ಬುಧವಾರ, ಆಗಸ್ಟ್ 17, 2022
30 °C
ನಕಲಿ ದಾಖಲೆ ಸಲ್ಲಿಸಿ ₹ 65.33 ಕೋಟಿ ಸಾಲ ಪಡೆದ ಗ್ರೀನ್‌ ಆರ್ಗ್ಯಾನಿಕ್ಸ್‌

ಐಡಿಬಿಐ ಬ್ಯಾಂಕ್‌ಗೆ ವಂಚನೆ: ಉದ್ಯಮಿಗಳ ವಿರುದ್ಧ ಸಿಬಿಐ ಎಫ್‌ಐಆರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಕಲಿ ದಾಖಲೆಗಳನ್ನು ಸಲ್ಲಿಸಿ ಐಡಿಬಿಐ ಬ್ಯಾಂಕ್‌ನಿಂದ ₹ 65.33 ಕೋಟಿ ಸಾಲ ಪಡೆದು ವಂಚಿಸಿರುವ ಆರೋಪದ ಮೇಲೆ ಸದಾಶಿವನಗರದ ಗ್ರೀನ್‌ ಆರ್ಗ್ಯಾನಿಕ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ (ಜಿಒಐಪಿಎಲ್‌) ಕಂಪನಿಯ ಮೂವರು ನಿರ್ದೇಶಕರ ವಿರುದ್ಧ ಬುಧವಾರ ಎಫ್‌ಐಆರ್‌ ದಾಖಲಿಸಿರುವ ಸಿಬಿಐ, ತನಿಖೆ ಆರಂಭಿಸಿದೆ.

ಜಿಒಐಪಿಎಲ್‌ ಪ್ರವರ್ತಕ ರಮೇಶ್‌ ಬಿ. ಗೌಡ, ಅವರ ಪತ್ನಿ ರಮ್ಯಾ ಜಿ.ಸಿ. ಹಾಗೂ ಮತ್ತೊಬ್ಬ ನಿರ್ದೇಶಕ ಚಂದ್ರಶೇಖರ್‌ ಬಾಲಸುಬ್ರಮಣ್ಯಂ ವಿರುದ್ಧ ಸಂಚು, ವಂಚನೆ, ನಂಬಿಕೆ ದ್ರೋಹ, ನಕಲಿ ಲೆಕ್ಕಪತ್ರ ದಾಖಲೆ ಸೃಷ್ಟಿ, ಕ್ರಿಮಿನಲ್‌ ದುರ್ನಡತೆ ಆರೋಪಗಳಡಿ ಸಿಬಿಐ ಬೆಂಗಳೂರು ಘಟಕ ಎಫ್‌ಐಆರ್‌ ದಾಖಲಿಸಲಾಗಿದೆ. ಐಡಿಬಿಐ ಬ್ಯಾಂಕ್‌ನ ಉಪ ಮಹಾ ಪ್ರಬಂಧಕ ಜಿ. ಬಸಂತ್‌ ಚಕ್ರವರ್ತಿ ಸಲ್ಲಿಸಿರುವ ದೂರನ್ನು ಆಧರಿಸಿ ಪ್ರಕರಣ ದಾಖಲು ಮಾಡಲಾಗಿದೆ.

‘ದೊಡ್ಡಬಳ್ಳಾಪುರ, ಶ್ರೀರಂಗಪಟ್ಟಣ ಮತ್ತು ಬೇಲೂರಿನಲ್ಲಿ 65 ಎಕರೆ ವಿಸ್ತೀರ್ಣದಲ್ಲಿ ಔಷಧಿ ಸಸ್ಯಗಳನ್ನು ಬೆಳೆದು, ರಫ್ತು ಮಾಡುತ್ತಿರುವುದಾಗಿ ಕಂಪನಿ ಹೇಳಿಕೊಂಡಿತ್ತು. 2009ರ ನವೆಂಬರ್‌ನಲ್ಲಿ ಐಡಿಬಿಐ ಕೃಷಿ ಸಾಲ ವಿಭಾಗವನ್ನು ಸಂಪರ್ಕಿಸಿದ್ದ ರಮೇಶ್‌ ಗೌಡ ಮತ್ತು ಇತರರು, ಕೆನರಾ ಬ್ಯಾಂಕ್‌ನಲ್ಲಿ ಬಾಕಿ ಇರುವ ₹ 41.07 ಕೋಟಿ ಸಾಲವನ್ನು ವರ್ಗಾಯಿಸಿಕೊಂಡು ಹೆಚ್ಚುವರಿ ಸಾಲ ನೀಡುವಂತೆ ಮನವಿ ಸಲ್ಲಿಸಿದ್ದರು’ ಎಂಬ ಅಂಶ ಎಫ್‌ಐಆರ್‌ನಲ್ಲಿದೆ.

‘2015ರವರೆಗೂ ವಿವಿಧ ಹಂತಗಳಲ್ಲಿ ಜಿಒಐಪಿಎಲ್‌ಗೆ ₹ 65.33 ಕೋಟಿ ಸಾಲ ನೀಡಲಾಗಿದೆ. ಅಸಲು ಮತ್ತು ಬಡ್ಡಿ ಸೇರಿ ₹ 125.63 ಕೋಟಿ ಬಾಕಿ ಇದೆ. ಸಾಲ ಮರುಪಾವತಿ ಆಗದೇ ಇದ್ದಾಗ ತನಿಖೆ ಆರಂಭಿಸಲಾಗಿತ್ತು. ಬೇರೆ ಕಂಪನಿಗಳ ಹೆಸರಿನಲ್ಲಿದ್ದ ಸಾಲವನ್ನು ಜಿಒಐಪಿಎಲ್‌ ಸಾಲ ಎಂಬುದಾಗಿ ಸುಳ್ಳು ಮಾಹಿತಿ ನೀಡಿ ಐಡಿಬಿಐ ಬ್ಯಾಂಕ್‌ಗೆ ವರ್ಗಾವಣೆ ಮಾಡಲಾಗಿತ್ತು. ಐಡಿಬಿಐ ನೀಡಿದ ಸಾಲದಲ್ಲಿ ₹ 15 ಕೋಟಿಯನ್ನು ಕಂಪನಿಯ ಉದ್ದೇಶಕ್ಕೆ ಬಳಸದೇ ರಮೇಶ್‌ ಗೌಡ ವೈಯಕ್ತಿಕ ಖಾತೆಗೆ ವರ್ಗಾಯಿಸಿರುವುದು ಪತ್ತೆಯಾಗಿದೆ’ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕಂಪನಿಯ ಆರ್ಥಿಕ ವಹಿವಾಟುಗಳ ಕುರಿತು ಉತ್ಪ್ರೇಕ್ಷಿತ ವರದಿಗಳನ್ನು ಸೃಷ್ಟಿಸಲಾಗಿತ್ತು. ಜಿಇಐಪಿಎಲ್‌ ಹೆಸರಿನಲ್ಲಿ ಕೆನರಾ ಬ್ಯಾಂಕ್‌ ಮತ್ತು ವಿಜಯ ಬ್ಯಾಂಕ್‌ಗಳಲ್ಲೂ ಸಾಲ ಪಡೆದಿರುವುದು ಪತ್ತೆಯಾಗಿದೆ. ಕಂಪನಿಯ ಮೂವರು ನಿರ್ದೇಶಕರು ಮತ್ತು ಐಡಿಬಿಐ ಬ್ಯಾಂಕ್‌ ಅಧಿಕಾರಿಗಳು ಸೇರಿ ಬ್ಯಾಂಕ್‌ಗೆ ವಂಚಿಸಿರುವುದು ಮೇಲ್ನೋಟಕ್ಕೆ ಪತ್ತೆಯಾಗಿದೆ ಎಂಬ ಅಂಶ ಎಫ್‌ಐಆರ್‌ನಲ್ಲಿದೆ.

ಸಿಬಿಐ ಭ್ರಷ್ಟಾಚಾರ ನಿಗ್ರಹ ದಳದ ಬೆಂಗಳೂರು ಘಟಕದ ಎಸ್‌ಪಿ ಥಾಮ್ಸನ್‌ ಜೋಸ್‌ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ ಸುಮನ್‌ ಸೈನಿ ತನಿಖೆ ಆರಂಭಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು