ಸೋಮವಾರ, ಮೇ 17, 2021
21 °C

ಮತಪತ್ರ ಜಾಲತಾಣದಲ್ಲಿ ಹರಿಬಿಟ್ಟ ವ್ಯಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಗೋಪ್ಯ ಮತದಾನ ನಿಯಮ ಉಲ್ಲಂಘಿಸಿ ತಾಲ್ಲೂಕಿನ ಜಂಬಗಾ (ಬಿ) ಗ್ರಾಮದ ವ್ಯಕ್ತಿಯೊಬ್ಬರು ತಾವು ಮತ ಚಲಾಯಿಸಿದ ಮತಪತ್ರದ ಚಿತ್ರ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಮತಗಟ್ಟೆಯೊಳಗೆ ಮೊಬೈಲ್ ಕೊಂಡೊಯ್ಯುವುದು ನಿಷೇಧಿಸಿದ್ದರೂ ವ್ಯಕ್ತಿ ಮೊಬೈಲ್ ಒಯ್ದು ತಾವು ಮತ ಹಾಕಿದ ಮತಪತ್ರದ ಚಿತ್ರ ತೆಗೆದಿದ್ದಾರೆ.

ಮರು ಮತದಾನ: ಅಭ್ಯರ್ಥಿಯೊಬ್ಬರು ಕೇಳಿದ ಚಿಹ್ನೆಯ ಬದಲು ಬೇರೆ ಚಿಹ್ನೆ ಮತಪತ್ರದಲ್ಲಿ ಮುದ್ರಣಗೊಂಡಿದ್ದ ರಿಂದ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಕಿಣ್ಣಿ ಸಡಕ್ ಗ್ರಾಮದ 1ನೇ ವಾರ್ಡ್‌ಗೆ ನಡೆಯುತ್ತಿದ್ದ ಮತದಾನವನ್ನು ರದ್ದುಗೊಳಿಸಿ ಡಿ. 24ಕ್ಕೆ ಮುಂದೂಡಲಾಗಿದೆ. 

ವಾರ್ಡ್ ಸಂಖ್ಯೆ 1ರಲ್ಲಿ ಸ್ಪರ್ಧಿಸಿರುವ ಜಯರಾಜ ಹಲಗೆ ಅವರ ಚಿಹ್ನೆ ತುತ್ತೂರಿ ಇತ್ತು. ಆದರೆ, ಮತಪತ್ರದಲ್ಲಿ ಕಹಳೆ ಊದುತ್ತಿರುವ ಚಿಹ್ನೆ ಮುದ್ರಣ ಗೊಂಡಿತ್ತು.

ಇದರಿಂದ ಗೊಂದಲಕ್ಕೊಳಗಾದ ಅಭ್ಯರ್ಥಿ ಜಯರಾಜ ಈ ಬಗ್ಗೆ ಚುನಾವಣಾಧಿಕಾರಿಗೆ ದೂರು ನೀಡಿದರು. ಲೋಪವಾಗಿದ್ದನ್ನು ಒಪ್ಪಿ ಕೊಂಡ ತಹಶೀಲ್ದಾರ್ ರಮೇಶ್ ಪೆದ್ದೆ ಅವರು ಇದೇ 24ರಂದು ಮರು ಮತ ದಾನ ನಡೆಸಲಾಗುವುದು ಎಂದು ಘೋಷಿಸಿದರು.

ಮುಂಬೈನಿಂದ ಬಂದು ಮತದಾನ: ಕೂಲಿ ಕೆಲಸಕ್ಕಾಗಿ ಮಹಾರಾಷ್ಟ್ರದ ಮುಂಬೈ, ಪುಣೆ, ಕಲ್ಯಾಣ್‌ಗೆ ತೆರಳಿದ್ದ ನೂರಾರು ಜನರು ಗ್ರಾಮಗಳಿಗೆ ಬಂದು ಮತದಾನದಲ್ಲಿ ಭಾಗವಹಿಸಿದರು. ಕೆಲವರನ್ನು ಅಭ್ಯರ್ಥಿಗಳೇ ಕರೆಸಿಕೊಂಡಿದ್ದರೆ, ಇನ್ನು ಕೆಲವರು ಸ್ವಂತ ಖರ್ಚು ಮಾಡಿಕೊಂಡು ಬಂದಿದ್ದಾರೆ ಎಂದು ಜನ ಮಾತನಾಡಿಕೊಂಡರು.

ಹಣ ಹಂಚಿಕೆ ವಿಡಿಯೊ ವೈರಲ್‌: ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಅರಕೇರಾ ಗ್ರಾಮದ ಮತಗಟ್ಟೆ ಬಳಿ ಕೆಲ ಮತದಾರರಿಗೆ ಅಭ್ಯರ್ಥಿ ಪರ ವ್ಯಕ್ತಿಯೊಬ್ಬರು ₹ 500 ಮುಖಬೆಲೆಯ ನೋಟ್‌ಗಳನ್ನು ಹಂಚು ತ್ತಿರುವ ವಿಡಿಯೊ ವೈರಲ್‌ ಆಗಿದೆ.

ಇವಿಎಂನಲ್ಲಿ ಮತ ಹಕ್ಕು ಚಲಾವಣೆ: ಬೀದರ್‌ ಜಿಲ್ಲೆಯಲ್ಲಿ ಎರಡನೇ ಬಾರಿಗೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್‌ ಮತಯಂತ್ರ ಬಳಸಲಾ ಯಿತು. ಏಕ ಸದಸ್ಯ ವಾರ್ಡ್‌ಗಳಲ್ಲಿ ಸಮಸ್ಯೆ ಕಂಡು ಬರಲಿಲ್ಲ. ಬಹು ಸದಸ್ಯ ಸ್ಥಾನಗಳು ಇರುವ ಕಡೆ ಹಿರಿಯರು ಗೊಂದಲದಲ್ಲೇ ಮತದಾನ ಮಾಡಿದರು. 

ಮಂಠಾಳ ಹಾಗೂ ಶಿರೂರು ಗ್ರಾಮದಲ್ಲಿ ಬೆಳಿಗ್ಗೆ ಮತಯಂತ್ರಗಳೇ ಆರಂಭವಾಗಲಿಲ್ಲ.

ಹೀಗಾಗಿ ತಕ್ಷಣ ಬೇರೆ ಮತಯಂತ್ರಗಳನ್ನು ಜೋಡಿ ಸಲಾಯಿತು. ಚಿಟಗುಪ್ಪ ತಾಲ್ಲೂಕಿನ ನಿರ್ಣಾದ ಮತಗಟ್ಟೆ ಸಂಖ್ಯೆ 7ರಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಮತದಾನ 2 ತಾಸು ವಿಳಂಬವಾಗಿ ಆರಂಭವಾಯಿತು.

ಮತ ಚಲಾಯಿಸಿ ಮೃತಪಟ್ಟ ವೃದ್ಧ: ಚಿಟಗುಪ್ಪ ತಾಲ್ಲೂಕಿನ ಕರಕನಳ್ಳಿ ಗ್ರಾಮದ ಚಾಂದಪಾಷಾ (99) ಅವರು ಕುಟುಂಬದ ಸದಸ್ಯರೊಂದಿಗೆ ವ್ಹೀಲ್ ಚೇರ್‌ನಲ್ಲಿ ಮತಗಟ್ಟೆಗೆ ಬಂದು ಮತಚಲಾಯಿಸಿ ಮನೆ ತಲುಪಿದ ತಕ್ಷಣ ಮೃತಪಟ್ಟಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು