ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಿಂದ ಒಗ್ಗಟ್ಟಿನ ಸಂಕಲ್ಪ ಮಾಡಿಸಿದ ಸಿಎಂ

ಹರಿಹರ: ಜನ ಸಂಕಲ್ಪ ಯಾತ್ರೆಯಲ್ಲಿ ಶಕ್ತಿ ಪ್ರದರ್ಶನಕ್ಕೆ ಇಳಿದ ಬೆಂಬಲಿಗರು
Last Updated 23 ನವೆಂಬರ್ 2022, 10:34 IST
ಅಕ್ಷರ ಗಾತ್ರ

ಹರಿಹರ (ದಾವಣಗೆರೆ ಜಿಲ್ಲೆ): ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಿಜೆಪಿಯ ‘ಜನ ಸಂಕಲ್ಪ ಯಾತ್ರೆ’ಯಲ್ಲಿ ಹರಿಹರ ವಿಧಾನಸಭಾ ಕ್ಷೇತ್ರಗಳ ಆಕಾಂಕ್ಷಿಗಳ ಬೆಂಬಲಿಗರು ಪೋಟೊ ಪ್ರದರ್ಶಿಸಿ ಗಮನಸೆಳೆಯಲು ಪೈಪೋಟಿಗೆ ಇಳಿದಿದ್ದರಿಂದ ಕೆರಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಒಗ್ಗಟ್ಟು ಪ್ರದರ್ಶಿಸುವುದಾಗಿ ಮೂವರು ಆಕಾಂಕ್ಷಿಗಳಿಂದ ಪ್ರಮಾಣ ಮಾಡಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೇದಿಕೆಗೆ ಆಗಮಿಸುತ್ತಿದ್ದಂತೆ ಹರಿಹರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾದ ಮಾಜಿ ಶಾಸಕ ಬಿ.ಪಿ. ಹರೀಶ್‌, ಮುಖಂಡರಾದ ಚಂದ್ರಶೇಖರ್‌ ಪೂಜಾರ್‌ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿರೇಶ್‌ ಹನಗವಾಡಿ ಅವರ ಬೆಂಬಲಿಗರು ಫೋಟೊ ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದರು. ಇದರಿಂದ ಸಿಟ್ಟಿಗೆದ್ದ ಮುಖ್ಯಮಂತ್ರಿ ಮೈಕ್‌ ಬಳಿ ಬಂದು, ‘ಹರಿಹರದಲ್ಲಿ ಈ ಬಾರಿ ನೂರಕ್ಕೆ ನೂರು ಬಿಜೆಪಿಯೇ ಗೆಲ್ಲುತ್ತದೆ. ಅಭಿಮಾನಿಗಳು ಹೀಗೆ ಫೋಟೊ ಹಿಡಿಯುವುದು ಕೆಲಸಕ್ಕೆ ಬರುವುದಿಲ್ಲ. ಒಗ್ಗಟ್ಟು ಪ್ರದರ್ಶಿಸಬೇಕು. ಫೋಟೊ ಕೆಳಗೆ ಇಡಿ’ ಎಂದು ಗದರಿದರು.

ಟಿಕೆಟ್‌ ಆಕಾಂಕ್ಷಿಗಳಾದ ಬಿ.ಪಿ. ಹರೀಶ್‌, ಚಂದ್ರಶೇಖರ್‌ ಪೂಜಾರ್‌ ಹಾಗೂ ವೀರೇಶ ಹನಗವಾಡಿ ಅವರನ್ನು ತಮ್ಮ ಬಳಿಗೆ ಕರೆಸಿಕೊಂಡ ಮುಖ್ಯಮಂತ್ರಿ, ಕೈಯನ್ನು ಮುಂದಕ್ಕೆ ಮಾಡಿಸಿ ಪ್ರಮಾಣ ಮಾಡಿಸಿದರು.

‘ಬಿಜೆಪಿ ಕಾರ್ಯಕರ್ತರು, ಪದಾಧಿಕಾರಿಗಳಾಗಿರುವ ನಾವು ಪ್ರಾಮಾಣಿಕವಾಗಿ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡುತ್ತೇವೆ. ಬಿಜೆಪಿಯನ್ನು ದೊಡ್ಡ ಬಹುಮತದಿಂದ ಆರಿಸಿ ತರುತ್ತೇವೆ. ಪಕ್ಷವು ಯಾರನ್ನು ಗುರುತಿಸಿ ಟಿಕೆಟ್‌ ಕೊಡುತ್ತದೆಯೋ ನಾವೆಲ್ಲರೂ ಅವರನ್ನು ಗೆಲ್ಲಿಸಲು ಶ್ರಮಿಸುತ್ತೇವೆ’ ಎಂದು ಸಂಕಲ್ಪ ಮಾಡಿಸಿದರು.
ಇದೇ ವೇಳೆ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ ಅವರು, ‘ಭಿತ್ತಿಪತ್ತವನ್ನು ತೋರಿಸುವುದನ್ನು ನಿಲ್ಲಿಸದೇ ಇದ್ದರೆ ನಾನೇ ಹರಿಹರ ಕ್ಷೇತ್ರಕ್ಕೆ ಬಂದು ನಿಂತುಕೊಳ್ಳುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿ ವೇದಿಕೆಗೆ ಬರುವ ಮುನ್ನವೂ ಟಿಕೆಟ್‌ ಆಕಾಂಕ್ಷಿಗಳ ಬೆಂಬಲಿಗರ ಫೋಟೊಗಳನ್ನು ಹಿಡಿದು ಶಕ್ತಿ ಪ್ರದರ್ಶಿಸಲು ಪೈಪೋಟಿಗಿಳಿದಿದ್ದರು. ಅಭಿಮಾನಿಗಳ ನಡುವೆ ವಾಗ್ವಾದವೂ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT