ಕೋವಿಡ್ ಪೀಡಿತ ಗರ್ಭಿಣಿಯರ ವಿಶೇಷ ಆರೈಕೆ; 59 ಆರೋಗ್ಯವಂತ ಮಕ್ಕಳ ಜನನ

ಮಂಡ್ಯ: ಕಳೆದ ನಾಲ್ಕು ತಿಂಗಳಿಂದ ನಗರದ ಮಿಮ್ಸ್ ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಕೋವಿಡ್ ಪೀಡಿತ 59 ಮಂದಿ ಗರ್ಭಿಣಿಯರಿಗೆ ಆರೋಗ್ಯಯುತವಾಗಿ ಹೆರಿಗೆ ಮಾಡಿಸಲಾಗಿದೆ.
ಮಿಮ್ಸ್ ಆಸ್ಪತ್ರೆ ಆವರಣದಲ್ಲಿ ಎರಡು ಪ್ರತ್ಯೇಕ ಹೆರಿಗೆ ವಾರ್ಡ್‌ಗಳಿದ್ದು ನಿತ್ಯ 35–40 ಮಕ್ಕಳು ಜನಿಸುತ್ತವೆ. ಕೋವಿಡ್ ಸಮಯದಲ್ಲಿ ಗರ್ಭಿಣಿಯರಿಗೂ ಸೋಂಕು ಪತ್ತೆಯಾಗುತ್ತಿದ್ದು ವಿಶೇಷ ಕಾಳಜಿಯ ಮೂಲಕ ಹೆರಿಗೆ ಮಾಡಿಸುತ್ತಿರುವುದು ಮೆಚ್ಚುಗೆಗೆ ಕಾರಣವಾಗಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 105 ಗರ್ಭಿಣಿಯರಿಗೆ ಕೋವಿಡ್–19 ಪತ್ತೆಯಾಗಿದ್ದು 59 ಮಂದಿಗೆ ಹೆರಿಗೆ ಮಾಡಿಸಲಾಗಿದೆ.
ಸೋಂಕು ಪೀಡಿತ ಗರ್ಭಿಣಿಯರಿಂದ ಹುಟ್ಟುವ ಮಕ್ಕಳಿಗೂ ಕೋವಿಡ್ ಹರಡಿದ ಪ್ರಕರಣಗಳು ದೇಶದಾದ್ಯಂತ ವರದಿಯಾಗಿವೆ, ಹುಟ್ಟಿದ ತಕ್ಷಣ ಹಸುಳೆಗಳು ಸಾವಿನ ಮನೆ ಸೇರಿವೆ. ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಸಂಕಷ್ಟ ಆರಂಭವಾದ ದಿನದಿಂದ ಇಲ್ಲಿಯವರೆಗೂ ಕೋವಿಡ್ ಪೀಡಿತ ತಾಯಿಯ ಗರ್ಭದಿಂದ ಬಂದ ಯಾವುದೇ ಮಗು ಸೋಂಕು ಪೀಡಿತವಾಗಿಲ್ಲ, ಯಾವುದೇ ಸಾವು ಸಂಭವಿಸಿಲ್ಲ. ಅತ್ಯಂತ ಕಾಳಜಿಯಿಂದ ಗರ್ಭಿಣಿಯರನ್ನು ಪೋಷಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯಯುತ ಮಗುವಿನ ಜನನಕ್ಕೆ ಕಾರಣವಾಗಿದೆ.
ಒಟ್ಟು 59 ಸೋಂಕು ಪೀಡಿತ ಗರ್ಭಣಿಯರಲ್ಲಿ 30 ಮಂದಿಗೆ ಶಸ್ತ್ರಚಿಕಿತ್ಸೆಯ (ಸಿಜೇರಿಯನ್) ಮೂಲಕ ಹೆರಿಗೆ ಮಾಡಿಸಲಾಗಿದೆ. ಉಳಿದ 29 ಮಹಿಳೆಯರಿಗೆ ಸಾಮಾನ್ಯ ಹೆರಿಗೆಯಾಗಿದೆ. ಮಿಮ್ಸ್ ಆಸ್ಪತ್ರೆ ಸಾಮಾನ್ಯ ಹೆರಿಗೆ ಪ್ರಕ್ರಿಯೆಗೆ ಹೆಸರುವಾಸಿಯಾಗಿದ್ದು ಜಿಲ್ಲೆಯ ಗರ್ಭಿಣಿಯರು ಮಾತ್ರವಲ್ಲದೇ ರಾಮನಗರ, ಚಾಮರಾಜನಗರ, ಮೈಸೂರು ಜಿಲ್ಲೆಗಳಿಂದಲೂ ಇಲ್ಲಿನ ಹೆರಿಗೆ ಆಸ್ಪತ್ರೆಗೆ ಬರುತ್ತಾರೆ. ಅಧಿಕ ರಕ್ತದೊತ್ತಡ, ಮಧುಮೇಹ ಹಾಗೂ ಇತರ ಆರೋಗ್ಯ ಸಮಸ್ಯೆ ಇಲ್ಲದಿದ್ದರೆ ಮಿಮ್ಸ್ ಆಸ್ಪತ್ರೆಯಲ್ಲಿ ಸಾಮಾನ್ಯ ಹೆರಿಗೆ ಮಾಡಿಸಲು ಆದ್ಯತೆ ನೀಡಲಾಗುತ್ತದೆ.
‘ಕೋವಿಡ್ ಸಂದರ್ಭದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಜಿಲ್ಲೆಯಾದ್ಯಂತ ಗರ್ಭಿಣಿಯರ ಮೇಲೆ ವಿಶೇಷ ನಿಗಾ ಇಟ್ಟಿದ್ದಾರೆ. ಸೋಂಕು ಪತ್ತೆಯಾದರೆ ಅವರನ್ನು ನೇರವಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ತಂಡ ವಿಶೇಷ ಕಾಳಜಿಯಲ್ಲಿಟ್ಟು ಹೆರಿಗೆ ಮಾಡಿಸುತ್ತಿದೆ. ಹೀಗಾಗಿ ಇಲ್ಲಿಯವರೆಗೂ ಯಾವುದೇ ತೊಂದರೆ ಉಂಟಾಗಿಲ್ಲ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಧನಂಜಯ್ ಹೇಳಿದರು.
ಒಟಿಯಲ್ಲಿ ಕಾಳಜಿ: 40ನೇ ವಾರ ಸಮೀಪಿಸುತ್ತಿರುವ ಕೋವಿಡ್ ಪೀಡಿತ ಗರ್ಭಿಣಿಯರನ್ನು ಐಸಿಯುನಲ್ಲಿ ದಾಖಲು ಮಾಡಿ ಸಕಲ ವೈದ್ಯಕೀಯ ಕಾಳಜಿ ಮೂಲಕ ಹೆರಿಗೆ ಮಾಡಿಸಲಾಗುತ್ತಿದೆ. ಆಪರೇಷನ್ ಥಿಯೇಟರ್‌ನಲ್ಲಿ ಸೋಂಕು ಹರಡುವ ಅಪಾಯ ಹೆಚ್ಚಾಗಿದ್ದು ವೈದ್ಯರು ಹಾಗೂ ಇತರ ಸಿಬ್ಬಂದಿಯ ಸುರಕ್ಷತೆಗೂ ಹೆಚ್ಚು ಆದ್ಯತೆ ನೀಡಬೇಕಾದ ಅವಶ್ಯಕತೆ ಇರುತ್ತದೆ. ಮಿಮ್ಸ್ ಒಬಿಜಿ ತಂಡ ಈ ಅಪಾಯವನ್ನು ಪರಿಣಾಮಕಾರಿಯಾಗಿ ಎದುರಿಸುತ್ತಿದೆ.
‘ಶಸ್ತ್ರಚಿಕಿತ್ಸೆಯ ವೇಳೆ ಸೋಂಕು ಹರಡದಂತೆ ಪ್ರತಿಯೊಬ್ಬರೂ ಪಿಪಿಇ ಕಿಟ್ ಸೇರಿದಂತೆ ಇತರ ಸುರಕ್ಷತಾ ಉಪಕರಣಗಳನ್ನು ಬಳಸುತ್ತೇವೆ. ಸೋಂಕಿನ ಪ್ರದೇಶವನ್ನು ಸ್ಯಾನಿಟೈಸ್ ಮಾಡುವ ರೀತಿಯಲ್ಲಿ ಆಪರೇಷನ್ ಥಿಯೇಟರ್‌ನಲ್ಲಿ ಸೋಂಕು ನಿವಾರಕ ಅನಿಲ ಸಿಂಪಡಣೆ (ಫ್ಯೂಮಿಗೇಷನ್) ಮಾಡಲಾಗುತ್ತದೆ. ಜೊತೆಗೆ ತಾಯಿಯಿಂದ ಮಗುವಿಗೆ ಸೋಂಕು ಹರಡದಂತೆ ಎಲ್ಲಾ ರೀತಿಯ ಎಚ್ಚರಿಕೆಯ ಕ್ರಮ ಕೈಗೊಳ್ಳಲಾಗಿದೆ’ ಎಂದು ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞ ಡಾ.ಯೋಗೇಂದ್ರ ಕುಮಾರ್ ಹೇಳಿದರು.
ಪ್ರಧಾನಿ ಕಚೇರಿಯಿಂದ ಮೆಚ್ಚುಗೆ
ಕೋವಿಡ್ ಸಂಕಷ್ಟದ ಆರಂಭ ಕಾಲದಲ್ಲಿ ಮಿಮ್ಸ್ ಆಸ್ಪತ್ರೆಯ ಡಾ.ಯೋಗೇಂದ್ರ ಕುಮಾರ್ ಹಾಗೂ ತಂಡದ ಸದಸ್ಯರು ಮಳವಳ್ಳಿ ತಾಲ್ಲೂಕಿನ ಕೋವಿಡ್ ಗರ್ಭಿಣಿಯೊಬ್ಬರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದರು. ಕೋವಿಡ್ ಪೀಡಿತ ಗರ್ಭಿಣಿಯರಿಗೆ ಚಿಕಿತ್ಸೆ ನೀಡಲು ವೈದ್ಯರು ಹಿಂಜರಿಯುತ್ತಿದ್ದ ಕಾಲದಲ್ಲಿ ಇಲ್ಲಿಯ ತಂಡ ಸೋಂಕು ಮಗುವಿಗೆ ಹರಡದಂತೆ ತಡೆಯುವಲ್ಲಿ ಯಶಸ್ವಿಯಾಗಿತ್ತು. ಇದು ದೇಶದಾದ್ಯಂತ ಸುದ್ದಿಯಾಗಿತ್ತು.
‘ನಮ್ಮ ಪ್ರಯತ್ನ ವೈದ್ಯರು ಹಾಗೂ ಇತರ ಸಿಬ್ಬಂದಿಗೆ ಸ್ಫೂರ್ತಿ ತುಂಬಿತು. ನಮ್ಮ ಶ್ರಮದ ಫಲವಾಗಿ ಪ್ರಧಾನಿ ಕಚೇರಿಯಿಂದಲೇ ಕರೆ ಬಂದಿತ್ತು, ನಮ್ಮ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು’ ಎಂದು ಡಾ.ಯೋಗೇಂದ್ರ ಕುಮಾರ್ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.