ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸ್ಥಳೀಯರಿಗೆ ಎಲ್ಲಿದೆ ದಾರಿ?

ಮಂಡ್ಯ ಬೈಪಾಸ್‌ ಕಾಮಗಾರಿ ಅಂತಿಮ ಹಂತಕ್ಕೆ, ಜನರ ಪ್ರಶ್ನೆಗಳಿಗೆ ಸಿಗದ ಉತ್ತರ
Last Updated 12 ಜನವರಿ 2023, 6:16 IST
ಅಕ್ಷರ ಗಾತ್ರ

ಮಂಡ್ಯ: ‘ದಶಪಥ ಕಾಮಗಾರಿಯಲ್ಲಿ ಬೆಂಗಳೂರು ಹಾಗೂ ಮೈಸೂರು ನಗರ ಸಂಪರ್ಕಕ್ಕೆ ಮಾತ್ರ ಮಹತ್ವ ನೀಡಿದ್ದು ಸ್ಥಳೀಯ ನಗರ, ಪಟ್ಟಣ, ಹಳ್ಳಿಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮೈಸೂರು– ಬೆಂಗಳೂರಿನಿಂದ ಸ್ಥಳೀಯರನ್ನು ಬೇರ್ಪಡಿಸಿದೆ’ ಎಂಬ ಆರೋಪ ವ್ಯಾಪಕವಾಗುತ್ತಿದೆ.

ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು ಇಲ್ಲಿಯವರೆಗೂ ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರಗಳ ಪ್ರವೇಶ– ನಿರ್ಗಮನದ ಬಗ್ಗೆ ಸ್ಪಷ್ಟತೆ ಇಲ್ಲ. ಹೆದ್ದಾರಿ ಉದ್ಘಾಟನೆ ಕೆಲವೇ ತಿಂಗಳುಗಳಿದ್ದರೂ ಸ್ಥಳೀಯ ನಗರ, ಪಟ್ಟಣಗಳ ಸಂಪರ್ಕದ ಬಗ್ಗೆ ಹೆದ್ದಾರಿ ಪ್ರಾಧಿಕಾರ ಯಾವುದೇ ಮಾಹಿತಿ ನೀಡಿಲ್ಲ. ಬೆಂಗಳೂರು– ಮೈಸೂರು ಸಂಪರ್ಕವಷ್ಟೇ ಉದ್ದೇಶವಾಗಿದ್ದು ಹೆದ್ದಾರಿಗೆ ಭೂಮಿ ಕೊಟ್ಟವರನ್ನೂ ದೂರ ತಳ್ಳಿದೆ ಎಂದು ಆರೋಪಿಸಲಾಗಿದೆ.

ಬೈಪಾಸ್‌ಗಳು ಸಂಚಾರಕ್ಕೆ ಮುಕ್ತವಾಗಿದ್ದು ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರಕ್ಕೆ ವೋಲ್ವೊ ಸೇರಿದಂತೆ ಸಾರಿಗೆ ಸಂಸ್ಥೆಯ ಕೆಲ ಬಸ್‌ಗಳು ಬರುತ್ತಿಲ್ಲ. ಹೀಗಾಗಿ ಹತ್ತು ಪಥದ ರಸ್ತೆ ಬೆಂಗಳೂರು– ಮೈಸೂರಿಗೆ ಮಾತ್ರ ಸೀಮಿತವೇ ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ.

ಕಾಮಗಾರಿಯ ಜೊತೆಜೊತೆಗೆ ನಗರ, ಪಟ್ಟಣಗಳ ಪ್ರವೇಶ– ನಿರ್ಗಮನ ಪಥವನ್ನು ಅಂತಿಮಗೊಳಿಸದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹಳ್ಳಿಗಳ ಸಂಪರ್ಕ ಕಡಿತವಾಗಿದೆ, ವಿವಿಧೆಡೆ ಜನರು ಕಿಲೋಮೀಟರ್‌ಗಟ್ಟಲೆ ಸುತ್ತಿ ಬರಬೇಕಾಗಿದೆ. ಈ ಬಗ್ಗೆ ಹಲವು ಪ್ರತಿಭಟನೆ ನಡೆದರೂ ಅವರ ಬೇಡಿಕೆ ಈಡೇರಿಲ್ಲ. ಸಂಸದೆ ಸುಮಲತಾ ಲೋಕಸಭೆಯಲ್ಲೇ ಆಕ್ಷೇಪ ಎತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

‘ಮೈಸೂರಿನಿಂದ ಹೊರಟರೆ ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರಕ್ಕೆ ಹೋಗಬೇಕಾಗಿಲ್ಲ. ಸೀದಾ ಬೆಂಗಳೂರು ತಲುಪಬಹುದು ಎಂದು ಹೇಳುವ ಸಂಸದ ಪ್ರತಾಪ್‌ ಸಿಂಹ ದಶಪಥವನ್ನು ಬೆಂಗಳೂರು– ಮೈಸೂರಿಗೆ ಮಾತ್ರ ಸೀಮಿತಗೊಳಿಸುತ್ತಿದ್ದಾರೆ. ಅವರು ಹೆದ್ದಾರಿಯಲ್ಲಿ ಹೋಗುವಾಗ ಫೇಸ್‌ಬುಕ್‌ ನೇರಪ್ರಸಾರದಲ್ಲಿ ಇರುತ್ತಾರೆ. ಭೂಮಿ ಕೊಟ್ಟವರ ಕಡೆಗೆ ನೋಡುತ್ತಿಲ್ಲ’ ಎಂದು ಕರುನಾಡ ಸೇವಕರು ಸಂಘಟನೆ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಆರೋಪಿಸಿದರು.

ಚಿಕ್ಕಮಂಡ್ಯದಲ್ಲಿ ಪ್ರವೇಶ ಕೊಡಿ: ಚಿಕ್ಕಮಂಡ್ಯದಲ್ಲಿ ಹಾದು ಹೋಗಿರುವ ಬೈಪಾಸ್‌ನಿಂದಲೇ ನಗರದ ಪ್ರವೇಶ ಹಾಗೂ ನಿರ್ಗಮನಕ್ಕೆ ಅವಕಾಶ ನೀಡಬೇಕು ಎಂಬ ಒತ್ತಾಯ ಕೂಡ ಕೇಳಿ ಬಂದಿದೆ. ಚಿಕ್ಕಮಂಡ್ಯವು ನಗರದ ರೈಲು ನಿಲ್ದಾಣ, ಬಸ್‌ ನಿಲ್ದಾಣಕ್ಕೆ ಸಮೀಪವಿದೆ.

ಜೊತೆಗೆ ನಾಗಮಂಗಲ, ತುಮಕೂರು ಕಡೆ ತೆರಳುವ ಪ್ರಯಾಣಿಕರಿಗೂ ಅನುಕೂಲವಾಗುತ್ತದೆ. ಹೀಗಾಗಿ ಇಂಡುವಾಳು, ಅಮರಾವತಿ ಹೋಟೆಲ್‌ ಬಳಿಗಿಂತ ಚಿಕ್ಕಮಂಡ್ಯದಿಂದಲೇ ಪ್ರವೇಶ, ನಿರ್ಗಮನ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಲಾಗಿದೆ.

‘ಹೆದ್ದಾರಿ ಉದ್ಘಾಟನೆಗೂ ಮೊದಲು ಪ್ರವೇಶ, ನಿರ್ಗಮನ ಕುರಿತಂತೆ ಹೆದ್ದಾರಿ ಪ್ರಾಧಿಕಾರ ಸ್ಪಷ್ಟನೆ ನೀಡಬೇಕು. ಮಂಡ್ಯ ಪ್ರವೇಶಕ್ಕೆ ಚಿಕ್ಕಮಂಡ್ಯ ಬೈಪಾಸ್‌ನಿಂದಲೇ ವ್ಯವಸ್ಥೆ ಮಾಡಬೇಕು. ಈ ಕುರಿತು ಹೋರಾಟ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಜೆಡಿಎಸ್‌ ನಾಯಕ ಕೆ.ಟಿ.ಶ್ರೀಕಂಠೇಗೌಡ ಹೇಳಿದರು.

ಸಚಿವ ಗಡ್ಕರಿ ಜೊತೆ ಚರ್ಚೆ: ಸುಮಲತಾ

‘ಭೂಮಿ ಕೊಟ್ಟ ಜನರ ಬೇಡಿಕೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಅದಕ್ಕೆ ನಾನು ಅವಕಾಶವ ನೀಡುವುದಿಲ್ಲ, ಸ್ಥಳೀಯರ ಬೇಡಿಕೆ ಈಡೇರಲೇಬೇಕು’ ಎಂದು ಸಂಸದೆ ಸುಮಲತಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೆದ್ದಾರಿಯ ನಡುವೆ ಇರುವ ಸಮಸ್ಯೆಗಳ ಚರ್ಚೆಗಾಗಿ ಇದೇ ತಿಂಗಳು ಅವಕಾಶ ನೀಡುವುದಾಗಿ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಭರವಸೆ ನೀಡಿದ್ದಾರೆ. ಅವರ ಜೊತೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು’ ಎಂದರು.

***

ಪ್ರವೇಶ– ನಿರ್ಗಮನ ನಿರ್ಮಾಣ, ಅಲ್ಲಿಯ ಟೋಲ್‌ ನಿರ್ಮಾಣಕ್ಕೆ ಹೊಸದಾಗಿ ಭೂಮಿ ಪಡೆಯಬೇಕಿದೆ. ಭೂಸ್ವಾಧೀನ ಅಧಿಸೂಚನೆ ಪ್ರಕ್ರಿಯೆ ವಾರದಲ್ಲಿ ಪೂರ್ಣಗೊಳ್ಳಲಿದೆ

- ಶ್ರೀಧರ್‌, ಯೋಜನಾ ನಿರ್ದೇಶಕ, ಹೆದ್ದಾರಿ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT