ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳಲ್ಲಿ ಕನ್ನಡದ ಬೆಳವಣಿಗೆ ಸ್ಥಗಿತ? ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಕಳವಳ

ಭಾಷೆಗಳ ಬೆಳವಣಿಗೆ ಅಸಮತೋಲನ: ಕಳವಳ
Last Updated 19 ಡಿಸೆಂಬರ್ 2021, 9:45 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದಲ್ಲಿ ಭಾಷೆಗಳ ಬೆಳವಣಿಗೆ ಅಸಮತೋಲನದಿಂದ ಕೂಡಿದೆ. ಯುನೆಸ್ಕೊದ ಅಧ್ಯಯನ ವರದಿಯಂತೆ, 50 ವರ್ಷಗಳಲ್ಲಿ ಕನ್ನಡ ಭಾಷೆಯ ಬೆಳವಣಿಗೆಯೂ ಸ್ಥಗಿತಗೊಳ್ಳುವ ಅಪಾಯವಿದೆ’ ಎಂದು ವಿದ್ವಾಂಸ ಪುರುಷೋತ್ತಮ ಬಿಳಿಮಲೆ ಕಳವಳವ್ಯಕ್ತಪಡಿಸಿದರು.

ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ‘ಭಾರತೀಯ ಬಹುಭಾಷೆಗಳ ಭವಿಷ್ಯ’ ಕುರಿತ ಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ದೇಶದಲ್ಲಿ ಸಮಗ್ರ ರಾಷ್ಟ್ರೀಯ ಭಾಷಾ ನೀತಿಯನ್ನು ಜಾರಿಗೊಳಿಸುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ಬೆಂಗಳೂರು ಸಾಹಿತ್ಯ ಉತ್ಸವದ ಗೋಷ್ಠಿಯಲ್ಲಿ ವಿದ್ವಾಂಸ ಪುರುಷೋತ್ತಮ ಬಿಳಿಮಲೆ ಅವರು ಶನಿವಾರ ಮಾತನಾಡಿದರು. ಶಕೀರಾ ಜಬೀನ್‌ ಬಿ. ಇದ್ದಾರೆ–ಪ್ರಜಾವಾಣಿ ಚಿತ್ರ
ಬೆಂಗಳೂರು ಸಾಹಿತ್ಯ ಉತ್ಸವದ ಗೋಷ್ಠಿಯಲ್ಲಿ ವಿದ್ವಾಂಸ ಪುರುಷೋತ್ತಮ ಬಿಳಿಮಲೆ ಅವರು ಶನಿವಾರ ಮಾತನಾಡಿದರು. ಶಕೀರಾ ಜಬೀನ್‌ ಬಿ. ಇದ್ದಾರೆ–ಪ್ರಜಾವಾಣಿ ಚಿತ್ರ

‘1971ರಿಂದ 2011ರವರೆಗಿನ ಜನಗಣತಿ ಆಧಾರದಲ್ಲಿ ನಡೆಸಲಾದ ವಿಶ್ಲೇಷಣೆ ಪ್ರಕಾರ ಹಿಂದಿ ಮಾತನಾಡುವವರ ಸಂಖ್ಯೆ ಶೇ 56ರಷ್ಟು ಬೆಳವಣಿಗೆಯಾಗಿದೆ. ಆದರೆ, ಕನ್ನಡ ಮಾತನಾಡುವವರ ಸಂಖ್ಯೆ ಶೇ 3.75ರಷ್ಟು ಮಾತ್ರ ಹೆಚ್ಚಳವಾಗಿದೆ. ತಮಿಳು ಮತ್ತು ತೆಲುಗು ಭಾಷಿಕರ ಪ್ರಮಾಣ ಶೇ 9ರಷ್ಟು ಹಾಗೂ ತುಳು ಭಾಷಿಕರ ಪ್ರಮಾಣ ಶೇ 7ರಷ್ಟು ಏರಿಕೆ ಆಗಿದೆ. ಹಿಂದಿ ಭಾಷೆಗೆ ಹೋಲಿಸಿದಾಗ ಕನ್ನಡದ ಬೆಳವಣಿಗೆ ಪ್ರಮಾಣ ತೀರಾ ಕಡಿಮೆ. ಇದೇ ಪರಿಸ್ಥಿತಿ ಮುಂದುವರಿದರೆ 100 ವರ್ಷಗಳ ಬಳಿಕ ಕನ್ನಡ ಅವನತಿಯತ್ತ ಸಾಗಲಿದೆ’ ಎಂದು ಅವರು ಎಚ್ಚರಿಸಿದರು.

‘ಎಂಟನೇ ತರಗತಿವರೆಗಿನ ಕಲಿಕೆ ಮಕ್ಕಳ ಆಡುಭಾಷೆಯಲ್ಲೇ ಆಗಬೇಕು ಎಂದು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (ಎನ್‌ಇಪಿ) ಹೇಳಲಾಗಿದೆ.ರಾಜ್ಯ ಸರ್ಕಾರ ಉನ್ನತ ಶಿಕ್ಷಣದ ಹಂತದಲ್ಲಿ ಎನ್‌ಇಪಿ ಜಾರಿಗೊಳಿಸುವ ಬದಲು ಈ ಮೂಲ ಅಂಶಗಳನ್ನು ಮೊದಲು ಜಾರಿಗೊಳಿಸಬೇಕು’ ಎಂದರು.

‘ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 4ರಷ್ಟನ್ನಾದರೂ ಶಿಕ್ಷಣ ಕ್ಷೇತ್ರಕ್ಕೆ ವೆಚ್ಚ ಮಾಡಬೇಕು ಎಂದೂ ಶಿಫಾರಸು ಮಾಡಲಾಗಿದೆ. ಈ ಪ್ರಮಾಣ ಪ್ರಸ್ತುತ ಶೇ 2.8ರಷ್ಟು ಇದೆ. ಇಂತಹ ಶಿಫಾರಸುಗಳನ್ನು ಸರ್ಕಾರ ಜಾರಿಗೊಳಿಸುತ್ತದೆ ಎಂದು ಅನಿಸುವುದಿಲ್ಲ’ ಎಂದರು.

‘ದೇಶದಲ್ಲಿರುವ 19,226 ಭಾಷೆಗಳಿಗೆ ಸರ್ಕಾರಗಳು ಮನ್ನಣೆಯನ್ನೇ ನೀಡಿಲ್ಲ. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಕೇವಲ 22 ಭಾಷೆಗಳಿದ್ದು, ಅವುಗಳಲ್ಲಿ 18 ಉತ್ತರ ಭಾರತದವು. ತುಳು, ಕೊಡವ ಸೇರಿದಂತೆ 38 ಭಾಷೆಗಳನ್ನು 8ನೇ ಪರಿಚ್ಚೇದಕ್ಕೆ ಸೇರಿಸುವ ಬಗ್ಗೆ ಸೀತಾಕಾಂತ ಮಹಾಪಾತ್ರ ಸಮಿತಿ 2008ರಲ್ಲೇ ಶಿಫಾರಸು ಮಾಡಿತ್ತು. ಈಗ 99 ಭಾಷೆಗಳು ಇದಕ್ಕೆ ಅರ್ಹವಾಗಿವೆ. ಈ ಭಾಷೆಗಳನ್ನೂ ಸೇರ್ಪಡೆ ಮಾಡಿದರೆ ಸವಲತ್ತು ನೀಡಬೇಕಾಗುತ್ತದೆ ಎಂಬ ಕಾರಣಕ್ಕೆಕೇಂದ್ರವು ಎಂಟನೇ ಪರಿಚ್ಛೇದಕ್ಕೇ ತಿದ್ದುಪಡಿ ತರಲು ಸಿದ್ಧತೆ ನಡೆಸಿದೆ ಎಂಬ ಮಾಹಿತಿ ಸಿಕ್ಕಿದೆ’ ಎಂದರು.

‘ತುಳು ಮತ್ತು ಕೊಡವ ಭಾಷೆಗಳನ್ನು ರಾಜ್ಯದ ಆಡಳಿತ ಭಾಷೆಗಳೆಂದು ಪರಿಗಣಿಸಿದರೆ, ಅವುಗಳನ್ನೂ ಸಂವಿಧಾನದ ಎಂಟನೇ ಪರಿಚ್ಚೇದಕ್ಕೆ ಸೇರಿಸಬೇಕಾಗುತ್ತದೆ. ಅನೇಕ ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಆಡಳಿತ ಭಾಷೆಗಳಿವೆ. ರಾಜ್ಯ ಸರ್ಕಾರ ಇದನ್ನು ಮಾಡುತ್ತಿಲ್ಲ’ ಎಂದು ದೂರಿದರು.

ವಿದ್ವಾಂಸರಾದ ಶಕೀರಾ ಜಬೀನ್‌ ಬಿ., ‘ಆಡಳಿತದಲ್ಲಿ, ನ್ಯಾಯಾಂಗಗಳಲ್ಲಿ ನೆಲದ ಬಹುಭಾಷೆಗಳ ಬಳಕೆಗೆ ಅವಕಾಶ ಸಿಗಬೇಕು. ಆದರೆ, ಈ ವಿಚಾರದಲ್ಲಿ ಸರ್ಕಾರಗಳು ಇಬ್ಬಂದಿತನ ಪ್ರದರ್ಶಿಸುತ್ತಿವೆ’ ಎಂದು ಆರೋಪಿಸಿದರು.

‘ಅಳಿವಿನಂಚಿನಲ್ಲಿ 196 ಭಾಷೆ’
‘ಅಂಡಮಾನ್‌ನಲ್ಲಿ ಸೆರಾ ಭಾಷೆ ಮಾತನಾಡುವ ಒಬ್ಬ ವ್ಯಕ್ತಿ ಮಾತ್ರ ಉಳಿದಿದ್ದರು. ಅವರೂ 2020ರ ಏ.4ರಂದು ಕೊನೆಯುಸಿರೆಳೆದರು. ಅವರ ಭಾಷೆ ಜೊತೆ ಸಂಸ್ಕೃತಿಯನ್ನೂ ಜಗತ್ತು ಕಳೆದುಕೊಂಡಿತು. ದೇಶದಲ್ಲಿ 196 ಭಾಷೆಗಳು ಈಗ ಅಳಿವಿನಂಚಿನಲ್ಲಿವೆ. ಅವುಗಳಲ್ಲಿ 71 ಭಾಷೆಗಳು 50 ವರ್ಷಗಳಲ್ಲಿ ಸಂಪೂರ್ಣ ನಾಶವಾಗಲಿವೆ. 101 ಭಾಷೆಗಳ ಅಸ್ತಿತ್ವ ತೀವ್ರ ಅಪಾಯಕ್ಕೆ ಸಿಲುಕಿದೆ’ ಎಂದು ಪುರುಷೋತ್ತಮ ಬಿಳಿಮಲೆ ಬೇಸರ ವ್ಯಕ್ತಪಡಿಸಿದರು.

ಅಂಕಿ ಅಂಶ
19,569:
2011ರ ಜನಗಣತಿ ಪ್ರಕಾರ ದೇಶದಲ್ಲಿರುವ ಒಟ್ಟು ಭಾಷೆಗಳು
40:ಹತ್ತು ಲಕ್ಷಕ್ಕಿಂತಲೂ ಹೆಚ್ಚು ಜನರು ಮಾತನಾಡುವ ಭಾಷೆಗಳು
60:ಒಂದು ಲಕ್ಷಕ್ಕಿಂತ ಹೆಚ್ಚು ಜನರು ಮಾತನಾಡುವ ಭಾಷೆಗಳು
122:ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಬಳಸುವ ಭಾಷೆಗಳು
343:ಕೇಂದ್ರ, ರಾಜ್ಯ ಸರ್ಕಾರಗಳ ಮನ್ನಣೆ ಪಡೆದ ಒಟ್ಟು ಭಾಷೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT