ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಾಬ್‌ ಅಷ್ಟೇ ಅಲ್ಲ, ಐದು ಬಾರಿ ನಮಾಜ್‌ಗೆ ಅವಕಾಶ ಕೇಳುತ್ತಿದ್ದಾರೆ: ಸಚಿವ

ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌
Last Updated 8 ಫೆಬ್ರುವರಿ 2022, 10:21 IST
ಅಕ್ಷರ ಗಾತ್ರ

ಬೆಂಗಳೂರು: ಕೇವಲ ಹಿಜಾಬ್‌ಗೆ ಮಾತ್ರ ವಿದ್ಯಾರ್ಥಿಗಳು ಬೇಡಿಕೆ ಇಟ್ಟಿಲ್ಲ. ಶಿಕ್ಷಣಕ್ಕಿಂತ ಧರ್ಮವೇ ಮುಖ್ಯ ಎಂದು ಕೆಲವು ಮಕ್ಕಳು ಹೇಳುವಷ್ಟು ಮುಂದೆ ಹೋಗಿದ್ದಾರೆ. ಕೆಲವು ಮಕ್ಕಳು ಐದು ಬಾರಿ ನಮಾಜ್ ಮಾಡುವುದಕ್ಕೆ ಶಾಲೆಗಳಲ್ಲಿ ಅವಕಾಶ ಮಾಡಿಕೊಡಿ ಅಂದಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಯಾವುದನ್ನೂ ಕೂಡ ಸರ್ಕಾರ ಒಪ್ಪಿಕೊಂಡಿಲ್ಲ. ಕೆಲವು ರಾಜಕೀಯ ನಾಯಕರು ಈ ಘಟನೆಗೆ ತುಪ್ಪ ಸುರಿದು ಶಕ್ತಿ ತುಂಬಿದರು. ಇದರಿಂದಾಗಿ ಈ ವಿವಾದ ಎಲ್ಲ ಕಡೆ ಹರಡಿದೆ’ ಎಂದರು.

‘ಕೇಸರಿ– ಶಾಲು ಹಿಜಾಬ್‌ ವಿಚಾರದಲ್ಲಿ ಹತ್ತು, ಹನ್ನೆರಡು ಕಾಲೇಜುಗಳಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ಕೆಲವು ಪದವಿ ಕಾಲೇಜುಗಳಲ್ಲೂ ವಿವಾದ ಉದ್ಭವವಾಗಿದೆ. ಎಲ್ಲೆಲ್ಲಿ‌ ಕಾನೂನು ಪರಿಸ್ಥಿತಿ ಕೈಮೀರಲಿದೆಯೋ ಅಲ್ಲಿನ ಡಿಡಿಪಿಐಗಳಿಗೆ ರಜೆ ಘೋಷಿಸುವ ಅಧಿಕಾರ ನೀಡಲಾಗಿದೆ. ಬಾಗಲಕೋಟೆ, ಬಿಜಾಪುರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ವಿವಾದ ಸೃಷ್ಟಿಯಾಗಿದೆ’ ಎಂದರು.

‘ಈ ಷಡ್ಯಂತ್ರದ ಹಿಂದೆ ಯಾರ‍್ಯಾರು ಇದ್ದಾರೆ ಎಂಬುದು ತನಿಖೆಯಾಗಬೇಕು. ಈ ಬಗ್ಗೆ ಗೃಹ ಸಚಿವರ ಜೊತೆ ಮಾತನಾಡಿದ್ದೇನೆ. ಯಾರೂ ಕೂಡ ಪ್ರಚೋದನಕಾರಿ ಹೇಳಿಕೆ ನೀಡಬಾರದು. ಪಾಕಿಸ್ತಾನ, ತಾಲಿಬಾನ್ ಎಂದು ಹೇಳಿಕೆ ಕೊಡುವುದು ತಪ್ಪು. ಘಟನೆಯ ಹಿಂದೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಇದೆಯೇ ಎಂಬ ಅನುಮಾನ ಇದೆ. ತನಿಖೆ ನಡೆದಾಗ ಎಲ್ಲವೂ ಬಹಿರಂಗವಾಗಲಿದೆ’ ಎಂದರು.

‘ಪಾಕಿಸ್ತಾನ ಆ ತರದ ಪ್ರಚೋದನಾತ್ಮಕ ವಿಚಾರ ಯಾರೂ ಹೇಳಬಾರದು ನಿಜ. ಆದರೆ ಇಂಥದ್ದು ಸಂವಿಧಾನದಲ್ಲಿ ಇದೆ ಎಂದು ಕೂಡ ಯಾರೂ ಹೇಳಬಾರದು. ಎಸ್‌ಡಿಪಿಐ ಸಂಘಟನೆ ಇದರ ಹಿಂದೆ ಕೆಲಸ ಮಾಡಿದೆ ಎಂಬ ಕೆಲವು ವರದಿಯಿಂದ ತಿಳಿದಿದೆ. ಇದರ ಬಗ್ಗೆ ತನಿಖೆ ಆಗಬೇಕು’ ಎಂದರು.

‘ಯಾರೂ ಕೂಡ ಕಾನೂನು ಕೈಗೆತ್ತಿಕೊಳ್ಳಬಾರದು. ಮಕ್ಕಳ ಶಿಕ್ಷಣದಲ್ಲಿ ಕೋವಿಡ್ ತರಹ ಆದ ತೊಂದರೆ ಅನುಭವಿಸಬಾರದು. ಶಿವಮೊಗ್ಗದಲ್ಲಿ ರಾಷ್ಟ್ರಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸಿದ್ದರೆ ಅದು ಖಂಡನೀಯ. ಅಲ್ಲಿಂದ ಅಧಿಕಾರಿಗಳ ವರದಿ ತರಿಸಿಕೊಳ್ಳುತ್ತೇವೆ. ಬಳಿಕ ತೀರ್ಮಾನ ಮಾಡುತ್ತೇವೆ. ಇಂಥ ಘಟನೆಗಳಿಂದ ಮಕ್ಕಳು ಖಂಡಿತ ಆತಂಕಕ್ಕೆ ಒಳಗಾಗುತ್ತಾರೆ. ಈಗಾಗಲೇ ದ್ವಿತೀಯ ಪಿಯು ಪರೀಕ್ಷೆ ದಿನಾಂಕ ಘೋಷಿಸಲಾಗಿದೆ’ ಎಂದರು.

‘ರಾಜ್ಯದಲ್ಲಿ ಐದು ಸಾವಿರ ಕಾಲೇಜುಗಳಿವೆ. ಅದರಲ್ಲಿ ಕೇವಲ ಹನ್ನೆರಡು ಕಾಲೇಜುಗಳಲ್ಲಿ ಮಾತ್ರ ಹಿಜಾಬ್ ವಿವಾದವಾಗಿದೆ. ಎಲ್ಲ ಕಡೆ ಕ್ರಮ ತೆಗೆದುಕೊಳ್ಳಲಾಗಿದೆ. ಉಡುಪಿಯಲ್ಲಿ 20 ದಿನಕ್ಕೂ ಹೆಚ್ಚು ಕಾಲ ಶಾಂತಿ ಕಾಪಾಡಿದ್ದೆವು. ಉಡುಪಿಯ 9 ಪಿಯು ಕಾಲೇಜಿನಲ್ಲಿ ಈ ವಿವಾದ ಹಬ್ಬಿರಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT