ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಟೆಕಿ ಅಪಹರಿಸಿ ₹ 8 ಲಕ್ಷ ಸುಲಿಗೆ

Last Updated 5 ಡಿಸೆಂಬರ್ 2022, 2:46 IST
ಅಕ್ಷರ ಗಾತ್ರ

ಬೆಂಗಳೂರು: ಸಾಫ್ಟ್‌ವೇರ್ ಎಂಜಿನಿಯರ್ ರಾಹುಲ್ ಎಂಬುವರನ್ನು ಅಪಹರಿಸಿ ₹ 8 ಲಕ್ಷ ಹಾಗೂ ಚಿನ್ನಾಭರಣ ಸುಲಿಗೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಹೊರಮಾವು ಪಿಎನ್‌ಟಿ ಬಡಾವಣೆಯ ತರುಣ್ ಗಣೇಶ್ (22), ಗೋವಿಂದಪುರ ಜಾನಕಿರಾಮ ಬಡಾವಣೆಯ ವಿಘ್ನೇಶ್ (23), ಹಳೇ ಬೈಯಪ್ಪನಹಳ್ಳಿಯ ಜೆ. ಚರೀಶ್ (23) ಹಾಗೂ ಸುಬ್ಬಣ್ಣಪಾಳ್ಯದ ಮಣಿಕಂಠ (21) ಬಂಧಿತರು. ಇವರಿಂದ ಕಾರು, ಮೊಬೈಲ್ ಹಾಗೂ ಚಾಕು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಹೂಡಿ ನಿವಾಸಿ ರಾಹುಲ್, ನ. 26ರಂದು ಕಾರಿನಲ್ಲಿ ಕಲ್ಯಾಣನಗರಕ್ಕೆ ಹೋಗಿದ್ದರು. ಅಲ್ಲಿಯೇ ಕಾರು ನಿಲುಗಡೆ ಮಾಡಿದ್ದರು. ನಂತರ, ಪಬ್‌ಗೆ ತೆರಳಲು ಆಟೊದಲ್ಲಿ ಬ್ರಿಗೇಡ್ ರಸ್ತೆಗೆ ಹೋಗಿದ್ದರು. ಬ್ರಿಗೇಡ್ ರಸ್ತೆಯಲ್ಲಿ ವ್ಯಕ್ತಿಯೊಬ್ಬರ ಪರಿಚಯವಾಗಿತ್ತು. ಕೆಲ ಯುವತಿಯರ ಫೋಟೊ ತೋರಿಸಿದ್ದ ವ್ಯಕ್ತಿ, ಅವರನ್ನು ಪರಿಚಯ ಮಾಡಿಸುವುದಾಗಿ ಹೇಳಿದ್ದ. ತಮಗೆ ಯಾವ ಯುವತಿಯೂ ಬೇಡವೆಂದು ಹೇಳಿದ್ದ ರಾಹುಲ್, ಅಲ್ಲಿಂದ ಆಟೊದಲ್ಲಿ ಪುನಃ ಕಲ್ಯಾಣ ನಗರದತ್ತ ಹೊರಟಿದ್ದರು.’

‘ಬ್ರಿಗೇಡ್ ರಸ್ತೆಯಿಂದಲೇ ರಾಹುಲ್ ಅವರನ್ನು ಹಿಂಬಾಲಿಸುತ್ತಿದ್ದ ಆರೋಪಿಗಳು, ಮಾರ್ಗಮಧ್ಯೆ ಅಡ್ಡಗಟ್ಟಿದ್ದರು. ನಂತರ, ರಾಹುಲ್‌ ಅವರನ್ನು ಒತ್ತಾಯದಿಂದ ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಕರೆದೊಯ್ದರು’ ಎಂದು ಪೊಲೀಸರು ತಿಳಿಸಿದರು.

‘ಹೊರವರ್ತುಲ ರಸ್ತೆ, ಬೆಳ್ಳಂದೂರು, ಎಲೆಕ್ಟ್ರಾನಿಕ್ ಸಿಟಿ ಹಾಗೂ ಇತರೆಡೆ ಕಾರಿನಲ್ಲಿ ಸುತ್ತಾಡಿದ್ದ ಆರೋಪಿಗಳು, ರಾಹುಲ್ ಮೇಲೆ ಹಲ್ಲೆ ಮಾಡಿದ್ದರು. ಅವರ ಬಳಿಯ ಡೆಬಿಟ್‌ ಕಾರ್ಡ್‌ಗಳನ್ನು ಪಡೆದು ಪಾಸ್‌ವರ್ಡ್ ತಿಳಿದುಕೊಂಡು ಹಣ ಡ್ರಾ ಮಾಡಿಕೊಂಡಿದ್ದರು. ಸ್ವೈಪಿಂಗ್ ಉಪಕರಣ ಮೂಲಕವೂ ಹಣ ಪಡೆದುಕೊಂಡಿದ್ದರು. ನಂತರ, ಚಿನ್ನದ ಸರವನ್ನು ಕಿತ್ತುಕೊಂಡಿದ್ದರು.’

‘ರಾಹುಲ್‌ ಅವರ ಸಹೋದರನಿಗೆ ಕರೆ ಮಾಡಿದ್ದ ಆರೋಪಿಗಳು, ಪುನಃ ₹ 2 ಲಕ್ಷ ತಂದುಕೊಡುವಂತೆ ಬೇಡಿಕೆ ಇಟ್ಟಿದ್ದರು. ಆದರೆ, ಸಹೋದರ ಹಣವಿಲ್ಲವೆಂದು ಹೇಳಿದ್ದರು. ಬಳಿಕ, ರಾಹುಲ್‌ ಅವರನ್ನು ಕಲ್ಯಾಣನಗರಕ್ಕೆ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ನಂತರವೇ ರಾಹುಲ್ ಠಾಣೆಗೆ ಬಂದು ದೂರು ನೀಡಿದ್ದಾರೆ. ₹ 8 ಲಕ್ಷ ಹಾಗೂ ಚಿನ್ನಾಭರಣ ಸುಲಿಗೆ ಆಗಿರುವುದಾಗಿ ದೂರಿನಲ್ಲಿ ವಿವರಿಸಿದ್ದಾರೆ. ಆರೋಪಿಗಳಿಂದ ನಗದು ಜಪ್ತಿ ಮಾಡಬೇಕಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT