ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ವಿಭಜನೆ: ಆಕ್ಷೇಪಕ್ಕಿಂತ ಬೆಂಬಲವೇ ಹೆಚ್ಚು!

ಸರ್ಕಾರಕ್ಕೆ ವರದಿ ಸಲ್ಲಿಸಿದ ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತ
Last Updated 4 ಫೆಬ್ರುವರಿ 2021, 12:51 IST
ಅಕ್ಷರ ಗಾತ್ರ

ಬಳ್ಳಾರಿ: ಅಖಂಡ ಬಳ್ಳಾರಿ ಜಿಲ್ಲೆಯನ್ನು ವಿಭಜಿಸುವ ಸರ್ಕಾರದ ನಿರ್ಧಾರದ ವಿರುದ್ಧ ಸಲ್ಲಿಕೆಯಾಗಿರುವ ಆಕ್ಷೇಪಗಳಿಗಿಂತಲೂ, ಬೆಂಬಲಿಸಿ ಬರೆದ ಪತ್ರಗಳೇ ಹೆಚ್ಚಿವೆ. ಹೀಗಾಗಿ ಜಿಲ್ಲೆಯನ್ನು ವಿಭಜಿಸುವ ಸರ್ಕಾರದ ನಿರ್ಧಾರಕ್ಕೆ ಯಾವುದೇ ತಡೆ ಇಲ್ಲದಂತಾಗಿದೆ.

ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆಯನ್ನು ಸ್ಥಾಪಿಸುವ ರಾಜ್ಯ ಸರ್ಕಾರದ ನಿರ್ಧಾರದ ಪರ ಮತ್ತು ವಿರುದ್ಧ ಸಲ್ಲಿಕೆಯಾಗಿದ್ದ ಆಕ್ಷೇಪಣೆಗಳನ್ನು ಪರಿಶೀಲಿಸಿ ಜಿಲ್ಲಾಧಿಕಾರಿ ಸಲ್ಲಿಸಿರುವ ವರದಿಯಲ್ಲಿ ಆಕ್ಷೇಪಣೆಗಳ ಸಂಖ್ಯೆಯು, ಬೆಂಬಲ ಪತ್ರಗಳಿಗಿಂತಲೂ ಕಡಿಮೆ ಇರುವುದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

‘ಜಿಲ್ಲಾಧಿಕಾರಿಯು ಸಲ್ಲಿಸಿದ್ದ ವರದಿಯನ್ನು ಕಲಬುರ್ಗಿ ಪ್ರಾದೇಶಿಕ ಆಯುಕ್ತರು ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ರವಾನಿಸಿದ್ದಾರೆ. ಆ ಪತ್ರದ ಪ್ರತಿಯನ್ನು ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಮಂದಿ ಹಂಚಿಕೊಂಡಿದ್ದರು.

ಫೆ.3ರಂದು ಹೆಚ್ಚುವರಿ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ‘ವಿಭಜನೆ ವಿರುದ್ಧ 4,739 ಆಕ್ಷೇಪಗಳು ಸಲ್ಲಿಕೆಯಾಗಿದ್ದು, ವಿಭಜನೆಯನ್ನು ಬೆಂಬಲಿಸಿ 10,513 ಪತ್ರಗಳು ಸಲ್ಲಿಕೆಯಾಗಿವೆ. ಪ್ರತಿಯೊಂದು ಆಕ್ಷೇಪಣೆ ಮತ್ತು ಬೆಂಬಲಿತ ಪತ್ರವನ್ನು ಪರಿಶೀಲಿಸಿ ಜಿಲ್ಲಾಧಿಕಾರಿ ವರದಿ ಸಲ್ಲಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

‘ಕರ್ನಾಟಕ ಭೂಕಂದಾಯ ಅಧಿನಿಯಮದ ಅಡಿ ಸ್ವೀಕೃತವಾದ ಎಲ್ಲ ಸಲಹೆ ಮತ್ತು ಆಕ್ಷೇಪಣೆಗಳನ್ನು ಪರಿಶೀಲಿಸಿ ಸಮಗ್ರವಾಗಿ ಷರಾ ನಮೂದಿಸಿ ಜಿಲ್ಲಾಧಿಕಾರಿ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ವರದಿ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಶಿಫಾರಸು ಮಾಡಿದ್ದಾರೆ.

ಆಕ್ಷೇಪಣೆ: ಜಿಲ್ಲೆಯನ್ನು ವಿಭಜಿಸುವ ತೀರ್ಮಾನವನ್ನು ಕೈಗೊಂಡಿದ್ದ ಸರ್ಕಾರ ಡಿ.14ರಂದು ಆಕ್ಷೇಪಣೆಗಳನ್ನು ಆಹ್ವಾನಿಸಿ ಒಂದು ತಿಂಗಳ ಗಡುವನ್ನು ನೀಡಿತ್ತು. ಜ.14ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿತ್ತು.

ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಜಿಲ್ಲಾ ಕೇಂದ್ರದಲ್ಲಿ ಸುಮಾರು ಒಂದು ತಿಂಗಳ ಕಾಲ ಸರಣಿ ಧರಣಿ, ಪ್ರತಿಭಟನೆಯನ್ನೂ ಅಖಂಡ ಬಳ್ಳಾರಿ ಹೋರಾಟ ಸಮಿತಿಯು ಹಮ್ಮಿಕೊಂಡಿತ್ತು. ಬಂದ್‌ಗೂ ಕೂಡ ಕರೆ ನೀಡಿತ್ತು. ಇದೇ ಸಂದರ್ಭದಲ್ಲೇ ವಿಭಜನೆಯನ್ನು ಬೆಂಬಲಿಸಿ ಪಶ್ಚಿಮ ತಾಲ್ಲೂಕುಗಳಲ್ಲೂ ವಿವಿಧ ಸಂಘಟನೆಗಳು ಗಮನ ಸೆಳೆದಿದ್ದರು.

ಸರ್ಕಾರದ ನಿರ್ಧಾರ ಅಂತಿಮ: ಡಿ.ಸಿ.
ಬಳ್ಳಾರಿ: ‘ಎರಡು ದಿನಗಳ ಹಿಂದೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆಕ್ಷೇಪಣೆಗಳಲ್ಲಿ ವ್ಯಕ್ತವಾಗಿರುವ ಅಂಶಗಳು ಮತ್ತು ಬೆಂಬಲ ಪತ್ರಗಳಲ್ಲಿರುವ ಅಂಶಗಳ ಕುರಿತ ಟೀಕುಗಳನ್ನಷ್ಟೇ ದಾಖಲಿಸಿರುವೆ. ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ. ಸರ್ಕಾರದ ನಿರ್ಧಾರವೇ ಅಂತಿಮ’ ಎಂದು ಜಿಲ್ಲಾಧಿಕಾರಿ ಪವನ್‌ಕುಮಾರ್‌ ಮಾಲಪಾಟಿ ‘ಪ್ರಜಾವಾಣಿ’ಗೆ ತಿಳಿಸಿದರು.

*
ನಮ್ಮ ಆಕ್ಷೇಪಣೆಗಳನ್ನು ಗಂಭೀರವಾಗಿ ಪರಿಗಣಿಸದೆ ಜಿಲ್ಲೆಯನ್ನು ವಿಭಜಿಸಿದರೆ ಕಾನೂನು ಹೋರಾಟ ನಡೆಸುತ್ತೇವೆ.
–ಸಿರಿಗೇರಿ ಪನ್ನರಾಜ್, ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ಮುಖಂಡ

*
ವಿಜಯನಗರ ಜಿಲ್ಲೆಯಾಗುವವರೆಗೂ ನಮ್ಮ ಹೋರಾಟ ನಡೆಯುತ್ತಲೇ ಇರುತ್ತದೆ.
–ಕೆರೆ ಕೊಟ್ರೇಶ್‌, ವಿಭಜನೆಯ ಬೆಂಬಲಿಗರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT