ಶನಿವಾರ, ಡಿಸೆಂಬರ್ 4, 2021
20 °C
ಕೋವಿಡ್‌ ಪರೀಕ್ಷೆ: ಎನ್‌ಸಿಬಿಎಸ್‌ನ ‘ಸಿಕ್ಯಾಂಪ್‌’; ದಿನಕ್ಕೆ 10 ಲಕ್ಷ ಕಿಟ್‌ಗಳ ಉತ್ಪಾದನೆ

ಸೋಂಕು ಪತ್ತೆ ಕಿಟ್‌ ತಯಾರಿಕೆಗೆ ಬೆಂಗಳೂರೇ ಕೇಂದ್ರ

ಎಸ್‌. ರವಿಪ್ರಕಾಶ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ವೈರಾಣುವನ್ನು ತ್ವರಿತವಾಗಿ ಪತ್ತೆ ಮಾಡಬಹುದಾದ ಕಿಟ್‌ಗಳನ್ನು ಕಡಿಮೆ ವೆಚ್ಚದಲ್ಲಿ ಮತ್ತು ಅಧಿಕ ಪ್ರಮಾಣದಲ್ಲಿ ಉತ್ಪಾದಿ ಸುವ ಹೊಣೆಗಾರಿಕೆ ಬೆಂಗಳೂರಿನ ರಾಷ್ಟ್ರೀಯ ಜೀವವಿಜ್ಞಾನಗಳ ಕೇಂದ್ರದ (ಎನ್‌ಸಿಬಿಎಸ್‌ನ) ಅಂಗ ಸಂಸ್ಥೆ ಸೆಂಟರ್‌ ಫಾರ್‌ ಸೆಲ್ಯುಲಾರ್‌ ಅಂಡ್‌ ಮಾಲೆಕ್ಯುಲಾರ್‌ ಪ್ಲಾಟ್‌ಫಾರ್ಮ್‌ಗೆ (ಸಿಕ್ಯಾಂಪ್‌) ಲಭಿಸಿದೆ.

ಜೊಲ್ಲಿನ ಹನಿಗಳ ಮೂಲಕ ಅತಿ ಬೇಗನೆ ಕೊರೊನಾ ವೈರಾಣು ಪತ್ತೆ ಮಾಡುವ ಆಧುನಿಕ ತಂತ್ರಜ್ಞಾನವೂ ಸೇರಿ; ಆಣ್ವಿಕ (ಮಾಲೆಕ್ಯುಲಾರ್‌) ಮತ್ತು ಆರ್‌ಟಿ–ಕ್ಯುಪಿಸಿಆರ್‌ (ರಿವರ್ಸ್‌ ಟ್ರಾನ್ಸ್‌ಸ್ಕ್ರಿಪ್ಷನ್) ಮಾದರಿಯಲ್ಲಿ ಕೋವಿಡ್‌ ದೃಢಪಡಿಸುವ ಕಿಟ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅವುಗಳನ್ನು ತಯಾರಿಸುವ ಯೋಜನೆಗೆ ಮುಂದಿನ ದಿನಗಳಲ್ಲಿ ಬೆಂಗಳೂರು ಕೇಂದ್ರ ಬಿಂದುವಾಗಲಿದೆ. ಸಿಕ್ಯಾಂಪ್‌‌ ಮತ್ತು ಸಣ್ಣ ಉದ್ದಿಮೆಗಳು ಜಂಟಿಯಾಗಿ ಪ್ರತಿದಿನ ಸುಮಾರು 10 ಲಕ್ಷ ಕಿಟ್‌ಗಳನ್ನು ಉತ್ಪಾದನೆ ಮಾಡಲಿವೆ.

ರಾಕ್‌ಫೆಲ್ಲರ್‌ ಫೌಂಡೇಷನ್‌ ಇದಕ್ಕೆ ಹಣಕಾಸು ನೆರವು ನೀಡಿದೆ. ಇದರಿಂದ ದೇಶದ ಮೂಲೆಮೂಲೆಯಲ್ಲೂ ಅತಿ ಸುಲಭವಾಗಿ, ಕಡಿಮೆ ವೆಚ್ಚದಲ್ಲಿ ಕೋವಿಡ್‌ ಪತ್ತೆ ಮಾಡುವ ಕಿಟ್‌ಗಳು ಲಭ್ಯವಾಗಲಿವೆ.

‘ಕೊರೊನಾ ವೈರಾಣುವಿಗೆ ಇನ್ನೂ ಪರಿಣಾಮಕಾರಿ ಔಷಧ ಅಥವಾ ಲಸಿಕೆಯನ್ನು ಕಂಡು ಹಿಡಿಯದ ಕಾರಣ ಹೆಚ್ಚುಹೆಚ್ಚು ಸಂಖ್ಯೆಯ  ಜನರನ್ನು ಪರೀಕ್ಷೆಗೆ ಒಳಪಡಿಸಿ, ಪಾಸಿಟಿವ್ ‌ಇರುವವರನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡುವುದೇ ಇರುವ ಏಕೈಕ ಉತ್ತಮ ದಾರಿ. ಇದರಿಂದ ಸಾಕಷ್ಟು ಜೀವಗಳನ್ನು ಉಳಿಸಬಹುದು. ಇದನ್ನು ಸಾಧ್ಯವಾಗಿಸಲು ಅಧಿಕ ಸಂಖ್ಯೆಯಲ್ಲಿ ಆರ್‌ಟಿ–ಪಿಎಇಆರ್‌ ಮತ್ತು ಇತರ ಮಾಲೆಕ್ಯುಲಾರ್‌ ಆಧಾರಿತ ಪರೀಕ್ಷಾ ಕಿಟ್‌ಗಳ ಅಗತ್ಯವಿದೆ’ ಎಂದು ಎನ್‌ಸಿಬಿಎಸ್‌ ನಿರ್ದೇಶಕ ಪ್ರೊ.ಸತ್ಯಜಿತ್ ಮೇಯರ್‌ ತಿಳಿಸಿದ್ದಾರೆ.

‘ಈ ಯೋಜನೆಗೆ ‘ಇಂಡಿಜಿನೈಸೇಷನ್‌ ಡಯಾಗ್ನಸ್ಟಿಕ್’‌ (ಇನ್‌ಡೆಕ್ಸ್) ಎಂದು ಹೆಸರಿಸಲಾಗಿದ್ದು, ಎನ್‌ಸಿಬಿಎಸ್‌ನ ಅಂಗಸಂಸ್ಥೆ ಸೆಂಟರ್‌ ಫಾರ್‌ ಸೆಲ್ಯುಲಾರ್‌ ಅಂಡ್‌ ಮಾಲೆಕ್ಯುಲಾರ್‌ ಪ್ಲಾಟ್‌ಫಾರ್ಮ್‌ (ಸಿಕ್ಯಾಂಪ್) ಕಿಟ್‌ಗಳ ಮಾದರಿ ಅಭಿವೃದ್ಧಿಪಡಿಸಲಿದೆ’ ಎಂದು ಅವರು ಹೇಳಿದರು.

‘ರಾಕ್‌ಫೆಲ್ಲರ್‌ ನೆರವು ಮತ್ತು ಸಣ್ಣ ಉದ್ಯಮಗಳು ಆಸಕ್ತಿ ವಹಿಸಿದ್ದರಿಂದಾಗಿ ಪ್ರತಿದಿನ 10 ಲಕ್ಷ ಕಿಟ್‌ಗಳನ್ನು ಪೂರೈಕೆ ಮಾಡಲು ಸಾಧ್ಯ. ಇನ್ನು ಕೆಲವೇ ತಿಂಗಳಲ್ಲಿ ಇದರ ಉತ್ಪಾದನೆ ಆರಂಭವಾಗಲಿದೆ’ ಎಂದು ‘ಸಿಕ್ಯಾಂಪ್‌’ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ತಸ್ಲಿಮಾರಿಫ್ ಸೈಯ್ಯೆದ್‌ ತಿಳಿಸಿದರು.

ಜೊಲ್ಲಿನ ಹನಿ ಮೂಲಕವೂ ಪರೀಕ್ಷೆ

ಜಾಗತಿಕ ಗುಣಮಟ್ಟದ ಕಿಟ್‌ಗಳನ್ನು ಅಭಿವೃದ್ಧಿಪಡಿಸುವುದರ ಜತೆಗೆ ಸಣ್ಣ ಉದ್ದಿಮೆಗಳು ಇವುಗಳನ್ನು ದೇಶೀಯ ಮಾರುಕಟ್ಟೆಗೆ ಮಾತ್ರವಲ್ಲದೆ, ಸ್ಪರ್ಧಾತ್ಮಕ ಬೆಲೆಯಲ್ಲಿ ವಿದೇಶಗಳಿಗೆ ರಫ್ತು ಮಾಡಬಹುದು. ಮಾಲೆಕ್ಯುಲಾರ್‌ ಆಧಾರಿತ ಲಾಟರಲ್‌ ಫ್ಲೋ ಆಸೇಸ್‌ ಕೋವಿಡ್‌ ಪರೀಕ್ಷೆ, ಹೊಸದಾಗಿ ಅಭಿವೃದ್ಧಿಪಡಿಸಿರುವ ಜೊಲ್ಲಿನ ಹನಿಗಳ ಮೂಲಕ ಪರೀಕ್ಷೆ ಪ್ರಮುಖವಾದವು ಎಂದು ಸತ್ಯಜಿತ್ ಮೇಯರ್‌ ಹೇಳಿದರು.

ಕೋವಿಡ್‌ ಮಾತ್ರವಲ್ಲದೆ, ಇತರ ಕಾಯಿಲೆಗಳನ್ನೂ ಸರಳವಾಗಿ ಪತ್ತೆ ಮಾಡುವ ಕಿಟ್‌ಗಳನ್ನು ಅಭಿವೃದ್ಧಿಪಡಿಸಬೇಕು. ಕ್ಯಾನ್ಸರ್‌ ಮತ್ತು ಉಷ್ಣವಲಯಗಳಲ್ಲಿ ಕಾಡುವ ಅಪರೂಪದ ಕಾಯಿಲೆಗಳ ಪತ್ತೆಗೆ ಇಂತಹ ಕಿಟ್‌ಗಳ ಅಗತ್ಯವಿದೆ ಎಂದು ಅಶೋಕ ವಿಶ್ವವಿದ್ಯಾಲಯದ ಡೀನ್‌ ಪ್ರೊ.ಎಲ್.ಎಸ್‌. ಶಶಿಧರ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು