ಮಂಗಳವಾರ, ಜೂನ್ 15, 2021
25 °C

ಬೆಂಗಳೂರು ಗಲಭೆ ಪ್ರಕರಣ | ಆರೋಪಿಗಳ ಪತ್ತೆಗೆ ಕರೆಗಳ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗಲಭೆ ನಡೆದ ಸ್ಥಳದಲ್ಲಿ ಹಾಜರಿದ್ದ ಆರೋಪಿಗಳನ್ನು ಮೊಬೈಲ್ ಕರೆಗಳ ಆಧಾರದಲ್ಲೂ ಪೊಲೀಸರು ಪತ್ತೆ ಮಾಡುತ್ತಿದ್ದಾರೆ. ವಿಡಿಯೊ ಹಾಗೂ ಕರೆಗಳ ವಿವರದಿಂದಲೇ ಆರೋಪಿಗಳಾದ ಜೆಡಿಎಸ್‌ ಮುಖಂಡ ವಾಜೀದ್, ಸಮೀವುದ್ದಿನ್ ಹಾಗೂ ಇತರರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

’ಮಂಗಳವಾರ ರಾತ್ರಿ (ಆ.11)  ಗಲಭೆ ನಡೆದ ಸ್ಥಳದಲ್ಲಿ ಸಾಕಷ್ಟು ಮಂದಿ ಸೇರಿದ್ದರು. ಅವರಲ್ಲಿ ಹಲವರು ಮೊಬೈಲ್ ಬಳಕೆ ಮಾಡಿದ್ದಾರೆ. ಕರೆಗಳ ಆಧಾರದಲ್ಲಿ ಘಟನಾ ಸ್ಥಳಕ್ಕೆ ಬಂದು ಹೋದವರ ಮಾಹಿತಿ ಸಂಗ್ರಹಿಸಲಾಗುತ್ತಿದೆ. 80 ಸಾವಿರಕ್ಕೂ ಹೆಚ್ಚು ಕರೆಗಳನ್ನು ಪರಿಶೀಲಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಬಂಧಿತ ಸಮೀವುದ್ದಿನ್ ಬಗ್ಗೆ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಮಾಹಿತಿ ನೀಡಲಾಗಿದೆ. ಕೆಲ ತಿಂಗಳ ಹಿಂದೆ ಸುದ್ದಗುಂಟೆಪಾಳ್ಯ ಹಾಗೂ ಸೋಲದೇವನಹಳ್ಳಿ ಠಾಣೆಗಳ ವ್ಯಾಪ್ತಿಯಲ್ಲಿ ಅಲ್‌–ಉಮ್ಮಾ ಸಂಘಟನೆಯ ಶಂಕಿತ ಉಗ್ರರ ನೆಲೆ ಪತ್ತೆಯಾಗಿತ್ತು. ಎನ್‌ಐಎ ಅಧಿಕಾರಿಗಳು ಸ್ಥಳೀಯ ಪೊಲೀಸರು ನೆರವಿನಿಂದ ಕಾರ್ಯಾಚರಣೆ ನಡೆಸಿದ್ದರು. ಈ ಶಂಕಿತ ಉಗ್ರರ ಜೊತೆಯಲ್ಲಿ ಸಮೀವುದ್ದೀನ್ ಒಡನಾಟ ಹೊಂದಿರುವ ಅನುಮಾನವಿದೆ’ ಎಂದೂ ಅಧಿಕಾರಿ ತಿಳಿಸಿದರು.

ದೇಶದಾದ್ಯಂತ ಸಂಘಟನೆ ವಿಸ್ತರಣೆ: ‘ಅಲ್–ಖೈದಾ ಸಂಘಟನೆಯ ಘಟಕವಾಗಿ ಜಾಕೀರ್ ರಶೀದ್ ಭಟ್ ಎಂಬಾತ ಸ್ಥಾಪಿಸಿರುವ ಅಲ್–ಹಿಂದ್ ಸಂಘಟನೆ ದೇಶದಾದ್ಯಂತ ಎರಡು ವರ್ಷಗಳಿಂದ ಸಕ್ರಿಯವಾಗಿರುವ ಮಾಹಿತಿ ಇದೆ. ಅದರ ಬೇರುಗಳನ್ನು ಪತ್ತೆ ಮಾಡಬೇಕಿದೆ’ ಎಂದು ಅಧಿಕಾರಿ ಹೇಳಿದರು.

‘ಟಿಪ್ಪು ಟೈಗರ್ ಅಲ್ಫತ್ ಟ್ರಸ್ಟ್‌ ಸ್ಥಾಪಕ
ಜೆಡಿಎಸ್ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಘಟಕದ ಅಧ್ಯಕ್ಷ ಆಗಿರುವ ವಾಜೀದ್, ಟಿಪ್ಪು ಟೈಗರ್ ಅಲ್ಫತ್ ಟ್ರಸ್ಟ್ ಸ್ಥಾಪಕ. ಗಲಭೆಗೆ ಪ್ರಚೋದನೆ ನೀಡಿದ್ದ ಆರೋಪ ಎದುರಿಸುತ್ತಿದ್ದ ಆತ ತಲೆಮರೆಸಿಕೊಂಡಿದ್ದ. ಭಾನುವಾರ ರಾತ್ರಿ ಪೂರ್ವ ವಿಭಾಗದ ಪೊಲೀಸರ ಕೈಗೆ ಆತ ಸಿಕ್ಕಿಬಿದ್ದಿದ್ದಾನೆ. ಆತನನ್ನು ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬಂಧಿತರ ವಿರುದ್ಧ ರೌಡಿ ಪಟ್ಟಿ
ಗಲಭೆ ಪ್ರಕರಣ ಸಂಬಂಧ ಬಂಧಿಸಲಾಗಿರುವ ಆರೋಪಿಗಳ ಹೆಸರನ್ನು ರೌಡಿ ಪಟ್ಟಿಯಲ್ಲಿ ಸೇರಿಸಲು ಪೊಲೀಸರು ಚಿಂತನೆ ನಡೆಸಿದ್ದು, ಈ ಸಂಬಂಧ ಠಾಣಾ ಹಂತದಲ್ಲಿ ಸಿದ್ಧತೆಗಳು ಆರಂಭವಾಗಿವೆ.

ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣೆಯಲ್ಲಿ ಇದುವರೆಗೂ 65 ಎಫ್‌ಐಆರ್‌ಗಳು ದಾಖಲಾಗಿದ್ದು, ಗಲಭೆ ಸಂಬಂಧ 300ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.

‘ಪ್ರತಿಯೊಬ್ಬರ ಮೇಲೂ 15ಕ್ಕೂ ಹೆಚ್ಚು ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಹೀಗಾಗಿ, ಅವರೆಲ್ಲರ ಹೆಸರನ್ನು ರೌಡಿ ಪಟ್ಟಿಯಲ್ಲಿ ಸೇರಿಸುವ ಬಗ್ಗೆ ಸಿದ್ಧತೆ ನಡೆದಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ನನ್ನ ಬೈಕ್‌ಗೂ ಬೆಂಕಿ: ಮೌಲ್ವಿ
ಆರೋಪಿ ಪಿ. ನವೀನ್ ವಿರುದ್ಧ ದೂರು ನೀಡಲು ಠಾಣೆಗೆ ಬಂದಿದ್ದ ಮೌಲ್ವಿ ಪಿರ್ದೋಷ್ ಪಾಷಾ ಅವರ ಬೈಕ್‌ಗೂ ಗಲಭೆ ವೇಳೆ ಬೆಂಕಿ ಹಚ್ಚಲಾಗಿದೆ. ಈ ಬಗ್ಗೆ ಸೋಮವಾರ ಮಾತನಾಡಿದ ಪಿರ್ದೋಸ್ ಪಾಷಾ, ‘ದೂರು ನೀಡಲು ನಾವು 14 ಮಂದಿ ಠಾಣೆಗೆ ಬಂದಿದ್ದೆವು. ಚೆನ್ನಾಗಿ ಮಾತನಾಡಿಸಿದ್ದ ಠಾಣೆ ಇನ್‌ಸ್ಪೆಕ್ಟರ್‌, ದೂರು ಸ್ವೀಕರಿಸಿದ್ದರು. ಆರೋಪಿ ಬಂಧಿಸುವ ಭರವಸೆ ನೀಡಿದ್ದರು’ ಎಂದರು.

‘ಎಫ್‌ಐಆರ್‌ ದಾಖಲಿಸಿಕೊಂಡು ಸ್ವೀಕೃತಿ ಪತ್ರ ನೀಡುತ್ತೇವೆ ಎಂದಿದ್ದ ಪೊಲೀಸರು, ಎರಡು ಗಂಟೆ‌ ಕಾಯುವಂತೆ ತಿಳಿಸಿದ್ದರು. ಅದರಂತೆ ನಾವೆಲ್ಲರೂ ಠಾಣೆ ಬಳಿ ಕಾಯುತ್ತ ನಿಂತಿದ್ದೆವು. ಅದೇ ಸಂದರ್ಭದಲ್ಲಿ ಠಾಣೆ ಗೇಟ್‌ ಮುರಿದು ಏಕಾಏಕಿ ಒಳಗೆ ನುಗ್ಗಿದ್ದ ಗುಂಪು, ಗಲಾಟೆ ಮಾಡಿತು. ನನ್ನ ಬೈಕ್‌ಗೂ ಬೆಂಕಿ ಹಚ್ಚಿ ಸುಟ್ಟಿತು. ಆ ಬಗ್ಗೆ ಪೊಲೀಸರಿಗೆ ಪ್ರತ್ಯೇಕ ದೂರು ನೀಡಿದ್ದೇನೆ.’

‘ಗಲಭೆ ಸೃಷ್ಟಿಸಿದವರು ಡಿ.ಜೆ.ಹಳ್ಳಿಯವರಲ್ಲ. ಅವರು ಇಲ್ಲಿಯವರಾಗಿದ್ದರೆ ಧರ್ಮಗುರುವಾದ ನನ್ನ ಮಾತು ಕೇಳುತ್ತಿದ್ದರು. ಪೊಲೀಸ್ ಠಾಣೆ ನಮಗೆ ಮಸೀದಿ ಇದ್ದಂತೆ. ಇಂತಹ ದುಷ್ಕೃತ್ಯ ಎಸಗಿರುವುದು ದುರಂತ’ ಎಂದೂ ಅವರು ಬೇಸರ ವ್ಯಕ್ತಪಡಿಸಿದರು.

ಹಿಂಸಾ ಕೃತ್ಯ ಸಹಿಸೊಲ್ಲ: ಮಾಧುಸ್ವಾಮಿ
ಕುಷ್ಟಗಿ (ಕೊಪ್ಪಳ ಜಿಲ್ಲೆ):
‘ಬೆಂಗಳೂರು ಗಲಭೆ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಶಾಸಕ ರಾಮಲಿಂಗಾರೆಡ್ಡಿ ಅವರು ಸಾಕ್ಷಿ ಸಮೇತ ಮಾಹಿತಿ ನೀಡಿದರೆ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ರಾಜ್ಯ ಸರ್ಕಾರ ಇಂಥ ಕೃತ್ಯಗಳನ್ನು ಸಹಿಸುವುದಿಲ್ಲ. ’ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಪಾಲಿಕೆ ಸದಸ್ಯರಿಬ್ಬರಿಗೆ ನೋಟಿಸ್‌
ಗಲಭೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಪಾಲಿಕೆ ಸದಸ್ಯರಾದ ಸಂಪತ್ ರಾಜ್ ಹಾಗೂ ಜಾಕಿರ್ ಅವರಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ.

ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಗಲಭೆ ಹಿಂದೆ ರಾಜಕೀಯ ಉದ್ದೇಶ ಇರುವ ಅನುಮಾನ ಸಿಸಿಬಿ ಪೊಲೀಸರಿಗೆ ಬಂದಿದೆ. ಸ್ಥಳೀಯ ಜನಪ್ರತಿನಿಧಿಗಳ ಕೈವಾಡದ ಸಾಧ್ಯತೆಯೂ ಇದೆ. ಈ ಬಗ್ಗೆ ವಿಚಾರಣೆ ಮಾಡಲೆಂದು ಪಾಲಿಕೆ ಸದಸ್ಯರಿಗೆ ನೋಟಿಸ್‌ ನೀಡಿರುವುದಾಗಿ ಗೊತ್ತಾಗಿದೆ. ‘ಮುಂದಿನ ಮೂರು ದಿನಗಳ ಒಳಗಾಗಿ ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾಕಿರ್ ಹಾಗೂ ಸಂಪತ್ ರಾಜ್ ಅವರಿಗೆ ನೋಟಿಸ್‌ನಲ್ಲಿ ತಿಳಿಸಲಾಗಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು