ಮಂಗಳವಾರ, ಮೇ 17, 2022
23 °C

ಪದೇ ಪದೇ ನಾಯಕತ್ವ ಬದಲಾವಣೆಯೇ ಬಿಜೆಪಿ ಶಕ್ತಿ: ಬಿ.ಎಲ್‌. ಸಂತೋಷ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪಕ್ಷದ ನಾಯಕತ್ವ ಮತ್ತು ಚುನಾವಣೆಗಳಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಬಿಜೆಪಿ
ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಮೈಸೂರಿನಲ್ಲಿ ಶನಿವಾರ ಆಡಿರುವ ಮಾತುಗಳು ಪಕ್ಷದಲ್ಲಿ ಚರ್ಚೆಗೆ ಕಾರಣವಾಗಿದೆ. ಕುಟುಂಬ ರಾಜಕಾರಣ ಮುಂದುವರಿಸಬೇಕೆಂಬ ಧಾವಂತದಲ್ಲಿರುವ ಬಿಜೆಪಿಯ ಹಲವು ಹಿರಿಯರಲ್ಲಿ ಆತಂಕವೂ ಮೂಡಿಸಿದೆ.

ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಮೈಸೂರಿನಲ್ಲಿ ನಡೆದ ಪಕ್ಷದ ಪ್ರಮುಖ ನಾಯಕರ ಸಭೆಯಲ್ಲಿ ಕಟ್ಟುನಿಟ್ಟಿನ ಸಂದೇಶವನ್ನು ಅವರು ರವಾನಿಸಿದ್ದಾರೆ. ಪ್ರಮುಖವಾಗಿ, ‘ಬದಲಾವಣೆಗೆ ತಕ್ಕಂತೆ ಬದಲಾವಣೆಯಾಗದಿದ್ದರೆ ನಾಶ ಖಚಿತ’ ಮತ್ತು ‘ಪದೇ ಪದೇ ನಾಯಕತ್ವ ಬದಲಾವಣೆಯೇ ಬಿಜೆಪಿಯ ಶಕ್ತಿ’ ಎಂದು ಹೇಳಿದ್ದಾರೆ. ಈ ಮಾತುಗಳು ಮುಖ್ಯಮಂತ್ರಿ ಬದಲಾವಣೆ ಸಾಧ್ಯತೆಯೂ ಸೇರಿ ವಿವಿಧ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ.

ಉತ್ತಮವಾಗಿ ಕಾರ್ಯನಿರ್ವಹಣೆಮಾಡದ ಮತ್ತು ಜನರ ಸಂಕಷ್ಟಗಳಿಗೆ ಸ್ಪಂದಿಸದ ಶಾಸಕರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ತಪ್ಪುತ್ತದೆ ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿ ಬಂದಿತ್ತು. ಇದೀಗ ಸಂತೋಷ್‌ ಅವರು ಅದನ್ನು ಪರೋಕ್ಷ ಮಾತುಗಳಲ್ಲಿ ಹೇಳಿದ್ದಾರೆ.

‘ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ’

‘ನಮ್ಮ ಪಕ್ಷ ಏನು ಮಾಡಲಿದೆ ಎಂಬ ಪ್ರಯೋಗಶೀಲತೆ ಬಗ್ಗೆ ಬಿ.ಎಲ್‌.ಸಂತೋಷ್‌ ಮೈಸೂರಿನಲ್ಲಿ ಮಾತನಾಡಿದ್ದಾರೆ. ಆದರೆ ಈ ಹೇಳಿಕೆಯ ಬಗ್ಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಭಾನುವಾರ ಸಂಜೆ ಸುದ್ದಿಗಾರರ ಜತೆ ಮಾತನಾಡಿ, ‘ಯಾರೂ ಅವರ ಮಾತುಗಳನ್ನು ವ್ಯಕ್ತಿಗತವಾಗಿ ತೆಗೆದುಕೊಳ್ಳಬೇಕಾಗಿಲ್ಲ’ ಎಂದೂ ತಿಳಿಸಿದರು.

ಯೋಗಿ ಆದಿತ್ಯನಾಥ ಅಂತಹವರು ಬೆಳಕಿಗೆ ಬಂದಿದ್ದು, ಇಂತಹ ಪ್ರಯೋಗಶೀಲತೆಯಿಂದಲೇ. ಪಕ್ಷದ ಸಿದ್ಧಾಂತವೆಂದರೆ, ಕಾರ್ಯಕರ್ತನಾಗಿ ಯಾವ ಎತ್ತರಕ್ಕೆ ಬೇಕಾದರೂ ಬೆಳೆಯಬಹುದು. ಕುಟುಂಬದ ಕಾರಣಕ್ಕೆ ಅಲ್ಲ. ಉತ್ತರಾಖಂಡದಲ್ಲಿ ಸೋತವರನ್ನೂ ಮುಖ್ಯಮಂತ್ರಿ ಮಾಡಲಾಯಿತು. ಪಕ್ಷ ತೀರ್ಮಾನ ಮಾಡಿದರೆ, ಯಾರನ್ನು ಯಾವ ಸ್ಥಾನಕ್ಕೆ ಬೇಕಾದರೂ ಕೂರಿಸಬಹುದು ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು