ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಭತ್ಯೆಗೆ ಒತ್ತಾಯ: ಆಯುಷ್ ವೈದ್ಯರಿಂದ ಕ‍ಪ್ಪು ಪಟ್ಟಿ ಧರಿಸಿ ಸೇವೆ

ವಿಶೇಷ ಭತ್ಯೆ ಒದಗಿಸಲು ಸರ್ಕಾರಕ್ಕೆ ಆಗ್ರಹ
Last Updated 1 ಜೂನ್ 2021, 21:54 IST
ಅಕ್ಷರ ಗಾತ್ರ

ಬೆಂಗಳೂರು: ‌ವಿಶೇಷ ಭತ್ಯೆಗೆ ಒತ್ತಾಯಿಸಿರುವ ಆಯುಷ್ ವೈದ್ಯಾಧಿಕಾರಿಗಳು, ಕಪ್ಪು ಪಟ್ಟಿ ಧರಿಸಿ ಮಂಗಳವಾರ ಸೇವೆ ಸಲ್ಲಿಸಿದರು. ಈ ಮೂಲಕ ಅವರು ಸರ್ಕಾರದ ವಿರುದ್ಧ ಅನಿರ್ದಿಷ್ಟಾವಧಿ ಪ್ರತಿಭಟನೆ ಪ್ರಾರಂಭಿಸಿದರು.

ರಾಜ್ಯದಲ್ಲಿ ಸದ್ಯ ಆಯುಷ್ ಇಲಾಖೆಯಡಿ 840 ಆಯುಷ್ ವೈದ್ಯಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಕೋವಿಡ್ ಕಾಣಿಸಿಕೊಂಡ ಬಳಿಕ ಅವರನ್ನು ಕೋವಿಡ್ ಆರೈಕೆ ಕೇಂದ್ರ, ಟ್ರಯಾಜ್ ಸೆಂಟರ್, ವೈದ್ಯಕೀಯ ಆಮ್ಲಜನಕ ಕೇಂದ್ರ ಸೇರಿದಂತೆ ವಿವಿಧೆಡೆ ನಿಯೋಜಿಸಲಾಗಿದೆ. ವಿಶೇಷ ಭತ್ಯೆಗೆ ಸಂಬಂಧಿಸಿದಂತೆ ಸರ್ಕಾರ ಸ್ಪಂದಿಸದ ಕಾರಣ ಕಪ್ಪು ಪಟ್ಟಿ ಧರಿಸಿ, ಸೇವೆ ನೀಡಲಾರಂಭಿಸಿದ್ದಾರೆ. ಇದೇ 7ರೊಳಗೆ ಬೇಡಿಕೆ ಈಡೇರದಿದ್ದಲ್ಲಿ ಕೋವಿಡ್‌ ಕೆಲಸ ಕಾರ್ಯಗಳನ್ನು ಬಹಿಷ್ಕರಿಸಿ, ಮಾತೃ ಇಲಾಖೆಯ ಚಿಕಿತ್ಸಾಲಯ ಮತ್ತು ಆಸ್ಪತ್ರೆಗಳಿಗೆ ಸೀಮಿತವಾಗಿ ಕರ್ತವ್ಯ ನಿರ್ವಹಿಸಲು ಮುಂದಾಗಿದ್ದಾರೆ.

‘ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳಿಗೆ ವಿಶೇಷ ಭತ್ಯೆ ಹೆಚ್ಚಿಸಿ, ಆದೇಶಿಸಲಾಗಿದೆ. ಕಾಲಕಾಲಕ್ಕೆ ನೀಡಲಾಗುವ ವೇತನ, ಭತ್ಯೆ ಮತ್ತು ಸ್ಥಾನಮಾನವನ್ನು ಆಯುಷ್ ವೈದ್ಯಾಧಿಕಾರಿಗಳಿಗೂ ವಿಸ್ತರಿಸಬೇಕೆಂದು ಸಚಿವ ಸಂಪುಟದಲ್ಲಿ ನಿರ್ಣಯಿಸಲಾಗಿದೆ. ಹೀಗಿದ್ದರೂ ವಿಶೇಷ ಭತ್ಯೆಯಲ್ಲಿ ತಾರತಮ್ಯ ಮಾಡಿ, ಆಯುಷ್ ವೈದ್ಯಾಧಿಕಾರಿಗಳ ಸೇವೆಯನ್ನು ಕಡೆಗಣಿಸಲಾಗಿದೆ’ ಎಂದು ಕರ್ನಾಟಕ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಜೆ. ಈರಣ್ಣ ಬೇಸರ ವ್ಯಕ್ತಪಡಿಸಿದರು.

‘ಎರಡು ವರ್ಷಗಳಿಂದ ನಿರಂತರ ನಮ್ಮ ಬೇಡಿಕೆಯ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ. ಆರೋಗ್ಯ ಸಚಿವರ ಗಮನಕ್ಕೆ ಕೂಡ ತರಲಾಗಿದೆ. ಆದರೆ, ವಿಶೇಷ ಭತ್ಯೆ ವಿಚಾರದಲ್ಲಿ ನಮಗೆ ಅನ್ಯಾಯ ಮಾಡಲಾಗಿದೆ. ಕೋವಿಡ್‌ ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿದ್ದರೂ ತಾರತಮ್ಯ ಮುಂದುವರೆದಿದೆ. ಸರ್ಕಾರವು ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಮೇ 7ರ ಬಳಿಕ ಸಭೆ ನಡೆಸಿ, ಮುಂದಿನ ನಡೆಯ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ಕಪ್ಪು ಪಟ್ಟಿ ಧರಿಸಿ ಸೇವೆ ಸಲ್ಲಿಸುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT