ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಹರೂ ಪರಂಪರೆ-ಆತ್ಮಗೌರವ ದೂರ: ಬಿ.ಎಲ್. ಸಂತೋಷ್

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿಕೆ
Last Updated 31 ಡಿಸೆಂಬರ್ 2022, 21:52 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದ ಮೂಲಸತ್ವ ಹಾಗೂ ಆತ್ಮಗೌರವದಿಂದ ನಮ್ಮನ್ನು ದೂರ ತರುವ ಪ್ರಯತ್ನವನ್ನು ನೆಹರೂ ಪರಂಪರೆ ಕಳೆದ 70 ವರ್ಷಗಳಿಂದ ಮಾಡಿತು’ ಎಂದು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ತಿಳಿಸಿದರು.

ಮೈಂಡ್ ಪುಲ್‌ ಮೀಡಿಯಾ ನಗರದಲ್ಲಿ ಶನಿವಾರ ಆಯೋಜಿಸಿದ ‘ಸ್ಪಿರಿಟ್ ಆಫ್ ಇಂಡಿಯಾ’ ಸಂವಾದ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

‘ಪಾಶ್ಚಿಮಾತ್ಯರು ಶ್ವೇತವರ್ಣ ಮಾತ್ರ ಸುಂದರ ಎಂದು ಸಾರಿ, ತಮ್ಮದೆಲ್ಲವನ್ನೂ ನಮ್ಮ ಮೇಲೆ ಹೇರಿದರು. ನಮ್ಮಲ್ಲಿನ ವೈಜ್ಞಾನಿಕ ಮನೋ ಧರ್ಮ ಗಳನ್ನು ಮೂಲೆಗುಂಪು ಮಾಡಲಾಯಿತು. ಸ್ವಾತಂತ್ರ್ಯದ ಬಳಿಕ ಅದನ್ನು ನೆಹರೂ ಪರಂಪರೆ ಮುಂದುವರಿಸಿಕೊಂಡು ಬಂದಿತು. ಭಾರತದ ಚೈತನ್ಯಕ್ಕೆ ಧಕ್ಕೆ ತರುವ ರಹಸ್ಯ ಕಾರ್ಯಸೂಚಿ ಕೆಲಸ ಮಾಡುತ್ತಿದೆ. ಚಲನಚಿತ್ರದಲ್ಲಿ ಪೊಲೀಸರು ಅನ್ಯಾ ಯದ ಕೆಲಸ ಮಾಡುತ್ತಿರುವಾಗ ಕೇಸರಿ ಶಾಲು ಹಾಕಲಾಗುತ್ತದೆ. ಕೇಸರಿಗೆ ಇನ್ನೊಂದು ಬಣ್ಣ ಹಚ್ಚುವ ದುರುದ್ದೇಶ ಇದರ ಹಿಂದೆ ಇದೆ’ ಎಂದು ಹೇಳಿದರು.

‘ರಾಷ್ಟ್ರೀಯತೆಯಲ್ಲಿ ಗಟ್ಟಿ ಮತ್ತು ಮೃದು ಎಂಬುದು ಇಲ್ಲ. ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಹಾಕಿದರೆ ಕೆಲವರಿಗೆ ಅದು ಸಮಯ ವ್ಯರ್ಥ ಅನಿಸುತ್ತದೆ. ಅದೇ ಹೊರಗಡೆ ಬಂದು ಬಕೆಟ್‌ಗಟ್ಟಲೆ ಪಾಪ್‌ ಕಾರ್ನ್‌ ತಿನ್ನುವಾಗ ಸಮಯ ವ್ಯರ್ಥ ಅನಿಸದು’ ಎಂದು ಬೇಸರ ವ್ಯಕ್ತಪಡಿಸಿದರು.

ನ್ಯಾಷನಲ್ ಎಜುಕೇಷನಲ್ ಟೆಕ್ನಾಲಜಿ ಫೋರಮ್ ಅಧ್ಯಕ್ಷ ಅನಿಲ್ ಸಹಸ್ರಬುದ್ಧೆ, ‘ವಿಜ್ಞಾನದ ಆರಂಭ ವೇದ ಕಾಲದಿಂದಲೇ ಆಗುತ್ತದೆ. 1835ರ ನಂತರ ಮೆಕಾಲೆಯಿಂದಾಗಿ ನಮ್ಮ ಶಿಕ್ಷಣ ಪದ್ಧತಿ ಪಕ್ಕಕ್ಕೆ ಸರಿಯಿತು. ಈಗ ಜಾರಿಗೊಂಡಿರುವ ರಾಷ್ಟ್ರೀಯ ಶಿಕ್ಷಣ ನೀತಿಯು ನಮ್ಮತನವನ್ನು ಮರುಸ್ಥಾಪಿಸಲಿದೆ. ಈ ಶಿಕ್ಷಣ ನೀತಿಯಲ್ಲಿ ಮಾತೃಭಾಷೆ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಭಾರತೀಯ ಭಾಷೆಗಳಲ್ಲಿ ಎಂಜಿನಿಯರಿಂಗ್, ವೈದ್ಯಕೀಯ, ಕಾನೂನು ಸೇರಿ ವಿವಿಧ ಪದವಿಗಳನ್ನು ಪಡೆಯುವ ಕಾಲ ಬಂದಿದೆ. ಆಂಗ್ಲ ಭಾಷೆಯಲ್ಲಿನ ಪಠ್ಯ ಪುಸ್ತಕಗಳನ್ನು 12 ಭಾರತೀಯ ಭಾಷೆಗಳಿಗೆ ಅನುವಾದಿಸಲಾಗುತ್ತಿದೆ’ ಎಂದು ಹೇಳಿದರು.

ವಿದ್ವಾಂಸರನ್ನು ಸೃಷ್ಟಿಸಿ: ಕಲಾವಿದ ಸುಚೇಂದ್ರ ಪ್ರಸಾದ್, ‘ನಮ್ಮ ವಿಶ್ವವಿದ್ಯಾಲಯಗಳಲ್ಲಿ ವಿದ್ವಾಂಸರ ದಂಡನ್ನು ಸೃಷ್ಟಿಸುವ ಕೆಲಸ ಆಗಬೇಕು. ಮಹಾಪ್ರಬಂಧ ಮಂಡಿಸಿದವರೆಲ್ಲ ವಿದ್ವಾಂಸರಾಗುವುದಿಲ್ಲ. ಭಾರತೀಯ ಸಂಸ್ಕೃತಿ ಬಗ್ಗೆ ಆಳವಾಗಿ ಅಧ್ಯ ಯನ ಮಾಡಿಕೊಂಡವರು ವಿಷಯ ಜ್ಞಾನವನ್ನು ಯುವಜನರಿಗೆ ತಲುಪಿಸಬೇಕು’ ಎಂದು ಅವರು ತಿಳಿಸಿದರು.

ಸಂಸದ ತೇಜಸ್ವಿ ಸೂರ್ಯ, ‘ಇವತ್ತಿನ ತಲೆಮಾರಿನವರಿಗೆ ದೇಶದ ಅಂತಃಸತ್ವ ತಿಳಿಯಬೇಕು. ಭಾರತವು ಸಾವಿರಾರು ವರ್ಷಗಳ ಇತಿಹಾಸ ಇರುವ ಒಂದು ಸಂಸ್ಕೃತಿಯಿಂದ ರೂಪುಗೊಂಡಿದೆ. ಈ ಸಂಸ್ಕೃತಿಗೆ ಜನ್ಮದಿನಾಂಕ ಇಲ್ಲ. ಆದ್ದರಿಂದ ಅಂತ್ಯವೂ ಇರುವುದಿಲ್ಲ. ಮತ್ತೊಮ್ಮೆ ಸ್ವದೇಶಿ, ಸ್ವಧರ್ಮ, ಸ್ವಾವಲಂಬಿ ಹಾಗೂ ಸ್ವಾಭಿಮಾನವನ್ನು ಸ್ಥಾಪಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT