ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು| ಮದ್ಯ ಮಾರಾಟ: ಸರ್ಕಾರದ ನಿರೀಕ್ಷೆ ಹುಸಿ!

ಒಂದೇ ತಿಂಗಳಲ್ಲಿ ₹5 ಸಾವಿರ ಕೋಟಿ ಸಂಗ್ರಹಿಸುವ ಸವಾಲು
Last Updated 4 ಮಾರ್ಚ್ 2023, 5:07 IST
ಅಕ್ಷರ ಗಾತ್ರ

ಬೆಂಗಳೂರು: ನಿರೀಕ್ಷೆಯಷ್ಟು ಮದ್ಯ ಮಾರಾಟವಾಗದೆ ಅಬಕಾರಿ ಇಲಾಖೆಯ ಲೆಕ್ಕಾಚಾರ ತಲೆಕೆಳಗಾಗಿದ್ದು, ವರಮಾನ ಸಂಗ್ರಹದ ಗುರಿ ತಲುಪಲು ಅಧಿಕಾರಿಗಳು ತಿಣುಕಾಡುತ್ತಿದ್ದಾರೆ.

ಮದ್ಯ ಮಾರಾಟದಿಂದ ಸಂಗ್ರಹಿ ಸುವ ವರಮಾನ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. 1967-68ನೇ ಸಾಲಿನಲ್ಲಿ ₹7.11 ಕೋಟಿ ಇದ್ದ ಅಬಕಾರಿ ಇಲಾಖೆ ವರಮಾನ, ಈಗ ₹30 ಸಾವಿರ ಕೋಟಿಯ ಸಮೀಪಕ್ಕೆ ಬಂದಿದೆ.

2021–22ನೇ ಸಾಲಿನಲ್ಲಿ ನಿರೀಕ್ಷೆಗಿಂತ ₹2 ಸಾವಿರ ಕೋಟಿ ಹೆಚ್ಚುವರಿ ವರಮಾನ ಸೇರಿ ಒಟ್ಟು ₹26,377 ಕೋಟಿ ಸಂಗ್ರಹವಾಗಿತ್ತು. 2022–23ನೇ ಸಾಲಿನ ಬಜೆಟ್ ಮಂಡನೆ ವೇಳೆ ₹29 ಸಾವಿರ ಕೋಟಿ ವರಮಾನ ಸಂಗ್ರಹಿಸುವ ಗುರಿ ನಿಗದಿ ಮಾಡಿಕೊಂಡಿದ್ದ ಅಬಕಾರಿ ಇಲಾಖೆ, ಮೊದಲ ಮೂರು ತಿಂಗಳಲ್ಲಿ ಸಂಗ್ರಹವಾದ ವರಮಾನ ನೋಡಿ ಗುರಿಯನ್ನು ₹32 ಸಾವಿರ ಕೋಟಿಗೆ ಹೆಚ್ಚಳ ಮಾಡಿಕೊಂಡಿತ್ತು.

ಆದರೀಗ ಏಪ್ರಿಲ್‌ನಿಂದ ಫೆಬ್ರುವರಿ ಅಂತ್ಯಕ್ಕೆ ₹27,032 ಕೋಟಿಯಷ್ಟೇ ಸಂಗ್ರಹವಾಗಿದ್ದು, ಹೆಚ್ಚುವರಿ ಗುರಿ ತಲುಪಲು ಇನ್ನೂ ₹5 ಸಾವಿರ ಕೋಟಿಯನ್ನು ಒಂದೇ ತಿಂಗಳಲ್ಲಿ ಸಂಗ್ರಹ ಮಾಡಬೇಕಿದೆ. ಹಿಂದಿನ ತಿಂಗಳುಗಳಲ್ಲಿ ಸಂಗ್ರಹವಾಗಿರುವ ವರಮಾನದ ಪಟ್ಟಿ ನೋಡಿದರೆ ಗುರಿ ತಲುಪುವುದು ಕಷ್ಟ ಎನ್ನಲಾಗುತ್ತಿದೆ.

ತಿಂಗಳವಾರು ವರಮಾನ ಸಂಗ್ರಹದ ವಿವರ ಗಮನಿಸಿದರೆ ಜೂನ್‌ನಲ್ಲಿ ₹2,979 ಕೋಟಿ ಸಂಗ್ರಹವಾಗಿರುವುದೇ ಅತಿ ಹೆಚ್ಚು. ಉಳಿದ ತಿಂಗಳಲ್ಲಿ ಸರಾಸರಿ ₹2,300 ಕೋಟಿ ಸಂಗ್ರಹವಾಗಿದ್ದು, ಡಿಸೆಂಬರ್‌ನಲ್ಲಿ ಮಾತ್ರ ₹2,611 ಕೋಟಿ ವರಮಾನ ಬಂದಿದೆ.

ಆರ್ಥಿಕ ವರ್ಷದ ಕೊನೆಯ ತಿಂಗಳಲ್ಲಿ ಮದ್ಯ ಮಾರಾಟಗಾರರ ಮೇಲೆ ಅಬಕಾರಿ ಇಲಾಖೆ ಒತ್ತಡ ಹಾಕಬಹುದು. ಆದರೆ ಈ ವರ್ಷ ಅದಕ್ಕೂ ಅವಕಾಶ ಕಡಿಮೆ ಇದೆ. ವಿಧಾನಸಭೆ ಚುನಾವಣೆ ಘೋಷಣೆಯಾಗುವ ಹೊಸ್ತಿಲಲ್ಲಿ ಇರುವುದರಿಂದ ಮದ್ಯದ ಅಂಗಡಿಗಳ ವಹಿವಾಟಿನ ಮೇಲೆ ಚುನಾವಣಾ ಆಯೋಗ ಕಣ್ಣಿಟ್ಟಿದೆ.

‘ಪ್ರತಿ ದಿನದ ಮದ್ಯದ ವಹಿವಾಟಿನ ವಿವರವನ್ನು ಈಗಾಗಲೇ ಚುನಾವಣಾ ಆಯೋಗ ಪಡೆದುಕೊಳ್ಳುತ್ತಿದೆ. ಆದ್ದರಿಂದ ನಮ್ಮ ಮೇಲೆ ಒತ್ತಡ ಹೇರುವ ಸಾಧ್ಯತೆ ಕಡಿಮೆ’ ಎನ್ನುತ್ತಾರೆ ಮದ್ಯದ ವ್ಯಾಪಾರಿಗಳು.

ಗುರಿ ತಲುಪಲು ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯ ತಯಾರಿಕಾ ಘಟಕಗಳ (ಡಿಸ್ಟಿಲರಿ) ಮೇಲೆ ಒತ್ತಡ ಹೇರುವ ಸಾಧ್ಯತೆ ಇದೆ. ಶುಲ್ಕಗಳನ್ನು ಮುಂಗಡವಾಗಿ ಪಾವತಿಸುವಂತೆ ಸೂಚನೆ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಹೆಸರು ಬಹಿರಂಗಪಡಿಸಲು ಇಚ್ಛಿಸದ, ಅಬಕಾರಿ ಇಲಾಖೆ ಅಧಿಕಾರಿಯೊಬ್ಬರು, ‘ಒಂದೇ ತಿಂಗಳಲ್ಲಿ ₹5 ಸಾವಿರ ಕೋಟಿ ಗುರಿ ತಲುಪುವುದು ಕಷ್ಟ. ಎಷ್ಟು ಸಾಧ್ಯವೋ ಅಷ್ಟು ವರಮಾನ ಸಂಗ್ರಹ ಮಾಡುತ್ತೇವೆ’ ಎಂದು ಸ್ಪಷ್ಟಪಡಿಸಿದರು.

₹30 ಸಾವಿರ ಕೋಟಿ ದಾಟುವ ವಿಶ್ವಾಸ

‘ಬಜೆಟ್‌ನಲ್ಲಿ ₹29 ಸಾವಿರ ಕೋಟಿಯ ಗುರಿ ನಿಗದಿ ಮಾಡಿಕೊಳ್ಳಲಾಗಿತ್ತು. ನಂತರ ಹೆಚ್ಚುವರಿ ₹3 ಸಾವಿರ ಕೋಟಿ ಗುರಿ ನಿಗದಿ ಮಾಡಲಾಯಿತು. ಆದರೂ, ₹30 ಸಾವಿರ ಕೋಟಿಯ ಗಡಿ ದಾಟುವ ವಿಶ್ವಾಸ ಇದೆ’ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.

‘ಮಾರ್ಚ್‌ನಲ್ಲಿ ಸರ್ಕಾರಿ ರಜೆಗಳು ಜಾಸ್ತಿ ಇದ್ದು, ಮದ್ಯ ಮಾರಾಟ ಹೆಚ್ಚಾಗುವ ಸಾಧ್ಯತೆ ಇದೆ. ಇದರ ಜತೆಗೆ ಮದ್ಯ ತಯಾರಿಕಾ ಘಟಕಗಳಿಂದ (ಡಿಸ್ಟಿಲರಿ) ಅಬಕಾರಿ ಬಾಕಿ ವಸೂಲಿಗೆ ಕರಸಮಾಧಾನ ಯೋಜನೆ ರೂಪಿಸಲಾಗಿದೆ. ಇದರಿಂದಲೂ ವರಮಾನ ಬರಲಿದೆ’ ಎಂದು ‘ಪ್ರಜಾವಾಣಿ’ಗೆ ವಿವರಿಸಿದರು.

ಅಂಕಿ–ಅಂಶ

₹24,580 ಕೋಟಿ
ಕಳೆದ ಸಾಲಿನಲ್ಲಿ ಸಂಗ್ರಹವಾಗಿದ್ದ ವರಮಾನ

₹27,032 ಕೋಟಿ
‍ಪ್ರಸಕ್ತ ಸಾಲಿನಲ್ಲಿ ಫೆಬ್ರುವರಿ ತನಕ ಸಂಗ್ರಹವಾಗಿರುವ ವರಮಾನ

₹32 ಸಾವಿರ ಕೋಟಿ
ಪ್ರಸಕ್ತ ಸಾಲಿನ ಗುರಿ

₹35 ಸಾವಿರ ಕೋಟಿ
2023–24ನೇ ಸಾಲಿನ ಗುರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT