ಶನಿವಾರ, ಸೆಪ್ಟೆಂಬರ್ 19, 2020
22 °C
ಬೆಂಗಳೂರು ಗಲಭೆ: ಕೆ.ಜಿ.ಹಳ್ಳಿ ಠಾಣೆಗೆ ನುಗ್ಗಿದ್ದು ಎಸ್‌ಡಿಪಿಐ ಕಾರ್ಯಕರ್ತರು

ಆರೋಪಿ ನವೀನ್‌ನನ್ನು ಕೊಲ್ಲಲು ಮಾರಕಾಸ್ತ್ರ ಸಮೇತ ಬಂದಿದ್ದರು: ತನಿಖೆಯಲ್ಲಿ ಬಹಿರಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 'ಇಸ್ಲಾಂ ಧರ್ಮದ ಸ್ಥಾಪಕ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನ ಪೋಸ್ಟ್ ಪ್ರಕಟಿಸಲಾಗಿದೆ' ಎಂದು ಆರೋಪಿಸಿ ಮಂಗಳವಾರ ರಾತ್ರಿ ಕೆ.ಜಿ. ಹಳ್ಳಿ ಠಾಣೆಗೆ ನುಗ್ಗಿ ಗಲಭೆ ಸೃಷ್ಟಿಸಿದ್ದು ಎಸ್‌ಡಿಪಿಐ ಪಕ್ಷದ ಕಾರ್ಯರ್ತರು ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಿದೆ.

ಗಲಭೆ ಸಂಬಂಧ ಕೆ.ಜಿ.ಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಗಲಭೆ ಸೃಷ್ಟಿಸಿದ್ದ ಆರೋಪಿಗಳೆಲ್ಲರೂ ಎಸ್‌ಡಿಪಿಐ ಪಕ್ಷದ ಕಾರ್ಯಕರ್ತರೆಂದು ಉಲ್ಲೇಖಿಸಲಾಗಿದೆ.

ಎಸ್‌ಡಿಪಿಐ ಪಕ್ಷದ ಅಬ್ಬಾಸ್, ಫಿರೋಜ್, ಮುಜಾಮ್ಮಿಲ್ ಪಾಷ, ಹಬೀಬ್, ಪೀರ್ ಪಾಷ, ಜಿಯಾ, ಖಲೀಂ, ಕರ್ಚಿಫ್ ಸಾದಿಕ್, ಜಾವೇದ್, ಮುಜ್ಜು ಸೇರಿದಂತೆ 17 ಮಂದಿ ವಿರುದ್ದ ಈ ಎಫ್ಐಆರ್ ದಾಖಲಾಗಿದೆ.

ಕೆ.ಜೆ.ಹಳ್ಳಿ ಠಾಣೆಯ ಇನ್‌ಸ್ಪೆಕ್ಟರ್ ಅಜಯ್ ಸಾರಥಿ ಅವರೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. 

ಕೆ.ಜಿ.ಹಳ್ಳಿ ಠಾಣೆಯಲ್ಲಿದ್ದ ಆರೋಪಿ ನವೀನ್ 

ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ್ದ ಎನ್ನಲಾದ ನವೀನ್ ವಿರುದ್ಧ ದೇವರ ಜೀವನಹಳ್ಳಿ (ಡಿ.ಜೆ.ಹಳ್ಳಿ) ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆತನನ್ನು ಬಂಧಿಸಿದ್ದ ಅಲ್ಲಿಯ ಪೊಲೀಸರು, ತಮ್ಮ ಠಾಣೆ ಎದುರು ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಪಕ್ಕದ ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ಠಾಣೆಗೆ ಆತನನ್ನು ರಾತ್ರಿ ಕರೆದೊಯ್ದಿದ್ದರು.

ಅದು ಗೊತ್ತಾಗುತ್ತಿದ್ದಂತೆ ಆರೋಪಿಗಳು, ಗುಂಪು ಕಟ್ಟಿಕೊಂಡು ಮಾರಕಾಸ್ತ್ರ ಸಮೇತ ರಾತ್ರಿ 11 ಗಂಟೆ ಸುಮಾರಿಗೆ ಕೆ.ಜಿ.ಹಳ್ಳಿ ಠಾಣೆಗೆ ಬಂದಿದ್ದರು. 'ನವೀನ್‌ನನ್ನು ನಮ್ಮ ವಶಕ್ಕೆ ಕೊಡಿ ನಾವೇ ಪಾಠ ಕಲಿಸುತ್ತೇವೆ' ಎಂದು ಕೂಗಾಡಿದ್ದರು. ಪೊಲೀಸರು, 'ಆರೋಪಿಯನ್ನು ಬಂಧಿಸಲಾಗಿದೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ. ಇಲ್ಲಿಂದ ಹೊರಟು ಹೋಗಿ' ಎಂದಿದ್ದರು. ಅದಕ್ಕೆ ಒಪ್ಪದ ಆರೋಪಿಗಳು, ಪೊಲೀಸರ ವಿರುದ್ಧವೇ ಘೋಷಣೆ ಕೂಗಿ ಠಾಣೆಗೆ ನುಗ್ಗಿದರು. 'ನವೀನ್‌ನನ್ನು ಕೊಲ್ಲಲು ಪೊಲೀಸರು ಬಿಡುತ್ತಿಲ್ಲ. ಇವರಿಗೆ ಒಂದು ಗತಿ ಕಾಣಿಸಿ' ಎಂದು ಕೂಗಾಡಿದ್ದರು. ಠಾಣೆಗೆ ನುಗ್ಗುವುದನ್ನು ತಡೆಯಲು ಬಂದ ಪಿಎಸ್ಐ ರಾಜೇಶ್ ಹಾಗೂ ಕಾನ್‌ಸ್ಟೆಬಲ್ ಮಂಜುನಾಥ್ ಅವರ ಮೇಲೂ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗಿ ಗಲಭೆ ಸೃಷ್ಟಿಯಾಯಿತು.

ಉದ್ರಿಕ್ತರು ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದರು. ಇದೇ ವೇಳೆ ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಠಾಣೆ ಎದುರು ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದರು.

ಸ್ಥಳಕ್ಕೆ ಬಂದ ಕಮಿಷನರ್ ಕಮಲ್ ಪಂತ್, ಗಾಳಿಯಲ್ಲಿ ಗುಂಡು ಹಾರಿಸಲು ಸೂಚನೆ ನೀಡಿದರು. ನಂತರವೇ ಕೆ.ಜಿ.ಹಳ್ಳಿ ಠಾಣೆ ಎದುರು ಪೊಲೀಸರು ಗುಂಡು ಹಾರಿಸಿದರು. ಗುಂಡೇಟು ತಗುಲಿ ಒಬ್ಬ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟ. ನಂತರವೇ ಗುಂಪು ಚದುರಿತು. ಈ ಸಂಗತಿಯನ್ನು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು