ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದವರ ಹಾಸ್ಟೆಲ್ ಟೆಂಡರ್ ಜಾಲ: ಏಲಕ್ಕಿಗೆ ಕೇವಲ ₹ 20!

ಕಿಲೋ ಏಲಕ್ಕಿಗೆ ₹ 20; ಗೋಡಂಬಿಗೆ ₹ 50!
Last Updated 2 ಡಿಸೆಂಬರ್ 2021, 2:41 IST
ಅಕ್ಷರ ಗಾತ್ರ

ಬೆಂಗಳೂರು: ಒಂದು ಕಿಲೋ ಏಲಕ್ಕಿಗೆ ಕೇವಲ ₹ 20. ಕಾಳುಮೆಣಸು, ಸಾಸಿವೆ, ಜೀರಿಗೆ, ಅರಿಸಿನಪುಡಿಗೆ ತಲಾ ₹ 30, ಒಣ ದ್ರಾಕ್ಷಿಗೆ ₹ 40, ಗಸಗಸೆಗೆ ₹ 30, ಗೋಡಂಬಿಗೆ ₹ 50, ಮೆಂತ್ಯೆಗೆ ₹ 10!

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧೀನದ ಮೆಟ್ರಿಕ್ ಪೂರ್ವ, ಮೆಟ್ರಿಕ್‌ ನಂತರದ ವಿದ್ಯಾರ್ಥಿನಿಲಯಗಳು, ಆಶ್ರಮ ಶಾಲೆಗಳು ಹಾಗೂ ವಸತಿ ಶಾಲೆಗಳಿಗೆ ಆಹಾರ ಸಾಮಗ್ರಿಗಳನ್ನು ಪೂರೈಸುವ ಟೆಂಡರ್‌ ಪಡೆಯಲು (ಎಲ್‌–1) ಗುತ್ತಿಗೆದಾರರೊಬ್ಬರು ಹಣಕಾಸು ಬಿಡ್‌ನಲ್ಲಿ ನಮೂದಿಸಿದ್ದ ದರವಿದು. ಅಚ್ಚರಿಯೆಂದರೆ, ಈ ದರ ಪಟ್ಟಿಯು ಟೆಂಡರ್‌ ಗಿಟ್ಟಿಸಿ, ‘ಕಮಿಷನ್‌’ ಪಡೆಯಲಷ್ಟೇ ಸೀಮಿತ.

ಏನಿದು ಕರಾಮತ್ತು?: ವಿದ್ಯಾರ್ಥಿನಿಲಯಗಳಿಗೆ ಗುತ್ತಿಗೆದಾರ ಯಾವುದೇ ಆಹಾರ ಸಾಮಗ್ರಿ ಪೂರೈಸುವುದಿಲ್ಲ. ಅದರ ಬದಲು, ವಿದ್ಯಾರ್ಥಿನಿಲಯಗಳ ಮೇಲ್ವಿಚಾರಕರ ಮೂಲಕ ತಾನು ಟೆಂಡರ್‌ ದರ ಪಟ್ಟಿಯಲ್ಲಿ ‘ಮಾರುಕಟ್ಟೆ ದರ’ ನಮೂದಿಸಿದ್ದ ವಸ್ತುಗಳನ್ನು ಅಗತ್ಯಕ್ಕಿಂತ 3–4 ಪಟ್ಟು ಹೆಚ್ಚು ಪ್ರಮಾಣದಲ್ಲಿ ಖರೀದಿಗೆ ಇಂಡೆಂಟ್‌ ಹಾಕಿಸಿಕೊಂಡು ಬಿಲ್ ಮೊತ್ತ ಮರುಪಾವತಿಸಿಕೊಳ್ಳುತ್ತಾನೆ. ಒಟ್ಟು ಬಿಲ್‌ನಲ್ಲಿ ತನ್ನ ಕಮಿಷನ್‌ (ಶೇ 20) ಮತ್ತು ಮೇಲಧಿಕಾರಿಗಳ ಕಮಿಷನ್ (ಪ್ರತಿ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿಗೆ ₹ 150, ಮೆಟ್ರಿಕ್‌ ನಂತರದ ವಿದ್ಯಾರ್ಥಿಗೆ ₹ 170) ಕಡಿತ ಮಾಡಿ, ಉಳಿಕೆ ಹಣವನ್ನು ಮೇಲ್ವಿಚಾರಕರಿಗೆ ಹಿಂದಿರುಗಿಸುತ್ತಾನೆ. ಮೇಲ್ವಿಚಾರಕರೇ ಆಹಾರ ಸಾಮಗ್ರಿಗಳನ್ನು ಮಾರುಕಟ್ಟೆ ದರದಲ್ಲಿ ಖರೀದಿಸಿ ವಿದ್ಯಾರ್ಥಿನಿಲಯ ನಡೆಸುತ್ತಾರೆ. ಗುತ್ತಿಗೆದಾರ ಮರಳಿಸಿದ ಹಣದಲ್ಲಿ ಹಾಸ್ಟೆಲ್‌ನ ಆಹಾರ ವೆಚ್ಚವನ್ನು ಸರಿತೂಗಿಸಬೇಕು. ಆಹಾರ ಸಾಮಗ್ರಿ ಪೂರೈಸದೇ, ‘ಕಮಿಷನ್‌’ ನುಂಗುವ ವ್ಯವಹಾರವಿದು’ ಎಂದು ಇಲಾಖೆಯ ಅಧಿಕಾರಿಯೊಬ್ಬರು ವಿವರಿಸಿದರು.

ಇಷ್ಟೊಂದು ಕಡಿಮೆ ದರ ನಮೂದಿಸಿ ಲಾಭ ಮಾಡಿಕೊಳ್ಳಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಕಾಡದಿರದು. ಆದರೆ, ಟೆಂಡರ್‌ ಪಟ್ಟಿಯಲ್ಲಿ ಅತಿ ಕಡಿಮೆ ದರ ನಮೂದಿಸಿದ ಸಾಮಗ್ರಿಗಳನ್ನು ಗುತ್ತಿಗೆದಾರರಿಗೆ ಕಳುಹಿಸುವ ಇಂಡೆಂಟ್‌ನಲ್ಲಿ ಮೇಲ್ವಿಚಾರಕರು ನಮೂದಿಸುವುದೇ ಇಲ್ಲ. ಮಾರುಕಟ್ಟೆ ದರಕ್ಕೆ ಹತ್ತಿರವಾಗಿ ಟೆಂಡರ್‌ನಲ್ಲಿ ನಮೂದಿಸಿರುವ ಆಹಾರ ಪದಾರ್ಥಗಳನ್ನು ಅತೀ ಹೆಚ್ಚು ಪ್ರಮಾಣದಲ್ಲಿ ಬೇಡಿಕೆ ಪಟ್ಟಿಯಲ್ಲಿ ಹಾಕಿ, ಇಂಡೆಂಟ್ ಕಳುಹಿಸುತ್ತಾರೆ. ಉದಾಹರಣೆಗೆ, ಏಲಕ್ಕಿ ಕೆ.ಜಿ.ಗೆ ₹ 20 ನಮೂದಿಸಿದರೂ ಅದನ್ನು ಇಂಡೆಂಟ್‌ನಲ್ಲಿ ತೋರಿಸುವುದೇ ಇಲ್ಲ. ತೊಗರಿ ಬೇಳೆ ಕೆ.ಜಿ.ಗೆ ₹ 80ರಂತೆ ನಮೂದಿಸಿದ್ದು, ಅದನ್ನು ಜಾಸ್ತಿ ಪ್ರಮಾಣದಲ್ಲಿ ಖರೀದಿಸಿದಂತೆ ಇಂಡೆಂಟ್‌ ಪಡೆದುಕೊಂಡು ಗುತ್ತಿಗೆದಾರರು ಲಾಭ ಮಾಡಿಕೊಳ್ಳುತ್ತಾರೆ!

ತುಮಕೂರು ಜಿಲ್ಲೆಯ ಎಲ್ಲ 10 ತಾಲ್ಲೂಕುಗಳಿಗೆ 101 ಆಹಾರ ಸಾಮಗ್ರಿ ಪೂರೈಕೆಯ ಟೆಂಡರ್‌ ಪಡೆದ ಗುತ್ತಿಗೆದಾರ ನಮೂದಿಸಿದ ಈ ದರ ಪಟ್ಟಿ, ಸರಬರಾಜು ಆದೇಶದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕರನ್ನೂ ಒಳಗೊಂಡ ಜಿಲ್ಲಾಮಟ್ಟದ ಆಹಾರ ಪದಾರ್ಥಗಳ ಖರೀದಿ ಸಮಿತಿ ಆಹಾರ ಪೂರೈಕೆಯ ದರ ಪಟ್ಟಿಗೆ ಅನುಮೋದನೆ ನೀಡಿದೆ.

ಆರ್ಥಿಕ ಬಿಡ್‌ನಲ್ಲಿ ಕನಿಷ್ಠ ದರ ನಮೂದಿಸಿ ಟೆಂಡರ್‌ ಪಡೆದು, ಆಹಾರ ಸಾಮಗ್ರಿ ಪೂರೈಸದೇ ಬಿಲ್‌ ಮಾಡಿಸಿಕೊಂಡು, ಗುತ್ತಿಗೆದಾರರು, ಜಿಲ್ಲಾಮಟ್ಟದ ಅಧಿಕಾರಿಗಳು ಕಮಿಷನ್‌ ಪಡೆಯುತ್ತಿರುವ ಆರೋಪ ವಿವಿಧ ಜಿಲ್ಲೆಗಳಲ್ಲಿದೆ.

‘ಕೋವಿಡ್‌ನಿಂದಾಗಿ ಕಳೆದ ಸಾಲಿನಲ್ಲಿ ವಿದ್ಯಾರ್ಥಿನಿಲಯಗಳು, ಆಶ್ರಮ ಶಾಲೆಗಳು, ವಸತಿ ಶಾಲೆಗಳು ಕಾರ್ಯನಿರ್ವಹಿಸಿಲ್ಲ. ಹೀಗಾಗಿ ಆಹಾರ ಸಾಮಗ್ರಿ ಪೂರೈಕೆ ನಡೆದಿಲ್ಲ. ಆದರೂ ಪೊರಕೆ, ಬ್ಲೀಚಿಂಗ್ ಪೌಂಡರ್‌ ಮತ್ತಿತರ ವಸ್ತುಗಳನ್ನು ಪೂರೈಸಿದ ಬಿಲ್‌ ಮಾಡಿ, ಕಮಿಷನ್‌ ಪಡೆಯಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಆಹಾರ ಸಾಮಗ್ರಿ ಪೂರೈಸಲು ಹೊಸತಾಗಿ ಇ– ಟೆಂಡರ್‌ ಪ್ರಕ್ರಿಯೆಯನ್ನೇ ನಡೆಸಿಲ್ಲ. ಕಳೆದ ಸಾಲಿನ ಗುತ್ತಿಗೆದಾರರನ್ನೇ ಮುಂದುವರಿಸಲಾಗಿದೆ’ ಎಂದೂ ಅಧಿಕಾರಿ ಹೇಳಿದರು.

ಸರ್ಕಾರ ಮೆಟ್ರಿಕ್‌ ಪೂರ್ವ ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ ₹ 1,500, ಮೆಟ್ರಿಕ್‌ ನಂತರ ಪ್ರತಿ ವಿದ್ಯಾರ್ಥಿಗೆ ₹ 1,600 ವೆಚ್ಚ ಮಾಡುತ್ತಿದೆ. ಜಿಲ್ಲಾಧಿಕಾರಿಯಿಂದ ಅನುಮೋದನೆ ಪಡೆದು ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿಗಳು ಜಿಲ್ಲಾಮಟ್ಟದಲ್ಲಿ ತಾಲ್ಲೂಕುವಾರು ಇ– ಟೆಂಡರ್‌ ಆಹ್ವಾನಿಸುತ್ತಾರೆ. 2020–21ನೇ ಸಾಲಿನಲ್ಲಿ ತುಮಕೂರು ಜಿಲ್ಲೆಯಲ್ಲಿ 10 ತಾಲ್ಲೂಕುಗಳಿಗೆ ಒಂಬತ್ತು ಟೆಂಡರ್‌ದಾರರು ತಾಂತ್ರಿಕ ಬಿಡ್‌ನಲ್ಲಿ ಭಾಗವಹಿಸಿದ್ದರು. ಅಗತ್ಯ ದಾಖಲೆಗಳನ್ನು ಸಲ್ಲಿಸದ ಇಬ್ಬರ ಬಿಡ್‌ ತಿರಸ್ಕೃತವಾಗಿತ್ತು. ಆರ್ಥಿಕ ಬಿಡ್‌ನಲ್ಲಿ ಕಡಿಮೆ ದರ ನಮೂದಿಸಿದ್ದ ಗುತ್ತಿಗೆದಾರನಿಗೆ ಸಾಮಗ್ರಿಗಳ ಪೂರೈಕೆಗೆ ಕಾರ್ಯಾದೇಶ ನೀಡಲಾಗಿದೆ.

ಗುತ್ತಿಗೆದಾರ ಪೂರೈಸುವ ಆಹಾರ ಸಾಮಗ್ರಿಗಳ ಮಾದರಿಯನ್ನು ಆಹಾರ ಗುಣಮಟ್ಟ ಪರಿಶೀಲಿಸುವ ಸರ್ಕಾರಿ ಸಂಸ್ಥೆಗಳಿಂದ ಪರಿಶೀಲನೆ ನಡೆಸಿ ವರದಿ ಪಡೆಯಲಾಗುತ್ತದೆ. ರಾಜ್ಯ ಆಹಾರ ಮತ್ತು ನೀರು ಪ್ರಯೋಗಾಲಯದ ಮುಖ್ಯ ಆಹಾರ ವಿಶ್ಲೇಷಕರು ವರದಿ ನೀಡಿದ ಬಳಿಕ ಆಹಾರ ಹಾಗೂ ಇತರ ಸಾಮಗ್ರಿಗಳ ಪೂರೈಕೆಗೆ ಆದೇಶ ನೀಡುವಂತೆ ಜಿಲ್ಲಾಮಟ್ಟದ ಆಹಾರ ಪದಾರ್ಥಗಳ ಖರೀದಿ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗೆ ಜಿಲ್ಲಾ ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಶಿಫಾರಸು ಮಾಡುತ್ತಾರೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕರೆ ಮಾಡಿದರೂ ಅವರು ಸಂಪರ್ಕಕ್ಕೆ ಲಭ್ಯರಾಗಲಿಲ್ಲ.

ಸಣ್ಣ ಪುಟ್ಟ ದುರಸ್ತಿಯಲ್ಲೂ ಕಮಿಷನ್‌!
‘ವಿದ್ಯಾರ್ಥಿನಿಲಯಗಳಲ್ಲಿ ಸಣ್ಣಪುಟ್ಟ ದುರಸ್ತಿ, ಫ್ಯಾನ್‌ ಮತ್ತಿತರ ವಸ್ತುಗಳ ಖರೀದಿಯಲ್ಲೂ ಮೇಲಧಿಕಾರಿಗಳಿಗೆ ಶೇ 30ರಿಂದ 40ರಷ್ಟು ಕೊಡಬೇಕು. ಹೀಗಾಗಿ, ಹಿರಿಯ ಅಧಿಕಾರಿಗಳ ಕಮಿಷನ್‌ ಮೊತ್ತವನ್ನು ಸೇರಿಸಿಯೇ ದುರಸ್ತಿ, ಖರೀದಿಯ ಬಿಲ್‌ ಮಾಡಬೇಕಾಗುತ್ತದೆ. ಈ ಕಮಿಷನ್‌ನಲ್ಲಿ ಜಿಲ್ಲಾಮಟ್ಟದ ಅಧಿಕಾರಿಗೆ ಶೇ 20– 25, ಉಳಿದ ಶೇ 7–10ರಷ್ಟು ತಾಲ್ಲೂಕುಮಟ್ಟದ ಅಧಿಕಾರಿಗಳಿಗೆ ಹಂಚಿಕೆಯಾಗುತ್ತದೆ. ಹಗಲು ದರೋಡೆಯಿದು’ ಎಂದೂ ಅಧಿಕಾರಿ ತಿಳಿಸಿದರು.

ನಿಯಮಗಳಿಗೆ ಅರ್ಥವೇ ಇಲ್ಲ
‘ಗುತ್ತಿಗೆದಾರ ಆಹಾರ ಸಾಮಗ್ರಿಗಳನ್ನು ವಿದ್ಯಾರ್ಥಿ ನಿಲಯಗಳಿಗೆ ತಲುಪಿಸದಿದ್ದರೆ ಟೆಂಡರ್‌ ರದ್ದುಗೊಳಿಸಿ, ಭದ್ರತಾ ಠೇವಣಿ ಮುಟ್ಟುಗೋಲು ಹಾಕಿಕೊಂಡು ಸಂಬಂಧಿಸಿದ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಬಹುದು. ಆಹಾರ ಪೂರೈಕೆಯಲ್ಲಿ ಯಾವುದೇ ದಲ್ಲಾಳಿ, ಮಧ್ಯವರ್ತಿ ಇರಬಾರದು. ಕಳಪೆ ಸಾಮಗ್ರಿ ಪೂರೈಸಿದರೆ ಅಥವಾ ತೂಕದಲ್ಲಿ ವ್ಯತ್ಯಾಸ ಕಂಡುಬಂದರೆ ಮುನ್ಸೂಚನೆ ಇಲ್ಲದೆ ಕ್ರಮ ತೆಗೆದುಕೊಳ್ಳಬಹುದು. ಸಾಮಗ್ರಿ ತಲುಪಿಸಿದ ಪ್ರತಿಯನ್ನು ಗುತ್ತಿಗೆದಾರರು ಬಿಲ್‌ ಪಾವತಿಗಾಗಿ ಸಲ್ಲಿಸಬೇಕು. ಆದರೆ, ಈ ಯಾವುದೇ ನಿಯಮ ಪಾಲನೆ ಆಗುತ್ತಿಲ್ಲ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

*
ಆಹಾರ ಸಾಮಗ್ರಿ ಖರೀದಿಗೆ ಜಿಲ್ಲಾಮಟ್ಟದ ಸಮಿತಿ ಅನುಮೋದನೆ ನೀಡುತ್ತದೆ. ಇಷ್ಟೊಂದು ಕನಿಷ್ಠ ದರಕ್ಕೆ ಟೆಂಡರ್‌ ಅಂಗೀಕಾರ ಆಗಿರುವುದನ್ನು ಗಂಭೀರವಾಗಿ ಪರಿಗಣಿಸುತ್ತೇನೆ.
-ರಶ್ಮಿ ಮಹೇಶ್‌, ಪ್ರಧಾನ ಕಾರ್ಯದರ್ಶಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

**
‘ಕಮಿಷನ್‌ ವ್ಯವಹಾರ’ದ ಸ್ವರೂಪ

ಶೇ 20: ಆಹಾರ ಸಾಮಗ್ರಿ ಪೂರೈಸದೇ ಗುತ್ತಿಗೆದಾರ ಪಡೆಯುವ ಕಮಿಷನ್‌

ಶೇ 10: ವಿದ್ಯಾರ್ಥಿಗಳ ಆಹಾರ ಮೊತ್ತದಲ್ಲಿ ಅಧಿಕಾರಿಗಳಿಗೆ

ಶೇ 30ರಿಂದ 40: ಹಾಸ್ಟೆಲ್‌ ದುರಸ್ತಿ ಬಿಲ್‌ನಲ್ಲಿ ಅಧಿಕಾರಿಗಳಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT