ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಕಂಟೋನ್ಮೆಂಟ್‌ ರೈಲು ನಿಲ್ದಾಣಕ್ಕೆ ಸೇರಿದ ₹200 ಕೋಟಿ ಜಾಗ ಪರಭಾರೆ

Last Updated 21 ಫೆಬ್ರುವರಿ 2023, 23:15 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನ ಕಂಟೋನ್ಮೆಂಟ್‌ ರೈಲು ನಿಲ್ದಾಣಕ್ಕೆ ಸೇರಿದ ಸುಮಾರು ₹200 ಕೋಟಿ ಮೌಲ್ಯದ ಐದು ಎಕರೆ ಜಾಗವನ್ನು ಪರಭಾರೆ ಮಾಡಿದ ಪ್ರಕರಣದಲ್ಲಿ ಭೂಮಾಪನಾ ಇಲಾಖೆಯ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಕರ್ನಾಟಕ ಸರ್ಕಾರ ಮೀನಮೇಷ ಎಣಿಸುತ್ತಿದೆ. ಕರ್ನಾಟಕ ಸರ್ಕಾರದ ಈ ಧೋರಣೆಗೆ ರೈಲ್ವೆ ಇಲಾಖೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಬೆಂಗಳೂರಿನ ವಸಂತ ನಗರದ ಆಸ್ತಿ ಸಂಖ್ಯೆ 1047ರ 3,509 ಚದರ ಮೀಟರ್‌ ಜಾಗವು ಎಸ್‌.ವಜೀರ್ ಅಹ್ಮದ್‌ ಅವರ ಜಿಪಿಎದಾರರಾದ ಅಮೃತಲಾಲ್‌ ಜೈನ್‌ ಅವರಿಗೆ ಸೇರಿದ್ದು ಎಂದು ಭೂಮಾಪನ ಇಲಾಖೆಯ ವಿಚಾರಣಾಧಿಕಾರಿ
ಯಾಗಿದ್ದ ಸರಸ್ವತಿ ಹುದ್ದಾರ್‌ (ಪ್ರಸ್ತುತ ಡಿಡಿಎಲ್‌ಆರ್‌) 2014ರ ಜುಲೈ 4ರಂದು ಆದೇಶಿಸಿದ್ದರು. ‘ರೈಲ್ವೆಗೆ ಸೇರಿದ ಐದು ಎಕರೆ ಜಾಗವನ್ನು ಹುದ್ದಾರ್ ಅವರು ಖಾಸಗಿಯವರಿಗೆ ಪರಭಾರೆ ಮಾಡಿದ್ದಾರೆ. ಪ್ರಕರಣದ ತನಿಖೆ ನಡೆಸಿ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತರು ಆದೇಶಿಸಿದ್ದರು. ಆದರೆ, ಈವರೆಗೂ ಅಧಿಕಾರಿಯ ವಿರುದ್ಧ ಕ್ರಮ ಕೈಗೊಂಡಿಲ್ಲ’ ಎಂದು ರೈಲ್ವೆ ವಿಭಾಗೀಯ ವ್ಯವಸ್ಥಾಪಕರು (ಕಾಮಗಾರಿ) ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

‘ಭೂಮಾಪನಾ ಇಲಾಖೆಯ ಆಯುಕ್ತರ ಜತೆಗೆ ಈ ವಿಷಯದ ಬಗ್ಗೆ ಚರ್ಚಿಸಲಾಗಿತ್ತು. ಈ ಪ್ರಕರಣದ ಕುರಿತು ವರದಿ ಸಲ್ಲಿಸುವಂತೆ ಇಲಾಖೆಯ ಜಂಟಿ ನಿರ್ದೇಶಕರಿಗೆ ಆಯುಕ್ತರು ಸೂಚಿಸಿದ್ದರು. ಹುದ್ದಾರ್ ಅವರು ನಿಯಮಬಾಹಿರವಾಗಿ ಆದೇಶ ಹೊರಡಿಸಿ
ದ್ದಾರೆ ಎಂದು ಜಂಟಿ ನಿರ್ದೇಶಕರು 2019ರಲ್ಲೇ ವರದಿ ಸಲ್ಲಿಸಿದ್ದರು. ಹುದ್ದಾರ್‌ ಆದೇಶದಿಂದ ರೈಲ್ವೆ ಇಲಾಖೆಗೆ ಭಾರಿ ನಷ್ಟ ಉಂಟಾಗಿದೆ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಭೂಮಾಪನಾ ಇಲಾಖೆಯ ಆಯುಕ್ತರಾಗಿದ್ದ ವೈ.ಎಸ್‌.ಪಾಟೀಲ ಅವರಿಗೆ 2020ರ ನವೆಂಬರ್‌ 20ರಂದು ಪತ್ರ ಬರೆದಿದ್ದ ಕಂದಾಯ ಇಲಾಖೆಯ ಅಂದಿನ ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್ವರ ರಾವ್‌, ‘ಸರಸ್ವತಿ ಹುದ್ದಾರ್ ಅವರು ಖಾಸಗಿ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ತಪ್ಪಾಗಿ ಹಾಗೂ ದುರುದ್ದೇಶದಿಂದ ರೈಲ್ವೆ ಇಲಾಖೆಯ ಜಮೀನಿನ ದಾಖಲೆಗಳ ತಿದ್ದುಪಡಿ ಮಾಡಿ ನಷ್ಟ ಉಂಟಾಗಲು ಕಾರಣರಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈಲ್ವೆ ವಿಭಾಗೀಯ ವ್ಯವಸ್ಥಾಪಕರು (ಕಾಮಗಾರಿ) ಕೋರಿದ್ದರು. ಈ ಬಗ್ಗೆ ವರದಿ ನೀಡುವಂತೆ 2020ರ ಜುಲೈ 10ರಂದು ಪತ್ರ ಬರೆದಿದ್ದೆ.

ಆದರೆ, ಈ ವರೆಗೆ ಯಾವುದೇ ವರದಿ ಬಂದಿಲ್ಲ. ಇದು ಕೇಂದ್ರ ಸರ್ಕಾರಕ್ಕೆ ನಷ್ಟವಾಗಿರುವ ಪ್ರಕರಣವಾಗಿರುವುದರಿಂದ ವೈಯಕ್ತಿಕ ಗಮನ ಹರಿಸಿ ಏಳು ದಿನಗಳಲ್ಲಿ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದ್ದರು. ಆದರೆ, ಹುದ್ದಾರ್‌ ವಿರುದ್ಧ ಇಲಾಖೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಭೂಮಾಪನಾ ಇಲಾಖೆಯ ಆಯುಕ್ತರನ್ನಾಗಿ ಸಿ.ಎನ್‌.ಶ್ರೀಧರ್ ಅವರನ್ನು ಕರ್ನಾಟಕ ಸರ್ಕಾರ ಮಂಗಳವಾರ ನೇಮಿಸಿದೆ. ಶ್ರೀಧರ್ ಅವರು ಸರಸ್ವತಿ ಹುದ್ದಾರ್ ಅವರ ಪತಿ. ಈ ವಿಚಾರ ಅಧಿಕಾರಿಗಳ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಹುದ್ದಾರ್ ಆದೇಶದಲ್ಲಿ ಏನಿತ್ತು

1047ರ ಸ್ವತ್ತಿನ ಬಗ್ಗೆ ನಗರ ಮಾಪನಾ ಜಂಟಿ ನಿರ್ದೇಶಕರು (ದಕ್ಷಿಣ ವಲಯ) ಈ ಹಿಂದಿನ ಆದೇಶವನ್ನು ರದ್ದು ಮಾಡಿದ್ದರು. ಆ ಬಳಿಕ ಪ್ರಕರಣದ ವಿಚಾರಣೆ ನಡೆಸಲಾಯಿತು. ಆದರೆ, ರೈಲ್ವೆ ಇಲಾಖೆಯವರು ಯಾವುದೇ ದಾಖಲೆಗಳನ್ನು ಹಾಜರುಪಡಿಸಿಲ್ಲ. ಹಾಗಾಗಿ, ಅವರ ಹಕ್ಕುದಾರಿಕೆಯನ್ನು ಪರಿಗಣಿಸಿಲ್ಲ ಎಂದು ಸರಸ್ವತಿ ಹುದ್ದಾರ್ ಆದೇಶದಲ್ಲಿ ತಿಳಿಸಿದ್ದರು.

‘ಆಸ್ತಿ ಸಂಖ್ಯೆ 1047ರ ಸ್ವತ್ತು ಮತ್ತು ವಿಸ್ತೀರ್ಣವನ್ನು 1047, 1047/1, 1047/2 ಎಂದು ವಿಭಾಗಿಸಿ 1047ರ 19681 ಚದರ ಮೀಟರ್ ಜಾಗವನ್ನು ಕರ್ನಾಟಕ ಸರ್ಕಾರ ಎಂದೂ, 1047/1ರ 1032 ಚದರ ಮೀಟರ್‌ ಜಾಗವನ್ನು ಕರ್ನಾಟಕ ರೆಡ್‌ಕ್ರಾಸ್‌ ಸೊಸೈಟಿಯದ್ದು ಎಂದು ಆದೇಶ ಹೊರಡಿಸಲಾಗಿದೆ. 5ನೇ ಹೆಚ್ಚುವರಿ ಸಿಟಿ ಸಿವಿಲ್‌ ಹಾಗೂ ಸೆಷನ್ಸ್‌ ನ್ಯಾಯಾಲಯದ ಆದೇಶದ ಪ್ರಕಾರ, 3,509 ಚದರ ಮೀಟರ್‌ ಜಾಗವು ಅಮೃತಲಾಲ್‌ ಜೈನ್‌ ಸೇರಿದ್ದು ಎಂಬುದಾಗಿ ಆದೇಶಿಸಲಾಗಿದೆ’ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದರು.

****

ರೈಲ್ವೆ ಇಲಾಖೆಯಿಂದ ಪತ್ರ ಬಂದಿರುವುದು ನಿಜ. ಈ ಪ್ರಕರಣದ ಕುರಿತು ಸದ್ಯ ಹೆಚ್ಚಿನ ಮಾಹಿತಿ ಇಲ್ಲ. ಅಗತ್ಯ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು

-ಎನ್‌.ಜಯರಾಮ್‌, ಕಂದಾಯ ಇಲಾಖೆಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT