ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ, ಬಿಜೆಪಿಯ ನಡೆ ಆತಂಕಕಾರಿ – ಬಿಕೆಸಿ

Last Updated 21 ಅಕ್ಟೋಬರ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ‌‘ಆಯುಧ ಪೂಜೆಯ ದಿನ ಕಾಪು ಠಾಣೆ ಪೊಲೀಸರು ಕೇಸರಿ ಶರ್ಟ್ ಮತ್ತು ವಿಜಯಪುರ ಗ್ರಾಮೀಣ ಠಾಣೆಯ ಪೊಲೀಸರು ಕೇಸರಿ ಶಾಲು ಧರಿಸಿ ಭಾವಚಿತ್ರ ತೆಗೆಸಿಕೊಂಡಿರುವ ಘಟನೆ ಪೊಲೀಸ್ ಇಲಾಖೆ ಮೇಲೆ ಸರ್ಕಾರ ಬೀರುತ್ತಿರುವ ಪ್ರಭಾವದ ಪರಿಣಾಮ’ ಎಂದು ಕೆಪಿಸಿಸಿ ವಕ್ತಾರ ಪ್ರೊ.ಬಿ.ಕೆ. ಚಂದ್ರಶೇಖರ್‌ ಅಭಿಪ್ರಾಯಪಟ್ಟಿದ್ದಾರೆ.

‌‘ಆದರೆ, ಈ ಘಟನೆಯ ಹಿನ್ನೆಲೆಯಲ್ಲಿ ಆಳುವವರ ತಾಳಕ್ಕೆ ತಕ್ಕಂತೆ ಕುಣಿಯುವ ಪೊಲೀಸ್ ಇಲಾಖೆ ಬಗ್ಗೆ ನಡೆಯಬೇಕಿದ್ದ ನಿಷ್ಪಕ್ಷಪಾತ ಚರ್ಚೆಗಳು ಗೌಣವಾದದ್ದು ವಿಷಾದದ ಸಂಗತಿ’ ಎಂದು ಅವರು ಹೇಳಿದ್ದಾರೆ.

‘ಅನೈತಿಕ ಪೊಲೀಸ್‍ಗಿರಿಯು ಕ್ರಿಯೆಗೆ ಪ್ರತಿಕ್ರಿಯೆ ಎಂದು ಇತ್ತೀಚೆಗೆ ಮುಖ್ಯಮಂತ್ರಿ ನೀಡಿದ್ದ ಹೇಳಿಕೆ ಪೊಲೀಸರು ಈ ರೀತಿ ನಿಯಮ ಮೀರಿ ವರ್ತಿಸಲು ಮುಖ್ಯ ಕಾರಣ ಎಂಬುದು ನಿರ್ವಿವಾದದ ಸಂಗತಿ. ಮುಖ್ಯಮಂತ್ರಿ ಹೇಳಿಕೆಯು ಅನೈತಿಕ ಪೊಲೀಸ್‍ಗಿರಿಯಂಥ ಸಂವಿಧಾನ ವಿರೋಧಿ ಬೆದರಿಕೆ ಮತ್ತು ಹಿಂಸಾ ಕೃತ್ಯಗಳನ್ನು ಹತ್ತಿಕ್ಕುವ ಬದಲು, ಪುರಸ್ಕರಿಸುವಂತಿತ್ತು’ ಎಂದಿದ್ದಾರೆ.

‘ಅನೈತಿಕ ಪೊಲೀಸ್‍ ಗಿರಿ ಎಂಬುದು ಸಂವಿಧಾನದತ್ತ ಮೂಲಭೂತ ಹಕ್ಕುಗಳ ಉಲ್ಲಂಘನಾ ಕೃತ್ಯ ಎಂದು ಈಗಾಗಲೇ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‍ಗಳು ನೀಡಿರುವ ತೀರ್ಪುಗಳನ್ನು ಮುಖ್ಯಮಂತ್ರಿ ಮರೆತಂತಿದೆ. ಮುಖ್ಯಮಂತ್ರಿಯ ಈ ಹೇಳಿಕೆ ಪೊಲೀಸರು ಕೇಸರಿ ವಸ್ತ್ರಗಳನ್ನು ಧರಿಸಲು ಪ್ರೇರಣೆಯಾಗಿದೆ. ಪೊಲೀಸ್ ಅಧಿಕಾರಿಗಳು ಸಾಂವಿಧಾನಿಕ ಮೌಲ್ಯಗಳು ಮತ್ತು ತಮ್ಮ ಸೇವೆಯ ಪಾವಿತ್ರ್ಯ ಎತ್ತಿ ಹಿಡಿಯುವ ಬದಲು, ಬಡ್ತಿ, ಹುದ್ದೆ, ಆಯಕಟ್ಟಿನ ಜಾಗಗಳಿಗೆ ವರ್ಗಾವಣೆ ಸೇರಿದಂತೆ ಇತರ ಆಮಿಷಗಳು ಹಾಗೂ ರಾಜಕಾರಣಿಗಳ ಒತ್ತಾಯಕ್ಕೆ ಬಿದ್ದು ಈ ಕೃತ್ಯ ಎಸಗಿರುವುದು ಸ್ಪಷ್ಟವಾಗಿದೆ’ ಎಂದಿದ್ದಾರೆ.

‘ಕೇಸರಿ‌ ವಸ್ತ್ರಗಳನ್ನು ಧರಿಸಿ ಆಯುಧ ಪೂಜೆಯನ್ನು ಪೊಲೀಸರು ಆಚರಿಸಲು ಸರ್ಕಾರಿ ಹಬ್ಬವಲ್ಲ. ಪೊಲೀಸರನ್ನು ಆಯುಧ ಪೂಜೆ ದಿನ ಭದ್ರತೆ ಸೇರಿದಂತೆ ವಿವಿಧ ಕಾರ್ಯಗಳಿಗೆ ನಿಯೋಜನೆ ಮಾಡಲಾಗುತ್ತದೆ. ಹೀಗಾಗಿ, ಅವರು ಖಾಕಿ ಸಮವಸ್ತ್ರದಲ್ಲಿರುವುದು ಕಡ್ಡಾಯ. ಆದರೆ, ಕಾಪು ಮತ್ತು ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಸಮವಸ್ತ್ರ ಧರಿಸುವುದನ್ನು ತಡೆದವರು ಯಾರು. ಕೇಸರಿ ವಸ್ತ್ರಗಳನ್ನು ಧರಿಸಿ ಬರುವಂತೆ ಆದೇಶಿಸಲು ಜಿಲ್ಲಾ ಪೊಲೀಸ್ ವರಿಷ್ಠಾಕಾರಿಯಲ್ಲದೇ ಮತ್ಯಾರಿಂದ ಸಾಧ್ಯ’ ಎಂದೂ ಪ್ರಶ್ನಿಸಿದ್ದಾರೆ.

ಉಡುಪಿ ಶಾಸಕ ರಘುಪತಿ ಭಟ್ ಅವರು ‘ಪೊಲೀಸರು ಸಾಂಪ್ರದಾಯಿಕ ವಸ್ತ್ರಗಳನ್ನು ಧರಿಸಿದರೆ ತಪ್ಪೇನು?’ ಎಂದು ಈ ಕಾನೂನು ಉಲ್ಲಂಘನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಸಂಬಂಧ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ‘ಟಿಪ್ಪು ಜಯಂತಿಯಂದು ಖಡ್ಗವನ್ನು ಝಳಪಿಸುತ್ತೀರಿ ಮತ್ತು ಮಸೀದಿಗಳಿಗೆ ಭೇಟಿ ನೀಡಿದಾಗ ಮುಸ್ಲಿಮರ ಟೋಪಿ ಧರಿಸುತ್ತೀರಿ’ ಎಂದು ಆರೋಪಿಸಿದ್ದಾರೆ.

‘ಸಿದ್ದರಾಮಯ್ಯ ಅವರು ಯಾವುದೇ ಸರ್ಕಾರಿ ಸೇವೆಯಲ್ಲಿಲ್ಲ ಎನ್ನುವುದು ಶಾಸಕರಿಗೆ ತಿಳಿದಿರಬೇಕಿತ್ತು. ಆದರೆ, ಪೊಲೀಸರು ಸಂಪೂರ್ಣವಾಗಿ ಸರ್ಕಾರಿ ಸೇವಕರಾಗಿದ್ದು, 1966ರ ನಾಗರಿಕ ಸೇವೆ ಕಾಯ್ದೆ ನಿಯಮ 3ರ ಅನ್ವಯ ತಮ್ಮ ಸ್ಥಾನಕ್ಕೆ ಯೋಗ್ಯವಲ್ಲದ ಯಾವುದೇ ಕಾರ್ಯ ಮಾಡುವುದನ್ನು ನಿಷೇಧಿಸಲಾಗಿದೆ. ನಿಯಮ 5(1)ರ ಅನ್ವಯ, ಸರ್ಕಾರಿ ಸೇವೆಯಲ್ಲಿರುವವರು ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಳ್ಳುವುದು ಮತ್ತು ಯಾವುದೇ ರಾಜಕೀಯ ಚಟುವಟಿಕೆಗೆ ನೆರವು ನೀಡುವುದು ಅಥವಾ ಇನ್ಯಾವುದೇ ರೀತಿಯಲ್ಲಿ ಭಾಗವಹಿಸುವುದರ ಮೇಲೆ ನಿರ್ಬಂಧ ವಿಧಿಸಲಾಗಿದೆ. ಪೊಲೀಸರು ತಾವು ತೊಟ್ಟಿದ್ದ ವಸ್ತ್ರಗಳ ಬಣ್ಣ ಹೆಚ್ಚು ಪ್ರಚಾರದಲ್ಲಿದ್ದು, ಪ್ರಸ್ತುತ ರಾಜಕೀಯ ಪಕ್ಷವೊಂದನ್ನು ಪ್ರತಿನಿಧಿಸುತ್ತದೆ ಎಂಬುದನ್ನು ನಿರಾಕರಿಸಿಲ್ಲ. ಕಾನೂನು ಬಲವಿರುವ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಪೊಲೀಸರು ಸಮಾಜಕ್ಕೆ ಉತ್ತರದಾಯಿ ಆಗಬೇಕಿದೆ. ಆದರೆ, ಮುಖ್ಯಮಂತ್ರಿ ಮತ್ತು ಬಿಜೆಪಿ ನಿಲುವು ನಾಗರಿಕ ಸೇವಾ ನಿಯಮಗಳ ಪಾಲನೆಗೆ ಸಂಬಂಧಿಸಿದಂತೆ ಸರ್ದಾರ್ ಪಟೇಲರು ನಿರ್ಮಿಸಿದ್ದ ‘ಉಕ್ಕಿನ ಚೌಕಟ್ಟು’ ಕರಗಿಸುವಂತೆ ಇದೆ. ಬೇಲಿಯೇ ಎದ್ದು ಹೊಲ ಮೇಯ್ದರೆ ರಕ್ಷಿಸುವವರು ಯಾರು. ಶಿಕ್ಷಿಸುವವರು ಯಾರು’ ಎಂದೂ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT