ಬುಧವಾರ, ಏಪ್ರಿಲ್ 21, 2021
23 °C
‘ಶಿವಮೊಗ್ಗ ವಿಮಾನ ನಿಲ್ದಾಣ ಯೋಜನೆ: ಅಕ್ರಮದ ವಾಸನೆ’

ಶಿವಮೊಗ್ಗಕ್ಕೆ ಬೆಣ್ಣೆ, ವಿಜಯಪುರಕ್ಕೆ ಸುಣ್ಣ: ಶಾಸಕ ಯತ್ನಾಳ್‌ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿಮಾನ ನಿಲ್ದಾಣ ಕಾಮಗಾರಿಗೆ ಅನುದಾನ ನೀಡುವ ವಿಷಯದಲ್ಲಿ ಶಿವಮೊಗ್ಗಕ್ಕೆ ಬೆಣ್ಣೆ ಹಾಗೂ ವಿಜಯಪುರಕ್ಕೆ ಸುಣ್ಣ ಎಂಬಂತೆ ಆಗಿದೆ ಎಂದು ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ್ ಕಿಡಿಕಾರಿದರು.

ವಿಧಾನಸಭೆಯಲ್ಲಿ ಬುಧವಾರ ಪ್ರಶ್ನೋತ್ತರ ಅವಧಿಯಲ್ಲಿ ಎರಡು ವಿಮಾನ ನಿಲ್ದಾಣಗಳಿಗೆ ಅನುದಾನ ಮೀಸಲಿಟ್ಟಿರುವ ಬಗ್ಗೆ ಪ್ರಶ್ನೆ ಕೇಳಿದರು. ಮೂಲಸೌಕರ್ಯ ಅಭಿವೃದ್ಧಿ ಸಚಿವ ಆನಂದ್ ಸಿಂಗ್‌, ‘ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ₹384 ಕೋಟಿ ಹಾಗೂ ವಿಜಯಪುರ ವಿಮಾನ ನಿಲ್ದಾಣ ಅಭಿವೃದ್ಧಿಗೆ ₹220 ಕೋಟಿ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ‘ ಎಂದರು.

ಆಗ ಯತ್ನಾಳ್‌, ’ವಿಜಯಪುರ ನಿಲ್ದಾಣದಲ್ಲಿ ದೊಡ್ಡ ವಿಮಾನಗಳ ಹಾರಾಟಕ್ಕೆ ಅವಕಾಶ ಇಲ್ಲ. ಕಾರ್ಗೊ ವ್ಯವಸ್ಥೆ ಇಲ್ಲ. ಜತೆಗೆ ಕಡಿಮೆ ಅನುದಾನ ಮೀಸಲಿಡಲಾಗಿದೆ. ಈ ತಾರತಮ್ಯ ಏಕೆ‘ ಎಂದು ಪ್ರಶ್ನಿಸಿದರು.

ಆನಂದ್‌ ಸಿಂಗ್, ’ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಸ್ಥಳದ ಹತ್ತಿರ ಹೈಟೆನ್ಶನ್‌ ವೈರ್‌ ಇದೆ. ಅದನ್ನು ಸ್ಥಳಾಂತರ ಮಾಡುವ ಕಾಮಗಾರಿಯೂ  ಇದೆ. ಹೀಗಾಗಿ, ಹೆಚ್ಚಿನ ಅನುದಾನ ಮೀಸಲಿಡಲಾಗಿದೆ‘ ಎಂದು ಸಮಜಾಯಿಷಿ ನೀಡಿದರು.

ಯತ್ನಾಳ್‌, ’ಲೋಕೋಪಯೋಗಿ ಇಲಾಖೆ ನೀಡಿರುವ ಅಂದಾಜು ವೆಚ್ಚಕ್ಕಿಂತ ಗುತ್ತಿಗೆದಾರರಿಗೆ ಶೇ 15ರಷ್ಟು ಮೊತ್ತ ಹೆಚ್ಚುವರಿ ಪಾವತಿ ಮಾಡಲಾಗುತ್ತಿದೆ. ಹೈಟೆನ್ಶನ್‌ ವೈರ್ ಸ್ಥಳಾಂತರ ಮಾಡಲು ₹10 ಕೋಟಿ ಸಾಕು. ಯೋಜನೆಯಲ್ಲಿ ಅಕ್ರಮದ ವಾಸನೆ ಕಂಡು ಬರುತ್ತಿದೆ‘ ಎಂದು ದೂರಿದರು.

ಜೆಡಿಎಸ್‌ನ ದೇವಾನಂದ ಚವ್ಹಾಣ್‌, ಕಾಂಗ್ರೆಸ್‌ನ ಶಿವಾನಂದ ಪಾಟೀಲ ಮಾತನಾಡಿ, ’ವಿಜಯಪುರದಲ್ಲಿ ತೋಟಗಾರಿಕಾ ಬೆಳೆಗಳನ್ನು ಹೆಚ್ಚು ಬೆಳೆಯಲಾಗುತ್ತಿದೆ. ಕಾರ್ಗೊ ವ್ಯವಸ್ಥೆ ಇದ್ದರೆ ಈ ಉತ್ಪನ್ನಗಳನ್ನು ರಫ್ತು ಮಾಡಲು ಅನುಕೂಲವಾಗುತ್ತಿತ್ತು‘ ಎಂದು ಗಮನ ಸೆಳೆದರು.

’ವಿಜಯಪುರ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ ಅನುದಾನ ನೀಡುವ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚನೆ ನಡೆಸುತ್ತೇನೆ‘ ಎಂದು ಆನಂದ್‌ ಸಿಂಗ್‌ ಭರವಸೆ ನೀಡಿದರು.

’ನನ್ನ ಪ್ರಶ್ನೆ ಬಂದಾಗ ಮುಖ್ಯಮಂತ್ರಿ ಸದನದಿಂದ ಹೊರಕ್ಕೆ ಹೋಗಿದ್ದು ಏಕೆ‘ ಎಂದೂ ಯತ್ನಾಳ್‌ ತಗಾದೆ ಎತ್ತಿದರು. ಅದಕ್ಕೆ ಸ್ಪಂದನೆ ಸಿಗಲಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು