ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರಿಗೆದರಿದ ರಾಜಕೀಯ ಚಟುವಟಿಕೆ

ಬಿ.ನಾರಾಯಣರಾವ್ ‘ಉತ್ತರಾಧಿಕಾರಿ’ ಯಾರಾಗಬಲ್ಲರು ಎಂಬ ಚರ್ಚೆ
Last Updated 30 ಸೆಪ್ಟೆಂಬರ್ 2020, 2:58 IST
ಅಕ್ಷರ ಗಾತ್ರ

ಬೀದರ್‌‌: ಶಾಸಕ ಬಿ.ನಾರಾಯಣ ರಾವ್ ಅವರ ಅಕಾಲಿಕ ನಿಧನರಾಗಿರುವುದ ರಿಂದ ಅವರ ‘ಉತ್ತರಾಧಿಕಾರಿ’ ಯಾರಾಗಬಲ್ಲರು ಎಂಬ ಚರ್ಚೆ ತೀವ್ರಗೊಂಡಿದೆ. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ರಾಜಕೀಯ ಚಟುವಟಿಕೆಗಳು ಗರಿ ಬಿಚ್ಚಿಕೊಂಡಿವೆ.

ಈ ವಿಧಾನಸಭಾ ಕ್ಷೇತ್ರ ರಚನೆ ಆದಾಗಿನಿಂದ 14 ಚುನಾವಣೆಗಳು ನಡೆದಿವೆ. ಲಿಂಗಾಯತ ಮತ್ತು ಮರಾಠ ಸಮುದಾಯದವರೇ ಶಾಸಕರಾಗಿ ಆಯ್ಕೆ ಆಗಿದ್ದರು. ಇಲ್ಲಿ ಅಹಿಂದ ವರ್ಗದವರೂ ಜಯಗಳಿಸಬಹುದು ಎನ್ನುವುದನ್ನು ಬಿ.ನಾರಾಯಣರಾವ್ ಸಾಬೀತು ಪಡಿಸಿದ್ದರು.

ಜನತಾಪಕ್ಷ ಮತ್ತು ಕಾಂಗ್ರೆಸ್‌ನಿಂದ ತಲಾ ಒಮ್ಮೆ ಸ್ಪರ್ಧಿಸಿ ಪರಾಭವ ಗೊಂಡಿದ್ದ ಅವರು, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 61 ಸಾವಿರದಷ್ಟು ಅತ್ಯಧಿಕ ಮತ ಪಡೆದು ಜಯಗಳಿಸಿದ್ದರು.

‘ಈ ಕ್ಷೇತ್ರವನ್ನು ಕಾಂಗ್ರೆಸ್‌ ತನ್ನ ತೆಕ್ಕೆಯಲ್ಲಿ ಉಳಿಸಿಕೊಳ್ಳಬೇಕಾ ದರೆ ನಾರಾಯಣ ರಾವ್ ಪತ್ನಿ ಮಲ್ಲಮ್ಮ ಅಥವಾ ಪುತ್ರನನ್ನು ಕಣಕ್ಕಿಳಿಸಬೇಕು. ಕಾರಣ ಅನುಕಂಪದ ಅಲೆಯಲ್ಲಿ ಕಾಂಗ್ರೆಸ್ ಸಹಜವಾಗಿ ಗೆಲುವು ಸಾಧಿಸಬಹುದು’ ಎನ್ನುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಮುಖಂಡರು ಇದ್ದಾರೆ ಎನ್ನಲಾಗುತ್ತಿದೆ.

ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರಾಗಿದ್ದ ನಾರಾಯಣ ರಾವ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರಿಗೂ ಆತ್ಮೀಯರಾಗಿ ದ್ದರು. ಖಂಡ್ರೆ ಅವರ ನಿರ್ಧಾರವೂ ಟಿಕೆಟ್‌ ಕೊಡಿಸುವ ವಿಚಾರದಲ್ಲಿ ಮಹತ್ವ ಪಡೆದುಕೊಳ್ಳಲಿದೆ. ನಾರಾಯಣರಾವ್ ಹಿರಿಯ ಪುತ್ರ ಗೌತಮ ಈಗಾಗಲೇ ಬೆಂಗಳೂರಿನಲ್ಲಿ ರಾಜಕೀಯದಲ್ಲಿ ಸಕ್ರಿಯವಾಗಿದ್ದು, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿಯೂ ಆಗಿದ್ದಾರೆ.

‘ತಾಲ್ಲೂಕಿನ ಅಭಿವೃದ್ಧಿಯ ಬಗ್ಗೆ ನಾರಾಯಣರಾವ್ ಅವರ ಕನಸು ನನಸಾಗಬೇಕಾದರೆ ಅವರ ಕುಟುಂಬದವರಿಗೆ ಅವಕಾಶ ನೀಡುವುದು ಅಗತ್ಯ. ನಾರಾಯಣರಾವ್ ಅವರ ಬೆಂಬಲಿಗರ ಹಾಗೂ ಹಿತೈಷಿಗಳ ಸಭೆಯನ್ನು ಶೀಘ್ರ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಾಗುತ್ತದೆ’ ಎಂದು ಟೋಕರೆ ಕೋಲಿ ಸಮಾಜದ ಮುಖಂಡರಾದ ಗೋವಿಂದ ಚಾಮಾಲೆ, ರಾಜಕುಮಾರ ಇರಲೆ ಹೇಳುತ್ತಾರೆ.

‘ಈ ಕ್ಷೇತ್ರದಲ್ಲಿ ಬಿಜೆಪಿ ಒಂದೇ ಬಾರಿ ಗೆದ್ದಿದೆ.ಬಿಜೆಪಿಯಲ್ಲಿ ಹೆಚ್ಚಿನ ಸ್ಪರ್ಧೆ ಇದೆ. ಹಿಂದಿನ ಚುನಾವಣೆಯಲ್ಲಿ ಈ ಪಕ್ಷದ ಅಭ್ಯರ್ಥಿಯಾಗಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಸಂಜಯ ಪಟವಾರಿ, ಗುಂಡು ರೆಡ್ಡಿ ಒಳಗೊಂಡು 7 ಜನ ಪ್ರಬಲ ಆಕಾಂಕ್ಷಿಗಳು ಇದ್ದಾರೆ. ಬಸವಕಲ್ಯಾಣ ತಹಶೀಲ್ದಾರ್‌ ಸಾವಿತ್ರಿ ಸಲಗರ ಅವರ ಪತಿ, ಬಿಜೆಪಿ ಮುಖಂಡ ಶರಣು ಸಲಗರ ಒಂದು ವರ್ಷದಿಂದ ಕ್ಷೇತ್ರದಲ್ಲಿ ಸಂಚರಿಸಿ ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದಾರೆ’ ಎನ್ನುತ್ತವೆ ಆ ಪಕ್ಷದ ಮೂಲಗಳು.

ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಪಿ.ಜಿ.ಆರ್.ಸಿಂಧ್ಯ ಇಲ್ಲಿ ಮತ್ತೆ ಕಣಕ್ಕಿಳಿಯಲುಬಯಸಿದ್ದಾರೆ ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಒಲ್ಲದ ಜೆಡಿಎಸ್‌ ಮುಖಂಡರೊಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT