ಮಂಗಳವಾರ, ಜೂನ್ 15, 2021
21 °C

ರೈತರ ವಾಹನಕ್ಕೆ ಡೀಸಲ್ ತುಂಬಿಸಲು ವಾಚ್ ಅಡವಿಟ್ಟ ಬಾಗೇವಾಡಿ ಬಸವಣ್ಣ

ಇ.ಎಸ್‌. ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ‘ರೈತ ಹೋರಾಟಕ್ಕೆ ಬೆಂಗಳೂರಿಗೆ ತೆರಳಿದ್ದ ತಾಲ್ಲೂಕಿನ ರೈತರ ವಾಹನ ಊರಿಗೆ ಹಿಂದಿರುಗಲು ಡೀಸೆಲ್ ಇಲ್ಲದ ಸಂದರ್ಭದಲ್ಲಿ ತಮ್ಮ ವಾಚ್ ಅಡವಿಟ್ಟು ಹಣ ಕೊಟ್ಟಿದ್ದು ರೈತ ಹೋರಾಟಗಾರ ಬಾಬಾಗೌಡ ಪಾಟೀಲರ ಪ್ರಾಮಾಣಿಕತೆ ಮತ್ತು ಬದ್ಧತೆಗೆ ಸಾಕ್ಷಿ’ ಎಂದು ವಕೀಲ ಮಹಾದೇವ ದೊಡ್ಡಮನಿ ನೆನಪಿಸಿಕೊಂಡರು.

1985ರ ಹೊತ್ತಿಗೆ ರೈತ ಸಂಘ ಆರಂಭದ ಕಾಲಘಟ್ಟದಲ್ಲಿ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಹಾದೇವ ದೊಡ್ಡಮನಿ ಅವರು ಅಂದಿನ ದಿನಗಳನ್ನು ಮೆಲುಕು ಹಾಕುತ್ತ, ‘ಬೆಂಗಳೂರಿನಲ್ಲಿ ನಡೆದ ರೈತ ಸಮಾವೇಶದಲ್ಲಿ ತಾಲ್ಲೂಕಿನ ರೈತರು ಪಾಲ್ಗೊಂಡಿದ್ದರು. ಮರಳಿ ಬರುವಾಗ ಕರಡಿಗುಡ್ಡದಿಂದ ಬಂದಿದ್ದ ವಾಹನಕ್ಕೆ ಡೀಸೆಲ್ ತುಂಬಿಸಲು ಹಣದ ಕೊರತೆ ಉಂಟಾಯಿತು. ಆಗ ಬಾಬಾಗೌಡರು ಬೇರೆಯವರ ಬಳಿ ಕೈಚಾಚದೆ ತಮ್ಮ ಕೈಗಡಿಯಾರವನ್ನೇ ನೀಡಿ, ಇದನ್ನು ಮಾರಿಯಾದರೂ ಸರಿ ಇಲ್ಲವೇ ಒತ್ತೆ ಇಟ್ಟಾದರೂ ಸರಿ ಹಣ ತನ್ನಿ ಎಂದಿದ್ದರು. ಆ ಸಂದರ್ಭದಲ್ಲಿ ಆ ವಾಚ್‌ಗೆ ₹1100 ಸಿಕ್ಕಿತ್ತು. ಅದರಲ್ಲಿ ಡೀಸೆಲ್ ತುಂಬಿಸಿಕೊಂಡು ರೈತರನ್ನು ಊರಿಗೆ ಕರೆತಂದೆವು’ ಎಂದು ಮೆಲುಕು ಹಾಕಿದರು.

‘ಬೆಳಗಾವಿಯ ಬಾಗೇವಾಡಿಯಲ್ಲಿ ಬಾಬಾಗೌಡರು ಚಳವಳಿ ಆರಂಭಿಸಿದರು. ಅವರ ಚಳವಳಿಯ ಕಾವು ಜಿಲ್ಲೆಯಲ್ಲಿ ಮೊದಲಬಾರಿಗೆ ಕಂಡುಬಂದಿದ್ದು ಉಪ್ಪಿನಬೆಟಗೇರಿಯಲ್ಲಿ. ಅಲ್ಲಿನ ಸುಬ್ಬಣ್ಣ ಅಲಸಂದಿ ಅವರು ರೈತಸಂಘ ಪ್ರಾರಂಭಿಸಿದರು. ನಂತರ ಮಂಗಳಗಟ್ಟಿ, ಮುಮ್ಮಿಗಟ್ಟಿ ಹಾಗೂ ಚಿಕ್ಕಮಲ್ಲಿಗವಾಡದಲ್ಲಿ ಚಳವಳಿಗಳು ಆರಂಭಗೊಂಡವು’ ಎಂದು ನೆನಪಿಸಿಕೊಂಡರು.

‘ಚನ್ನಪ್ಪ ಗುಡದರೆ, ಚನ್ನಬಸಪ್ಪ ಮಸೂತಿ, ಧರಿಯಪ್ಪ ಪೀರಜಾದೆ ಮುಂತಾದ ಮುಖಂಡರು ರೈತ ಹೋರಾಟದಲ್ಲಿ ಧುಮುಕಿ ಬಾಬಾಗೌಡರನ್ನು ಬೆಂಬಲಿಸಿದರು. ಗ್ರಾಮಗಳಲ್ಲಿ ಪಾಟೀಲರು ರಾತ್ರಿ ಸಭೆಗಳನ್ನು ನಡೆಸುತ್ತಿದ್ದರು. ಅಲ್ಲಿಯೇ ಊಟ ಹಾಗೂ ವಸತಿ. ಊಟ ಸಿಗದಿದ್ದರೆ ಮಂಡಕ್ಕಿ ತಿಂದು ವಿಶ್ರಾಂತಿ ಪಡೆಯುತ್ತಿದ್ದರು. ಹೀಗೆ ಹಳ್ಳಿಹಳ್ಳಿಗಳನ್ನು ತಿರುಗಿ ರೈತ ಸಂಘವನ್ನು ಕಟ್ಟಿದರು. ರಾಯಚೂರಿನಲ್ಲಿ ಹನುಮೇಗೌಡರು, ವಿಜಯಪುರದ ಸಂಕನಗೌಡರು ಹಾಗೂ ಈ ಭಾಗದಲ್ಲಿ ಬಾಬಾಗೌಡರು ರೈತ ಹೋರಾಟ ಆರಂಭಿಸಿದರು’ ಎಂದು ಮಹಾದೇವ ಹೇಳಿದರು.

‘ಟೊಮೆಟೊ ರೈತರು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ನರೇಂದ್ರದ ಜಮೀನ್ದಾರರಾದ ಕಂಡೇಶ್ವರ ಈಳಗೇರ ಅವರ ಮೂಲಕ ಟೊಮೆಟೊ ರಸ ತೆಗೆಯುವ ಕಾರ್ಖಾನೆ ಆರಂಭಿಸಿ ರೈತರ ನೆರವಿಗೆ ನಿಂತರು. ಬಾಗೇವಾಡಿ ಬಸವಣ್ಣ ಎಂದೇ ಖ್ಯಾತಿ ಪಡೆದಿದ್ದ ಬಾಬಾಗೌಡರ 1989ರಲ್ಲಿ ಅತ್ಯಧಿಕ ಮತಗಳ ಅಂತರದಲ್ಲಿ ಧಾರವಾಡದಿಂದ ಆರಿಸಿ ಬಂದರು. ಆದರೆ ಕಿತ್ತೂರು ಉಳಿಸಿಕೊಂಡು, ಧಾರವಾಡವನ್ನು ಪ್ರೊ. ನಂಜುಂಡಸ್ವಾಮಿ ಅವರಿಗೆ ಬಿಟ್ಟುಕೊಟ್ಟರು. ಆ ಸಂದರ್ಭದಲ್ಲಿ ಈ ಭಾಗದ ಮತದಾರರು ಬಾಬಾಗೌಡ ಪಾಟೀಲರ ಮಾತಿನಂತೆ ಪ್ರೊಫೆಸರ್ ಅವರನ್ನು ಗೆಲ್ಲಿಸಿದರು’ ಎಂದು ನೆನಪಿಸಿಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು