೆ ಮುಖ್ಯಮಂತ್ರಿಯವರು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT