ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆ.1ರಿಂದ ಆಫ್‌‌ಲೈನ್ ಪುನರ್‌ಮನನ ತರಗತಿ: ಕಾಲೇಜುಗಳಿಗೆ ಬೆಂಗಳೂರು ವಿವಿ ನಿರ್ದೇಶನ

ಯು.ಜಿ, ಪಿ.ಜಿ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿಗೆ ಬೆಂ.ವಿ.ವಿ ಕ್ರಮ
Last Updated 30 ಆಗಸ್ಟ್ 2020, 13:20 IST
ಅಕ್ಷರ ಗಾತ್ರ

ಬೆಂಗಳೂರು: ಪದವಿ ಮತ್ತು ಸ್ನಾತಕೋತ್ತರ ಪದವಿಯ ಅಂತಿಮ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಪಠ್ಯದ ಪುನರ್‌ಮನನಕ್ಕಾಗಿ ‘ರೆಗ್ಯುಲರ್‌ ಆಫ್‌ಲೈನ್‌’ ತರಗತಿಗಳನ್ನು ಸೆಪ್ಟೆಂಬರ್‌ 1ರಿಂದಲೇ ತೆಗೆದುಕೊಳ್ಳುವಂತೆ ಬೆಂಗಳೂರು ವಿಶ್ವವಿದ್ಯಾಲಯ ತನ್ನ ವ್ಯಾಪ್ತಿಯ ಕಾಲೇಜುಗಳಿಗೆ ನಿರ್ದೇಶಿಸಿದೆ.

ಸೆ. 12ರಿಂದ ಪದವಿಯ 6ನೇ ಸೆಮಿಸ್ಟರ್‌ ಹಾಗೂ ಸೆ. 23ರಿಂದ ಸ್ನಾತಕೋತ್ತರ ಪದವಿಯ 4ನೇ ಸೆಮಿಸ್ಟರ್‌ನ ಪರೀಕ್ಷೆಗಳನ್ನು ನಡೆಸಲು ವಿ.ವಿ ದಿನಾಂಕ ನಿಗದಿಪಡಿಸಿದೆ. ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳಲ್ಲಿ ಪಾಠಕ್ಕೆ ಸಂಬಂಧಿಸಿದಂತೆ ಪ್ರಶ್ನೆ, ಗೊಂದಲ, ಸಮಸ್ಯೆಗಳಿದ್ದರೆ ಪರಿಹರಿಸಿಕೊಳ್ಳಲು ಹಾಗೂ ಪಾಠಗಳ ಪುನರಾವರ್ತನೆಗೆ ಅವಕಾಶ ಕಲ್ಪಿಸಲು ವಿಶ್ವವಿದ್ಯಾಲಯ ಈ ಕ್ರಮ ತೆಗೆದುಕೊಂಡಿದೆ.

‘ಈ ಆಫ್‌ಲೈನ್‌ ತರಗತಿಗಳು ವಿದ್ಯಾರ್ಥಿಗಳಿಗೆ ಕಡ್ಡಾಯವಲ್ಲ. ಇದನ್ನು ಹಾಜರಾತಿಗೆ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಪರೀಕ್ಷೆಗೂ ಮುನ್ನ ಈ ಅವಧಿಯಲ್ಲಿ ಬೋಧಕರು ಕಾಲೇಜುಗಳಲ್ಲಿ ವೇಳಾಪಟ್ಟಿ ಹಾಕಿಕೊಂಡು ವಿಷಯಾವಾರು ತರಗತಿಗಳನ್ನು ತೆಗೆದುಕೊಳ್ಳುತ್ತಾರೆ. ಪುನರಾವರ್ತನೆಯ ಅಗತ್ಯವಿರುವ ವಿದ್ಯಾರ್ಥಿಗಳು ಮಾಸ್ಕ್‌ ಧರಿಸಿ, ಪರಸ್ಪರ ಅಂತರ ಕಾಯ್ದುಕೊಂಡು ತರಗತಿಗಳಿಗೆ ಹಾಜರಾಗಬಹುದು’ ಎಂದು ಬೆಂಗಳೂರು ವಿ.ವಿ ಕುಲಪತಿ ಪ್ರೊ. ಕೆ.ಆರ್‌. ವೇಣುಗೋಪಾಲ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಆದರೆ, ಆಫ್‌ಲೈನ್‌ ತರಗತಿಗಳನ್ನು ಆರಂಭಿಸುವ ಮುನ್ನ ಕೊಠಡಿಗಳನ್ನು ಸ್ಯಾನಿಟೈಸ್‌ ಮಾಡಿರಬೇಕು. ತರಗತಿಗೆ ಬರುವ ವಿದ್ಯಾರ್ಥಿಗಳು ಕೋವಿಡ್‌ ನಿಯಂತ್ರಣ ನಿಯಮಗಳನ್ನು ಪಾಲನೆ ಮಾಡಬೇಕು. ಅದಕ್ಕೆ ಅಗತ್ಯ ಕ್ರಮಗಳನ್ನು ಆಯಾ ಕಾಲೇಜುಗಳ ಪ್ರಾಂಶುಪಾಲರು ತೆಗೆದುಕೊಳ್ಳಬೇಕು ಎಂದು ಇತ್ತೀಚೆಗೆ ಪದವಿ ಕಾಲೇಜುಗಳ ಪ್ರಾಂಶುಪಾಲರೊಂದಿಗೆ ನಡೆದ ಸಭೆಯಲ್ಲಿ ಸೂಚಿಸಿದ್ದೇನೆ. ಈ ಅವಧಿಯಲ್ಲಿ ಅಂತಿಮ ವರ್ಷದ ಬಿ.ಎಸ್ಸಿ, ಎಂ.ಎಸ್ಸಿ ವಿದ್ಯಾರ್ಥಿಗಳಿಗೆ ಲ್ಯಾಬ್‌ನಲ್ಲಿ ಪ್ರಾಯೋಗಿಕ ತರಗತಿಗಳನ್ನು ತೆಗೆದುಕೊಳ್ಳಬಹುದು’ ಎಂದರು.

ಸುಮಾರು 2 ಲಕ್ಷ ವಿದ್ಯಾರ್ಥಿಗಳು:

ಬೆಂಗಳೂರು ವಿಶ್ವವಿದ್ಯಾಲಯ ಮೂರು ವಿ.ವಿಗಳಾಗಿ ವಿಭಜನೆಯಾಗಿದ್ದರೂ ಇಲ್ಲಿನ ಪದವಿಯ ಅಂತಿಮ ಸೆಮಿಸ್ಟರ್‌ ವಿದ್ಯಾರ್ಥಿಗಳು ಇನ್ನೂ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ ಆಗಿದ್ದಾರೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿನ ಸುಮಾರು 700 ಕಾಲೇಜುಗಳ ಎರಡು ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ಕುಲಪತಿ ವಿವರಿಸಿದರು.

ಕೆಲ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳು ಸಂದರ್ಶನ (ವೈವಾ) ಎದುರಿಸಬೇಕಿರುತ್ತದೆ. ಅಂತಹ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆ ಬಳಿಕ ಸಂದರ್ಶನವನ್ನು ‘ಆಫ್‌ಲೈನ್‌’ ಅಥವಾ ‘ಆನ್‌ಲೈನ್‌’ ಮೂಲಕ ನಡೆಸಲು ಅವಕಾಶ ನೀಡಲಾಗಿದೆ. ಸಂದರ್ಶನಕ್ಕೆ ಹೊರಗಿನ ವಿ.ವಿಗಳ ವಿಷಯ ತಜ್ಞರು ದೊರೆಯದಿದ್ದರೆ, ಲಭ್ಯವಿರುವ ಸ್ಥಳೀಯ ವಿಷಯ ತಜ್ಞರಿಗೇ ಅವಕಾಶ ನೀಡುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಉಳಿದಂತೆ, ಪದವಿಯ 1, 3, ಮತ್ತು 5ನೇ ಸಮಿಸ್ಟರ್‌ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್‌ನಿಂದಲೇ ಆನ್‌ಲೈನ್‌ ತರಗತಿಗಳು ಆರಂಭವಾಗಲಿವೆ. ಅವರಿಗೆ ‘ಆಫ್‌ಲೈನ್‌’ ತರಗತಿಗಳು ಆಕ್ಟೋಬರ್‌ನಲ್ಲಿ ಪ್ರಾರಂಭವಾಗಲಿವೆ ಎಂದು ಅವರು ತಿಳಿಸಿದರು.

ತೆರೆಯಲಿವೆ ಕ್ಯಾಂಪಸ್‌ ಹಾಸ್ಟೆಲ್‌ಗಳು:

ಕೊವಿಡ್‌ ಕಾರಣದಿಂದ ಮುಚ್ಚಿದ್ದ ಜ್ಞಾನಭಾರತಿ ಆವರಣದಲ್ಲಿನ ಹಾಸ್ಟೆಲ್‌ಗಳನ್ನು ಸೆಪ್ಟೆಂಬರ್‌ನಲ್ಲಿ ತೆರೆಯಲಾಗುವುದು. ಪುನರ್‌ಮನನ ತರಗತಿಗಳು ಹಾಗೂ ಪರೀಕ್ಷೆ ಸಲುವಾಗಿ ಹಾಸ್ಟೆಲ್‌ಗೆ ಬರುವ ಅಂತಿಮ ಸೆಮಿಸ್ಟರ್‌ನ ವಿದ್ಯಾರ್ಥಿಗಳನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ಸ್ವಚ್ಛತೆ ಸೇರಿದಂತೆ ಅಗತ್ಯ ಸುರಕ್ಷಾ ಕ್ರಮಗಳನ್ನು ಹಾಸ್ಟೆಲ್‌ನಲ್ಲಿ ತೆಗೆದುಕೊಳ್ಳಲಾಗುತ್ತದೆ.ಒಮ್ಮೆ ಹಾಸ್ಟೆಲ್‌ಗೆ ಬರುವ ವಿದ್ಯಾರ್ಥಿ ಪರೀಕ್ಷೆ ಮುಗಿದ ನಂತರವಷ್ಟೇ ಕ್ಯಾಂಪಸ್‌ನಿಂದ ಹೊರಹೋಗಲು ಅವಕಾಶ ನೀಡಲಾಗುತ್ತದೆ ಎಂದು ಕುಲಪತಿ ತಿಳಿಸಿದರು.

ಪರೀಕ್ಷೆ ವೇಳೆ ತೆಗೆದುಕೊಳ್ಳಬೇಕಾದ ಕ್ರಮಗಳು

* ಪರೀಕ್ಷೆಗೂ ಮುನ್ನ ಸಂಪೂರ್ಣ ಕಾಲೇಜನ್ನು ಸ್ಯಾನಿಟೈಸ್‌ ಮಾಡಬೇಕು

* ಪರೀಕ್ಷಾರ್ಥಿಗಳು ಮತ್ತು ಪರೀಕ್ಷಾ ಸಿಬ್ಬಂದಿಯನ್ನು ಥರ್ಮಲ್‌ ಸ್ಕ್ಯಾನ್‌ಗೆ ಒಳಪಡಿಸಬೇಕು

* ವಿದ್ಯಾರ್ಥಿಗಳು, ಪರೀಕ್ಷಾ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು

* ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಸರ್‌ ಇರಬೇಕು

* ಕೊಠಡಿ ಮೇಲ್ವಿಚಾರಕರು ಕಡ್ಡಾಯವಾಗಿ ಫೇಸ್‌ ಶೀಲ್ಡ್‌ ಧರಿಸಿರಬೇಕು

* ಕೊಠಡಿಯಲ್ಲಿ 12 ವಿದ್ಯಾರ್ಥಿಗಳಿಗಷ್ಟೇ ಅವಕಾಶ

* ಒಂದು ಡೆಸ್ಕ್‌ನಲ್ಲಿ ಒಬ್ಬರು ವಿದ್ಯಾರ್ಥಿಯಷ್ಟೇ ಅವಕಾಶ

* ಕೋವಿಡ್‌ ಪಾಸಿಟಿವ್‌ ಬಂದಿರುವ ವಿದ್ಯಾರ್ಥಿಗಳಿಗೆ ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಪ್ರತ್ಯೇಕ ಕೊಠಡಿ ಇರಬೇಕು. ಅದರಲ್ಲಿ ನಾಲ್ವರಿಗೆ ಮಾತ್ರ ಅವಕಾಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT