ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಗಾಂಧಿ, ಕುವೆಂಪು ಪಾಠ ಬಿಟ್ಟಿದ್ದ ಬರಗೂರು'–ಸಚಿವ ಬಿ.ಸಿ.ನಾಗೇಶ್‌

Last Updated 24 ಮೇ 2022, 10:45 IST
ಅಕ್ಷರ ಗಾತ್ರ

ಬೆಂಗಳೂರು: ಪಠ್ಯದಲ್ಲಿ ನೈಜ ಇತಿಹಾಸ ಬಿಂಬಿಸಿದ್ದೇವೆ. ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯ ಸಮಿತಿಯವರು ಮಹಾತ್ಮ ಗಾಂಧಿ, ಬಾಬಾ ಸಾಹೇಬ್‌ ಅಂಬೇಡ್ಕರ್‌, ಮೈಸೂರು ಮಹಾರಾಜರು, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕ, ಮದಕರಿ ನಾಯಕ, ಕುವೆಂಪು ಮುಂತಾದ ಮಹನೀಯರ ಪಾಠಗಳನ್ನು ಕೈ ಬಿಟ್ಟಿದ್ದರು. ಆ ಅನ್ಯಾಯ ಸರಿಪಡಿಸುವ ಕೆಲಸ ಮಾಡಿದ್ದೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದ್ದಾರೆ.

ಈಗ ಪಠ್ಯ ಪುಸ್ತಕದ ಬ್ರಾಹ್ಮಣೀಕರಣ ಆಗಿದೆ ಎಂದು ಪ್ರಗತಿಪರರು ಮತ್ತು ಕಾಂಗ್ರೆಸ್‌ನವರು ಹುಯಿಲೆಬ್ಬಿಸಿದ್ದಾರೆ. ಬರಗೂರು ಪರಿಷ್ಕರಿಸಿದ ಪಠ್ಯಪುಸ್ತಕಗಳಲ್ಲಿ 19 ಜನ ಬ್ರಾಹ್ಮಣ ಲೇಖಕರ ಪಠ್ಯ ಗಳಿದ್ದವು. ಹಾಗಿದ್ದರೆ, ಅದು ಬ್ರಾಹ್ಮಣ್ಯವಲ್ಲವೇ? ಪ್ರಗತಿಪರರ ಕಣ್ಣಿಗೆ ಅದೇಕೆ ಕಾಣಿಸಿಲ್ಲ? ಲೇಖಕರಿಗೆ ಜಾತಿ ಹಣೆ ಪಟ್ಟಿ ಹಚ್ಚುವುದು ಸರಿಯಲ್ಲ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ಯಾವುದೇ ಸಮಾಜ ಸುಧಾರಕರ ವಿಷಯಗಳನ್ನು ಕೈಬಿಟ್ಟಿಲ್ಲ. ಸತ್ಯವನ್ನು ಬೋಧಿಸಲು ಪ್ರಯತ್ನಿಸಿದ್ದೇವೆ. ಹೀಗಾ ಗಿಯೇ ಪಠ್ಯಗಳನ್ನು ಪರಿಷ್ಕರಿಸಿದ್ದೇವೆ. ಹಿಂದಿನ ಬರಗೂರು ಸಮಿತಿ ಗಾಂಧೀಜಿ, ಅಂಬೇಡ್ಕರ್‌ ಸೇರಿದಂತೆ ಆರು ಮಹನೀಯರ ಪಾಠಗಳನ್ನು ಕಿತ್ತು ಹಾಕಿತ್ತು. ಆಗ ಏಕೆ ಬಾಯಿಗೆ ಬೀಗ ಹಾಕಿಕೊಂಡು ಕೂತಿದ್ದರು? ಮೈಸೂರು ಮಹಾರಾಜರ ಕುರಿತು ಐದು ಪುಟಗಳ ಪಾಠವಿತ್ತು. ಅದನ್ನು ತೆಗೆದು ಹಾಕಿ ಕೇವಲ ನಾಲ್ಕು ಸಾಲುಗಳನ್ನು ಮಾತ್ರ ಉಳಿಸಿದರು. ಬದಲಿಗೆ ಆರು ಪುಟಗಳ ಟಿಪ್ಪು ಸುಲ್ತಾನ್‌ ಅಧ್ಯಾಯ ಸೇರಿಸಿದರು. ಒಂದು ಸಮುದಾಯವನ್ನು ಓಲೈಸಲು ಹೀಗೆ ಮಾಡಿದರು’ ಎಂದು ಟೀಕಿಸಿದರು.

‘ತಜ್ಞರ ಅಭಿಪ್ರಾಯದಂತೆ ನಾರಾಯಣ ಗುರು ಅವರ ಪಾಠವನ್ನು ಸಮಾಜ ವಿಜ್ಞಾನದಿಂದ ತೆಗೆದು ಕನ್ನಡ ವಿಷಯದ ಪಠ್ಯಕ್ಕೆ ಸೇರಿಸಲಾಗಿದೆ’ ಎಂದು ಹೇಳಿದರು.

‘ಪೆರಿಯಾರ್‌ ಅವರ ಕೆಲವು ಸಾಲುಗಳನ್ನು ತೆಗೆದುಹಾಕಿದ್ದೇವೆ. ರಾಮ ನಮಗೆ ಆದರ್ಶವಾಗಬೇಕು. ರಾಮನ ಫೋಟೊಗೆ ಚಪ್ಪಲಿಯಲ್ಲಿ ಹೊಡೆದು, ರಾವಣನನ್ನು ಪೂಜಿಸುವುದನ್ನು ನಮ್ಮ ಮಕ್ಕಳಿಗೆ ಓದಿಸಬೇಕಾ? ರಾಮ ವೈದಿಕ ಸಂಸ್ಕೃತಿ ಪ್ರತಿನಿಧಿಸುತ್ತಾನೆ ಮತ್ತು ರಾವಣ ದ್ರಾವಿಡರ ಸಂಸ್ಕೃತಿ ಬಿಂಬಿಸುತ್ತಾನೆ ಎನ್ನುವುದನ್ನು ಮಕ್ಕಳಿಗೆ ಪಾಠ ಮಾಡಬೇಕೇ? ಇಂತಹ ವಿಷಯಗಳನ್ನು ಸಮರ್ಥಿಸಿಕೊಳ್ಳುವ ಬುದ್ಧಿಜೀವಿಗಳು ಎಂದು ಕರೆಯಿಸಿಕೊಂಡವವರು ರಾಕ್ಷಸರ ವಂಶಸ್ಥರೇ’ ಎಂದು ಕೇಳಿದರು.

‘ಕುವೆಂಪು ಅವರಿಗೆ ನಾವು ಅವಮಾನ ಮಾಡಿಲ್ಲ. ನಾವು ರಾಮಾಯಣ ದರ್ಶನಂ ಸೇರಿಸಿದ್ದೇವೆ. ಹಿಂದಿನ ಸಮಿತಿಯೇ ಕುವೆಂಪು ಅವರಿಗೆ ಅವಮಾನ ಮಾಡಿತ್ತು. ಈ ಸಮಿತಿಯೇ ಮಕ್ಕಳಲ್ಲಿ ಜಾತೀಯ ವಿಷಬೀಜ ಮತ್ತು ದ್ವೇಷ ಬಿತ್ತುವ ಕಾರ್ಯವನ್ನು ಮಾಡಿತ್ತು’ ಎಂದು ಕಿಡಿಕಾರಿದರು.

* ರೋಹಿತ್‌ ಚಕ್ರತೀರ್ಥ ಯಾರೆಂದು ಪ್ರಶ್ನಿಸುತ್ತಾರೆ. ಅವರು ಐಐಟಿ ಪ್ರೊಫೆಸರ್‌. ಐಐಟಿ ಮತ್ತು ಸಿಇಟಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ.

-ಬಿ.ಸಿ.ನಾಗೇಶ್‌, ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT