ಮಂಗಳವಾರ, ಮಾರ್ಚ್ 9, 2021
31 °C
ಭಕ್ತರಿಂದ ಮಾರ್ದನಿಸಿದ ಶಂಭೂಕೋ ಘೋಷಣೆ

ಬನಶಂಕರಿ: ನಿಷೇಧದ ನಡುವೆ ರಥೋತ್ಸವ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬನಶಂಕರಿ (ಬಾದಾಮಿ ): ಬನಸಿರಿಯ ಸೌಂದರ್ಯದ ಮಧ್ಯೆ ಕಂಗೊಳಿಸುತ್ತಿದ್ದ ಉತ್ತರ ಕರ್ನಾಟಕದ ಶಕ್ತಿ ದೇವತೆ ಬನಶಂಕರಿ ದೇವಿ ರಥೋತ್ಸವವು ಸಂಭ್ರಮದಿಂದ ಜರುಗಿತು.

ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಾತ್ರೆ ರದ್ದು ಮಾಡಿದ್ದರೂ ಸಹ ಭಕ್ತರ ಒತ್ತಾಯದ ಮೇರೆಗೆ ರಥೋತ್ಸವಕ್ಕೆ ಅವಕಾಶ ಮಾಡಿಕೊಡಲಾಯಿತು. ಭಕ್ತರು ಬನಶಂಕರಿದೇವಿ ಶಂಭೂಕೋ, ಆದಿಶಕ್ತಿ ಪರಮೇಶ್ವರಿ ನಿನ್ನ ಪಾದಕ್ಕೆ ಶಂಭೂಕೋ ಎಂದು ಘೋಷಿಸುತ್ತ ರಥ ಎಳೆದರು.

ರಥವನ್ನು ಬಾಳೆಕಂಬ, ಧ್ವಜ, ಮತ್ತು ಪುಷ್ಪಮಾಲೆಯಿಂದ ಶೃಂಗರಿಸಲಾಗಿತ್ತು. ಮಾಡಲಗೇರಿ ಗ್ರಾಮದಿಂದ ಭಕ್ತರು ಹಳಿಬಂಡಿಯ ಮೂಲಕ  ರಥಕ್ಕೆ ಹಗ್ಗ ತಂದಿದ್ದರು. ಮೊದಲು ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿದಾಗ ಭಕ್ತರು ಬನಶಂಕರಿದೇವಿಗೆ ಶಂಭೂಕೋ ಎಂದು ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದರು.

ಪ್ರತಿವರ್ಷ ರಥವನ್ನು ಸಾಯಂಕಾಲ 5 ಗಂಟೆ 5 ನಿಮಿಷಕ್ಕೆ ಸಾಗಿಸಲಾಗುತ್ತಿತ್ತು. ಈ ಬಾರಿ 4.45 ನಿಮಿಷಕ್ಕೆ ಆರಂಭವಾಗಿ ಪಾದಗಟ್ಟೆಯವರೆಗೆ ಸಾಗಿ 4.58ಕ್ಕೆ ಸ್ವಸ್ಥಾನಕ್ಕೆ ಬಂದಿತು. ತೇರು ಬಂದು ನಿಂತಾಗ ಭಕ್ತರು ದೇವಿಗೆ ಹರ್ಷೋದ್ಘಾರ ಹಾಕಿ ಚಪ್ಪಾಳೆ ತಟ್ಟಿದರು.

ಪ್ರತಿ ವರ್ಷ ರಥೋತ್ಸವಕ್ಕೆ ಲಕ್ಷಕ್ಕೂ ಅಧಿಕ ಭಕ್ತರು ಸೇರುತ್ತಿದ್ದರು. ಈ ಬಾರಿ ಸಾವಿರಾರು ಜನರು ಸೇರಿದ್ದರು. ನಾಟಕ, ಸಿನೆಮಾ ಪ್ರದರ್ಶನ ಮತ್ತು ಅಂಗಡಿಗಳು ಇಲ್ಲದಿರುವುದರಿಂದ ಜನರು ನಿರಾಶೆಯಾಗಿ ರಥೋತ್ಸವ ಮುಗಿದ ನಂತರ ಊರಿಗೆ ಮರಳಿದರು.

ಗಾಯತ್ರಿ ಪೀಠದ ಹಂಪಿಹೇಮಕೂಟ ಶ್ರೀಗಳು, ದೇವಾಲಯ ಟ್ರಸ್ಟ್ ಕಮಿಟಿ ಅಧ್ಯಕ್ಷ ಎಂ.ಎಸ್. ಪೂಜಾರ ಮತ್ತು ಕಮಿಟಿ ಸದಸ್ಯರು, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಎಂ.ಬಿ. ಹಂಗರಗಿ, ಭೀಮಸೇನ ಚಿಮ್ಮನಕಟ್ಟಿ, ರವಿ ಕಲಬುರ್ಗಿ ಎಂ.ಎಚ್. ಚಲವಾದಿ, ಎಂ.ಡಿ. ಯಲಿಗಾರ, ಚೊಳಚಗುಡ್ಡ ಗ್ರಾಮ ಪಂಚಾಯ್ತಿ ಸದಸ್ಯರು ಮತ್ತು ಅಧಿಕಾರಿಗಳು ಇದ್ದರು. ರಥೋತ್ಸವದಲ್ಲಿ ಪೊಲೀಸ್ ಬಂದೋಬಸ್ತ್ ಬಿಗಿಯಾಗಿತ್ತು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು