ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರೋರಾತ್ರಿ ಒಕ್ಕಲೆಬ್ಬಿಸಿದ ಪೊಲೀಸರು: ನೆಲೆಗಾಗಿ ವಲಸಿಗರ ಅಲೆದಾಟ

ಲಾಕ್‌ಡೌನ್‌: ಬಲೂನು ವ್ಯಾಪಾರಿಗಳ ಅಳಲು ಆಲಿಸುವವರೇ ಇಲ್ಲ
Last Updated 31 ಮೇ 2021, 3:15 IST
ಅಕ್ಷರ ಗಾತ್ರ

ಬೆಂಗಳೂರು: ಅವರೆಲ್ಲಾ ಮಧ್ಯಪ್ರದೇಶದವರು. ಸುಮಾರು12 ವರ್ಷಗಳಿಂದ ಮಾಗಡಿ ರಸ್ತೆ ಟೋಲ್‌ಗೇಟ್‌ ಸಮೀಪದ ಶನೇಶ್ವರ ದೇವಾಲಯದ ಸುತ್ತಮುತ್ತ ಟೆಂಟ್‌ಗಳಲ್ಲಿ ವಾಸಿಸುತ್ತಿದ್ದರು.

ಲಾಕ್‌ಡೌನ್‌ ಕಾರಣ ಬದುಕಿಗೆ ಆಧಾರವಾಗಿದ್ದ ಬಲೂನು ವ್ಯಾಪಾರ ನಿಂತಿದ್ದರೂ ದಾನಿಗಳು ನೀಡಿದ ದಿನಸಿ ಕಿಟ್‌ ಹಾಗೂ ಆಹಾರದ ಪೊಟ್ಟಣಗಳನ್ನು ಪಡೆದು ಹೇಗೋ ಬದುಕು ಸಾಗಿಸುತ್ತಿದ್ದರು. ಇತ್ತೀಚೆಗೆ ರಾತ್ರೋರಾತ್ರಿ ಅವರ ಬಿಡಾರಗಳ ಮೇಲೆ ದಾಳಿ ನಡೆಸಿದ ಪೊಲೀಸರು ಸುಮಾರು15 ಕುಟುಂಬವನ್ನು ಅಲ್ಲಿಂದ ಹೊರ ಹಾಕಿದ್ದಾರೆ.

ಇವರೆಲ್ಲಾ ಈಗ ದೋಬಿ ಘಾಟ್‌ ಸಿಗ್ನಲ್‌ ಸಮೀಪದ ಮೇಲ್ಸೇತುವೆ ಕೆಳಗಡೆ ಆಶ್ರಯ ಪಡೆದಿದ್ದಾರೆ.ಇಲ್ಲಿಂದಲೂ ಜಾಗ ಖಾಲಿ ಮಾಡುವಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಅಧಿಕಾರಿಗಳು ಸೂಚಿಸಿ
ದ್ದಾರೆ. ಎಲ್ಲಾದರೂ ಹೋಗಿ, 15 ದಿನ ನಮ್ಮ ಕಣ್ಣಿಗೆ ಕಾಣಿಸಿಕೊಳ್ಳಬೇಡಿ ಎಂದು ತಾಕೀತು ಮಾಡಿದ್ದಾರೆ. ಒಂದೆಡೆ ಕೊರೊನಾ ಹರಡುವ ಭೀತಿ ಕಾಡುತ್ತಿದೆ. ಊರಿಗೆ ಹೋಗೋಣವೆಂದರೆ ಬಸ್‌ಗಳೂ ಇಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲಿಗೆ ಹೋಗಬೇಕು? ಅಧಿಕಾರಿಗಳು ಹೀಗೆ ದರ್ಪ ತೋರಿದರೆ ನಮ್ಮಂತಹವರು ಬದುಕುವುದು ಹೇಗೆ? ನಾವೇನು ಅಪರಾಧ ಮಾಡಿದ್ದೇವೆ? ನಮಗೇಕೆ ಈ ಶಿಕ್ಷೆ? ಎಂದು ಪ್ರಶ್ನಿಸಿದ್ದಾರೆ.

‘ಇಷ್ಟು ವರ್ಷ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೆವು. ಪೊಲೀಸರು ಟೆಂಟ್‌ಗಳನ್ನು ಖಾಲಿ ಮಾಡುವಂತೆ ಸೂಚಿಸಿದರು. ಇಲ್ಲದಿದ್ದರೆ ಮಹಿಳೆಯರನ್ನೆಲ್ಲಾ ಆಶ್ರಮಕ್ಕೆ ಸೇರಿಸುತ್ತೇವೆ. ನಿಮ್ಮನ್ನು ಜೈಲಿಗೆ ಹಾಕುತ್ತೇವೆ ಎಂದು ಬೆದರಿಸಿದರು. ಹೀಗಾಗಿ ಚಿಕ್ಕ ಮಕ್ಕಳನ್ನು ಕರೆದುಕೊಂಡು ರಾತ್ರೋ ರಾತ್ರಿ ದೋಬಿಘಾಟ್‌ಗೆ ಬಂದೆವು. ಟೋಲ್‌ಗೇಟ್‌ ಸಮೀಪ ನಮಗೆ ಎಲ್ಲ ಸೌಕರ್ಯವಿತ್ತು. ಶೌಚಾಲಯ, ಸ್ನಾನಕ್ಕೆ ಯಾವ ಸಮಸ್ಯೆಯೂ ಇರಲಿಲ್ಲ. ಕೆಲವರು ನಾವಿರುವ ಜಾಗಕ್ಕೇ ಬಂದು ಆಹಾರದ ಪೊಟ್ಟಣ ಹಾಗೂ ದಿನಸಿ ಕಿಟ್‌ ನೀಡುತ್ತಿದ್ದರು. ಆದರೆ, ಇಲ್ಲಿ ಯಾವ ಸೌಲಭ್ಯವೂ ಇಲ್ಲ’ ಎಂದು ಮಹೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಬಳಿ ಆಧಾರ್ ಗುರುತಿನ ಚೀಟಿ ಇದೆ. ಇದರಲ್ಲಿ ಹಿಂದೆ ವಾಸ ಮಾಡುತ್ತಿದ್ದ ಸ್ಥಳದ ವಿಳಾಸವನ್ನೇ ನಮೂದಿಸಲಾಗಿದೆ. ನಮ್ಮ ಕೆಲ ಮಕ್ಕಳು ಮಕ್ಕಳ ಕಲ್ಯಾಣ ಸಮಿತಿಯಲ್ಲಿದ್ದಾರೆ. ಅವರನ್ನು ಬಿಟ್ಟು ಊರಿಗೆ ಹೋಗುವುದು ಹೇಗೆ’ ಎಂದು ಪ್ರಶ್ನಿಸಿದರು.

‘ಟೋಲ್‌ಗೇಟ್‌ ಬಳಿ ನಮಗೆ ಸೂರು ಇತ್ತು. ಆದರೆ ಇಲ್ಲಿ ಬಯಲಲ್ಲೇ ಬದುಕಬೇಕಿದೆ. ಸಣ್ಣ ಮಕ್ಕಳು ಮಳೆ, ಗಾಳಿ, ಬಿಸಿಲಿನಿಂದ ನಲುಗುತ್ತಿದ್ದಾರೆ. ಹೆಣ್ಣು ಮಕ್ಕಳು ಬಯಲಲ್ಲೇ ಮಲ, ಮೂತ್ರ ವಿಸರ್ಜಿಸಬೇಕಾಗಿದೆ. ಇದರಿಂದ ತುಂಬಾ ಮುಜುಗರ ಅನುಭವಿಸಬೇಕಾಗಿದೆ’ ಎಂದು ಶೀಲಾ ಅಳಲು ತೋಡಿಕೊಂಡರು.

‘ಚಿಕ್ಕ ಮಕ್ಕಳ ಜೊತೆ ವಯಸ್ಸಾದವರೂ ಇದ್ದಾರೆ. ಅವರನ್ನೆಲ್ಲಾ ಕರೆದುಕೊಂಡು ಎಲ್ಲಿಗೆ ಹೋಗಬೇಕು ಎಂದೇ ಗೊತ್ತಾಗುತ್ತಿಲ್ಲ. ಪೊಲೀಸರು ಭಿಕ್ಷುಕರ ಕಾಲೊನಿಗೆ ಕಳುಹಿಸುವುದಾಗಿ ಹೇಳುತ್ತಿದ್ದಾರೆ. ಅಲ್ಲಿ ಹೋದ ಮೇಲೆ ಕೊರೊನಾ ಸೋಂಕು ತಗುಲಿದರೆ ಏನು ಮಾಡಬೇಕು. ಚಿಕಿತ್ಸೆಗೆ ಹಣ ಎಲ್ಲಿಂದ ತರಬೇಕು. ಸರ್ಕಾರವು ಮಾನವೀಯ ದೃಷ್ಟಿಯಿಂದ ನಮಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಿ ಅಗತ್ಯ ದಿನಸಿ ಕಿಟ್‌ ನೀಡಿದರೆ ಹೇಗೂ ಬದುಕುತ್ತೇವೆ’ ಎಂದು ಆರ್ಯನ್‌ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT