ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು–ಮೈಸೂರು ಹೆದ್ದಾರಿ ಆಗಸ್ಟ್ 15ಕ್ಕೆ ಭಾಗಶಃ ಮುಕ್ತ

ಹಂತ ಹಂತವಾಗಿ ಸಂಚಾರಕ್ಕೆ ಮುಕ್ತಗೊಳಿಸಲು ಮುಂದಾದ ಹೆದ್ದಾರಿ ಪ್ರಾಧಿಕಾರ
Last Updated 9 ಆಗಸ್ಟ್ 2022, 5:42 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರು– ಮೈಸೂರು ನಡುವಿನ ದಶಪಥ ರಾಷ್ಟ್ರೀಯ ಹೆದ್ದಾರಿಯು ಆಗಸ್ಟ್ 15ರಿಂದ ಪ್ರಯಾಣಿಕರ ಬಳಕೆಗೆ ಭಾಗಶಃ ಮುಕ್ತವಾಗಲಿದೆ.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್ ಈ ಮಾಹಿತಿ ನೀಡಿದರು.

ನಿಡಘಟ್ಟದಿಂದ ಬೆಂಗಳೂರಿನ ಕ್ರೈಸ್ಟ್‌ ಕಾಲೇಜುವರೆಗಿನ ಸುಮಾರು 51 ಕಿ.ಮೀ. ಉದ್ದದ ಹೆದ್ದಾರಿಯ ಒಂದು ಬದಿಯನ್ನು (ಒನ್‌ ವೇ) ಅಂದು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದರು.

ಸೆಪ್ಟೆಂಬರ್ 2ನೇ ವಾರದೊಳಗೆ ಇನ್ನೊಂದು ಬದಿಯ ಸಂಚಾರಕ್ಕೂ ಅವಕಾಶ ನೀಡಲಾಗುವುದು. ಸೆ. 15ರ ಒಳಗೆ ಬೆಂಗಳೂರಿನ ಮೊದಲ ನಾಲ್ಕು ಕಿ.ಮೀ ಹೆದ್ದಾರಿ ಕಾಮಗಾರಿ ಹೊರತುಪಡಿಸಿ ಉಳಿದ 51 ಕಿ.ಮೀ. ಹೆದ್ದಾರಿಯೂ ಸಂಚಾರಕ್ಕೆ ಮುಕ್ತವಾಗಲಿದೆ. ಮೊದಲಿಗೆ ಆರು ಪಥಗಳ ಎಕ್ಸ್‌ಪ್ರೆಸ್‌ ಹೈವೆ ಹಾಗೂ ನಂತರದಲ್ಲಿ ಸರ್ವೀಸ್ ರಸ್ತೆಗಳು ಪ್ರಯಾಣಿಕರಿಗೆ ಮುಕ್ತವಾಗಲಿವೆ ಎಂದು ಮಾಹಿತಿ ನೀಡಿದರು.

ಹೆದ್ದಾರಿ ಪ್ರಯಾಣಕ್ಕೆ ಅವಕಾಶ ನೀಡುವ ಮುನ್ನ ಅದರ ಸುರಕ್ಷತೆಯ ಪರೀಕ್ಷೆ ನಡೆಸಲಾಗುವುದು. ಇನ್ನೆರಡು ದಿನದಲ್ಲಿ ದೆಹಲಿಯ ಅಧಿಕಾರಿಗಳ ತಂಡವು ಹೆದ್ದಾರಿ ಸುರಕ್ಷತೆ ಕುರಿತು ಪರಿಶೀಲನೆ ನಡೆಸಲಿದೆ. ಹೆದ್ದಾರಿ ಮೊದಲ ಹಂತವು ಸಂಚಾರಕ್ಕೆ ಮುಕ್ತ ವಾದರೂ ಪ್ರಯಾಣಿಕರಿಗೆ ಸದ್ಯ ಟೋಲ್ ಹೊರೆ ಬೀಳದು. ಎರಡೂ ಹಂತದ ಕಾಮಗಾರಿಗಳು ಮುಗಿದ ಬಳಿಕವಷ್ಟೇ ಟೋಲ್‌ ಸಂಗ್ರಹ ಆರಂಭಿಸುವುದಾಗಿ ಅಧಿಕಾರಿಗಳು ವಿವರಿಸಿದರು.

ಸಚಿವರಿಂದ ತರಾಟೆ: ಇದಕ್ಕೂ ಮುನ್ನ ಸಚಿವ ಅಶ್ವತ್ಥನಾರಾಯಣ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಕಾಮಗಾರಿಯನ್ನು ವೈಜ್ಞಾನಿಕ ವಾಗಿ ನಿರ್ವಹಿಸಿಲ್ಲ. ಅಂಡರ್‌ಪಾಸ್‌ ಗಳಲ್ಲಿ ನೀರು ನಿಲ್ಲುತ್ತಿದೆ. ಬೈಪಾಸ್ ಕಾಮಗಾರಿಗಳ ಗುಣಮಟ್ಟ ಸಹ ತೃಪ್ತಿಕರವಾಗಿಲ್ಲ. ಈ ಕುರಿತು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT