ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಲಿಂಗ ಸ್ವಾಮೀಜಿ ನಿಗೂಢ ಸಾವು; ಡೆತ್‌ನೋಟ್ ಪತ್ತೆ, ಬೆದರಿಕೆ ಕಾರಣ?

ಕಂಚುಗಲ್‌ ಬಂಡೆ ಮಠದ ಸ್ವಾಮೀಜಿ
Last Updated 24 ಅಕ್ಟೋಬರ್ 2022, 21:30 IST
ಅಕ್ಷರ ಗಾತ್ರ

ರಾಮನಗರ: ಮಾಗಡಿ ತಾಲ್ಲೂಕಿನ ಕಂಚುಗಲ್ ಬಂಡೆ ಮಠದ ಬಸವಲಿಂಗ ಸ್ವಾಮೀಜಿ (45) ನಿಗೂಢವಾಗಿ ಸಾವನ್ನಪ್ಪಿದ್ದು, ಸೋಮವಾರ ಬೆಳಿಗ್ಗೆ ಮಠದ ಕೊಠಡಿಯ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಯಿತು.

ಶ್ರೀಗಳುಬೆಳಿಗ್ಗೆ ಎಂದಿನಂತೆ ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳದೆ ಇದ್ದುದ್ದರಿಂದ ಅನುಮಾನ ಗೊಂಡ ಅವರ ಸಹಾಯಕರು ಕೊಠಡಿಯ ಬಳಿ ತೆರಳಿ ನೋಡಿದಾಗ ಶ್ರೀಗಳ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಇರುವುದು ಕಂಡುಬಂದಿತು.

ವಿಷಯ ತಿಳಿಯುತ್ತಿದ್ದಂತೆ ಸಾವಿರಾರು ಭಕ್ತರು ಮಠದ ಬಳಿ ಸೇರಿದರು. ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮಠದ ಆವರಣದಲ್ಲಿ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಯಿತು.

ಸುತ್ತೂರು, ಸಿದ್ಧಗಂಗೆ ಮಠದ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.

ಡೆತ್‌ನೋಟ್ ಪತ್ತೆ: ಶ್ರೀಗಳು ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ 3 ಪುಟಗಳ ಡೆತ್‌ನೋಟ್‌ ಸಹ ದೊರೆತಿದೆ ಎನ್ನಲಾಗಿದೆ. ಆದರೆ, ಪೊಲೀಸರು ಇದರ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ.

‘ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಯಾರೂ ಸಹಾಯ ಮಾಡಲಿಲ್ಲ. ಬೆದರಿಕೆ ಕರೆಗಳೂ ಬಂದಿವೆ’ ಎಂದು ಸ್ವಾಮೀಜಿ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಶ್ರೀಗಳ ಖಾಸಗಿ ವಿಚಾರಗಳನ್ನು ಮುಂದಿಟ್ಟುಕೊಂಡು ಅವರನ್ನು ಬ್ಲಾಕ್‌ಮೇಲ್‌ ಮಾಡುವ ತಂತ್ರ ನಡೆದಿತ್ತು ಎಂದೂ ಆರೋಪಿಸಲಾಗಿದೆ. ಮಠದ ಉತ್ತರಾಧಿಕಾರಿ ನೇಮಕದಲ್ಲೂ ಗೊಂದಲ ತಲೆದೋರಿತ್ತು ಎನ್ನಲಾಗಿದೆ. ಆದರೆ, ಪೊಲೀಸರು ಯಾವುದನ್ನೂ ದೃಢಪಡಿಸಿಲ್ಲ.

ಬಸವಲಿಂಗ ಸ್ವಾಮೀಜಿ ಅವರು ಬಂಡೆ ಮಠದಲ್ಲೇ ಪ್ರಾಥಮಿಕ ಶಿಕ್ಷಣ ಪೂರೈಸಿದ್ದು, ಬಳಿಕ ಸಿದ್ಧಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮಾಡಿದ್ದರು. 1997ರಲ್ಲಿ ಮಠದ ಕಿರಿಯ ಸ್ವಾಮೀಜಿಯಾಗಿ ಪೀಠ ಅಲಂಕರಿಸಿದ್ದು, ಕಳೆದ ವರ್ಷ ಬೆಳ್ಳಿ ಹಬ್ಬ ಆಚರಿಸಿಕೊಂಡಿದ್ದರು. ಮಾಗಡಿಯ ಪ್ರಭಾವಿ ಶ್ರೀಗಳಲ್ಲಿ ಒಬ್ಬರಾಗಿದ್ದರು. ದಶಕದ ಹಿಂದೆ ಗೊರೂರಿನಲ್ಲಿ ತ್ಯಾಜ್ಯ ವಿಲೇವಾರಿ ಘಟಕದ ವಿರುದ್ಧ ನಡೆದ ಹೋರಾಟದ ನೇತೃತ್ವ ವಹಿಸಿದ್ದರು.

26ರಂದು ಕಾರ್ಯಕ್ರಮ ನಿಗದಿ: ಬಂಡೆಗಲ್‌ ಮಠವು ಮಾಗಡಿ ತಾಲ್ಲೂಕಿನಲ್ಲಿಯೇ ಅತಿದೊಡ್ಡ ಮಠವಾಗಿದ್ದು, ಶ್ರೀಗಳು ಮತ್ತು ಮಠದ ಹೆಸರಿನಲ್ಲಿ 100ಕ್ಕೂ ಹೆಚ್ಚು ಎಕರೆ ಜಮೀನು, ಶಿಕ್ಷಣ ಸಂಸ್ಥೆಗಳಿವೆ.

ಸ್ವಾಮೀಜಿ ಹಲವು ರಾಜಕಾರಣಿಗಳಿಗೆ ಆಪ್ತರಾಗಿದ್ದರು. 26ರಂದು ಮಠದಲ್ಲಿ ನೂತನ ಕಟ್ಟಡದ ಭೂಮಿಪೂಜೆ ನಡೆಯಬೇಕಿತ್ತು. ಇದರಲ್ಲಿ ಹಲವು ರಾಜಕಾರಣಿಗಳು ಪಾಲ್ಗೊಳ್ಳಬೇಕಿತ್ತು. ಅದಕ್ಕೆ ಎರಡು ದಿನ ಮುನ್ನವೇ ಶ್ರೀಗಳು ಶಂಕಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.

ವರ್ಷದಲ್ಲೇ ಇಬ್ಬರು ಸ್ವಾಮೀಜಿ ಆತ್ಮಹತ್ಯೆ

ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಾಗಡಿಯ ಚಿಲುಮೆ ಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಾಗಿ ವರ್ಷದೊಳಗೇ ಮತ್ತೊಬ್ಬರು ಶ್ರೀಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇಬ್ಬರ ಸಾವಿನಲ್ಲೂ ಸಾಮ್ಯತೆ ಇದೆ. ಕಿಟಿಕಿಗೆ ನೇಣುಬಿಗಿದ ಸ್ಥಿತಿಯಲ್ಲೇ ಶವಗಳು ಪತ್ತೆ ಆಗಿದ್ದವು. ಚಿಲುಮೆ ಮಠದ ಶ್ರೀಗಳ ಆತ್ಮಹತ್ಯೆಗೆ ಇನ್ನೂ ಕಾರಣ ಗೊತ್ತಾಗಿಲ್ಲ. ಬಂಡೆಮಠದ ಶ್ರೀಗಳ ಸಾವಿನ ಬಗ್ಗೆ ಪೊಲೀಸರು
ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT