ಭಾನುವಾರ, ಏಪ್ರಿಲ್ 11, 2021
25 °C
‘ಸುಪ್ರೀಂ’ ಗೆ ಪ್ರಮಾಣಪತ್ರ

ಪಂಚಮಸಾಲಿ ಮೀಸಲಾತಿ: ವಿಧಾನಸಭೆಯಲ್ಲಿ ಸರ್ಕಾರದ ನಿಲುವು ಪ್ರಕಟಿಸಿದ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಗರಿಷ್ಠ ಮೀಸಲು ಪ್ರಮಾಣವನ್ನು ಶೇ 50ರ ಮಿತಿಗಿಂತ ಹೆಚ್ಚಿಸಬಹುದೇ ಎಂದು ಅಭಿಪ್ರಾಯ ತಿಳಿಸುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಈ ಬಗ್ಗೆ ತನ್ನ ನಿಲುವು ತಿಳಿಸಿ ರಾಜ್ಯ ಸರ್ಕಾರ ಶೀಘ್ರ ಪ್ರಮಾಣಪತ್ರ ಸಲ್ಲಿಸಲಿದೆ’ ಎಂದು ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಪಂಚಮಸಾಲಿ ಸಮುದಾಯ ಸೇರಿದಂತೆ ವಿವಿಧ ಸಮುದಾಯಗಳ ಮೀಸಲಾತಿ ಬೇಡಿಕೆ ಬಗ್ಗೆ ಸರ್ಕಾರದ ಪರವಾಗಿ ಸದನದಲ್ಲಿ ಉತ್ತರ ನೀಡಿದ ಅವರು, ‘ಸುಪ್ರೀಂ ಕೋರ್ಟ್‌ ಈಚೆಗೆ ನೀಡಿರುವ ಸೂಚನೆಯು ಈಗಿನ ಸಮಸ್ಯೆ ಪರಿಹಾರಕ್ಕೆ ಒಂದು ದಾರಿಯಾಗಬಹುದು’ ಎಂದರು.

‘ಪಂಚಮಸಾಲಿ ಸಮುದಾಯ ಸೇರಿದಂತೆ ಎಲ್ಲ ಸಮುದಾಯಗಳ ಮೀಸಲಾತಿ ಬೇಡಿಕೆ ಈಡೇರಿಸಲು ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಮೂವರ ಸಮಿತಿ ರಚಿಸಲಾಗುತ್ತದೆ. ಈ ಸಮಿತಿ ವರದಿ ಆಧರಿಸಿ ಸಾಂವಿಧಾನಿಕ ಹಾಗೂ ಕಾನೂನು ಚೌಕಟ್ಟಿನಲ್ಲಿ ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

‘1992ರಲ್ಲಿ ಇಂದಿರಾ ಸಾಹ್ನಿ ಪ್ರಕರಣದಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌, ಎಲ್ಲ ಸಮುದಾಯಗಳಿಗೆ ನೀಡಲಾಗುವ ಒಟ್ಟಾರೆ ಮೀಸಲಾತಿ ಪ್ರಮಾಣ ಗರಿಷ್ಠ ಶೇ 50ಕ್ಕಿಂತ ಮೀರುವಂತಿಲ್ಲ ಎಂದು ಹೇಳಿದೆ. ರಾಜ್ಯದಲ್ಲಿ ಹಲವು ಸಮುದಾಯಗಳು ಮೀಸಲಾತಿಯ ಬೇಡಿಕೆ ಇಟ್ಟಿವೆ. ಈ ಬಗ್ಗೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ವರದಿ ಕೇಳಲಾಗಿದೆ. ಈ ವರದಿ, ತಜ್ಞರ ಸಮಿತಿಯನ್ನು ಗಣನೆಗೆ ತೆಗೆದುಕೊಂಡು ಸರ್ಕಾರ ಸ್ಪಷ್ಟ ತೀರ್ಮಾನ ಕೈಗೊಳ್ಳಲಿದೆ’ ಎಂದರು.

‘ಮೀಸಲಾತಿ ವಿಷಯದಲ್ಲಿ ಯಾವುದೇ ತೀರ್ಮಾನ ಕೈಗೊಂಡರೂ ಸಾಂವಿಧಾನಿಕ ಹಾಗೂ ಕಾನೂನು ಚೌಕಟ್ಟಿನಲ್ಲಿ ಇರಬೇಕು. ಇಲ್ಲದಿದ್ದರೆ ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ. ಇದಕ್ಕೆ ಮಹಾರಾಷ್ಟ್ರ ಹಾಗೂ ರಾಜಸ್ಥಾನದ ಉದಾಹರಣೆಗಳು ನಮ್ಮ ಮುಂದೆ ಇವೆ‘ ಎಂದರು.

’ರಾಜ್ಯ ಸರ್ಕಾರ 1994ರಲ್ಲಿ ಮೀಸಲಾತಿ ಪ್ರಮಾಣವನ್ನು ಶೇ 73ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿತ್ತು. ಆದರೆ, ಯಾವುದೇ ಅಧ್ಯಯನ ನಡೆಸದೆ ಆದೇಶ ಹೊರಡಿಸಿದ್ದರಿಂದ ಅದಕ್ಕೆ ಕೋರ್ಟ್‌ನಲ್ಲಿ ಮಾನ್ಯತೆ ಸಿಗಲಿಲ್ಲ’ ಎಂದು ಅವರು ನೆನಪಿಸಿದರು.

‘ಹಾವನೂರು, ವೆಂಕಟಸ್ವಾಮಿ, ಚಿನ್ನಪ್ಪರೆಡ್ಡಿ ಆಯೋಗದ ಮಾದರಿಯಲ್ಲೇ ಶಾಶ್ವತ ಆಯೋಗ ರಚಿಸಲು ಸರ್ಕಾರ ಮುಂದಾಗಿದೆಯೇ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

‘ಅಂತಹ ಪ್ರಸ್ತಾಪ ಇಲ್ಲ. ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುತ್ತದೆ‘ ಎಂದು ಬೊಮ್ಮಾಯಿ ಹೇಳಿದರು.

ಮುಖ್ಯಮಂತ್ರಿ ನಾಪತ್ತೆ: ಯತ್ನಾಳ್‌ ಕಿಡಿ
’ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2 ಎ ಗೆ ಸೇರಿಸುವ ಬಗ್ಗೆ ಸದನದಲ್ಲಿ ಸಕಾರಾತ್ಮಕ ಉತ್ತರ ನೀಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಾಪತ್ತೆಯಾಗಿದ್ದಾರೆ‘ ಎಂದು ಬಿಜೆಪಿಯ ಹಿರಿಯ ಸದಸ್ಯ ಬಸನಗೌಡ ಪಾಟೀಲ ಯತ್ನಾಳ್‌ ಆಕ್ರೋಶ ವ್ಯಕ್ತಪಡಿಸಿದರು.

ಪಂಚಮಸಾಲಿ ಸಮುದಾಯದ ಮೀಸಲಾತಿ ಬೇಡಿಕೆ ಬಗ್ಗೆ ವಿಧಾನಸಭೆಯಲ್ಲಿ ಬುಧವಾರ ವಿಷಯ ಪ್ರಸ್ತಾಪಿಸಿದ ಅವರು, ’ಸಮುದಾಯದ ಬೇಡಿಕೆ ಈಡೇರಿಸಲು ಸಕಾರಾತ್ಮಕ ಉತ್ತರ ನೀಡುತ್ತೇನೆ ಎಂದು ಮುಖ್ಯಮಂತ್ರಿ ಮಂಗಳವಾರ ನನ್ನ ಬಳಿ ಹೇಳಿದ್ದರು. ಆದರೆ, ಅವರು ಹಾಗೂ ಸಮಾಜ ಕಲ್ಯಾಣ ಸಚಿವರು ಸದನಕ್ಕೆ ಬಂದೇ ಇಲ್ಲ. ಅವರಿಗೆ ಸಮುದಾಯದ ಬಗ್ಗೆ ಎಷ್ಟು ಪ್ರೀತಿ ಇದೆ ಎಂಬುದು ಇದರಿಂದ ಗೊತ್ತಾಗುತ್ತದೆ‘ ಎಂದರು.

ಬಜೆಟ್‌ ಕುರಿತ ಚರ್ಚೆ ಆರಂಭಿಸುವಂತೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದರು.

ಮೀಸಲಾತಿ ಬಗ್ಗೆ ಪ್ರಸ್ತಾಪಿಸಲು ಕೂಡಲೇ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಧರಣಿ ನಡೆಸಲು ಯತ್ನಾಳ್‌ ಮುಂದಾದರು. ಆಗ ಸಿದ್ದರಾಮಯ್ಯ,  ಯತ್ನಾಳ್‌ಗೆ ಅನುವು ಮಾಡಿಕೊಟ್ಟರು.

’ಸಿದ್ದರಾಮಯ್ಯ ಅವರಿಗೆ ನಮ್ಮ ಸಮುದಾಯದ ಬಗ್ಗೆ ಪ್ರೀತಿ ಇದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ನಮ್ಮ ಸಮುದಾಯದ ಕೊಡುಗೆ ದೊಡ್ಡದು. ಆದರೆ, ಅವರಿಗೆ ಸಮುದಾಯದ ಬಗ್ಗೆ ಪ್ರೀತಿ ಇಲ್ಲ. ಇನ್ನೆರಡು ವರ್ಷಗಳಲ್ಲಿ ಚುನಾವಣೆ ನಡೆಯಲಿದೆ ಎಂಬುದು ನಮ್ಮ ನಾಯಕರಿಗೆ ನೆನಪಿನಲ್ಲಿ ಇರಲಿ. ಆಗ ನಮ್ಮವರು ತಕ್ಕ ಪಾಠ ಕಲಿಸಲಿದ್ದಾರೆ‘ ಎಂದು ಎಚ್ಚರಿಸಿದರು. ಆಗ ಕಾಂಗ್ರೆಸ್‌ ಸದಸ್ಯರು ಮೇಜು ತಟ್ಟಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಬಿಜೆಪಿಯ ಎಂ.ಪಿ.ರೇಣುಕಾಚಾರ್ಯ, ’ಮುಖ್ಯಮಂತ್ರಿ ಅವರಿಗೆ ಸಮುದಾಯದ ಬಗ್ಗೆ ಪ್ರೀತಿ ಇದೆ. ಅವರು ನಾಪತ್ತೆಯಾಗಿದ್ದಾರೆ ಎಂಬ ಪದವನ್ನು ವಾಪಸ್ ಪಡೆಯಿರಿ‘ ಎಂದರು. ಆಗ ಯತ್ನಾಳ್‌, ’ನಾನು ವಾಜಪೇಯಿ ಸರ್ಕಾರದಲ್ಲಿ ಮಂತ್ರಿಯಾಗಿದ್ದವನು. ಹಾದಿ ಬೀದಿಯಲ್ಲಿ ಹೋಗುವವನು ಅಲ್ಲ‘ ಎಂದು ತಿರುಗೇಟು ನೀಡಿದರು.

‘ಪರಿಶಿಷ್ಟ ಸಮುದಾಯದ ಹಲವರು ಹೆಲಿಕಾಪ್ಟರ್‌ನಲ್ಲಿ ಓಡಾಡುತ್ತಾರೆ. ಅಂತಹವರಿಗೆ ಮೀಸಲಾತಿಯ ಅಗತ್ಯ ಇಲ್ಲ. ನನಗೂ ಮೀಸಲಾತಿ ಬೇಡ. ಆದರೆ, ನಮ್ಮ ಸಮುದಾಯದ ಜನರಿಗೆ ಮೀಸಲಾತಿ ಸಿಗಬೇಕು‘ ಎಂದು ಪ್ರತಿಪಾದಿಸಿದ ಯತ್ನಾಳ್, ಕಾಲಹರಣ ಮಾಡುವುದನ್ನು ಬಿಟ್ಟು, ಎರಡು– ಮೂರು ತಿಂಗಳು ಅಥವಾ ಶತಮಾನದೊಳಗೆ ಮೀಸಲಾತಿ ನೀಡುತ್ತೇನೆ ಎಂದು ಮುಖ್ಯಮಂತ್ರಿ ಸ್ಪಷ್ಟವಾಗಿ ಹೇಳಲಿ.  ಅವರು ಸ್ಪಷ್ಟ ಉತ್ತರ ನೀಡದಿದ್ದರೆ ಸದನದಲ್ಲಿ ಸೋಮವಾರ ಧರಣಿ ನಡೆಸುತ್ತೇನೆ’ ಎಂದೂ ಎಚ್ಚರಿಸಿದರು.‌

ಅಹೋರಾತ್ರಿ ಧರಣಿ: ಜಯಮೃತ್ಯುಂಜಯ ಸ್ವಾಮೀಜಿ
‘ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಬೇಡಿಕೆಗೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ಸರ್ಕಾರ ನೀಡಿದ ಉತ್ತರ ಸಮಾಧಾನ ತಂದಿಲ್ಲ. ಹೀಗಾಗಿ, ಹೋರಾಟ ತೀವ್ರಗೊಳಿಸಲು ನಿರ್ಧರಿಸಿದ್ದೇವೆ. ಧರಣಿ ಸ್ಥಳದಲ್ಲಿ ಶಿವರಾತ್ರಿಯಂದು (ಗುರುವಾರ) ಅಹೋರಾತ್ರಿ ಧರಣಿ ನಡೆಸುತ್ತೇವೆ’ ಎಂದು  ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ರಾತ್ರಿ 9 ಗಂಟೆಯಿಂದ ಇಷ್ಟಲಿಂಗ ಪೂಜೆಯ ಮೂಲಕ ಶಿವರಾತ್ರಿ ಆಚರಣೆ ಮಾಡುತ್ತೇವೆ. ದೇವರ ಸ್ಮರಣೆಯೊಂದಿಗೆ ಧರಣಿ ಮುಂದುವರಿಸುತ್ತೇವೆ’ ಎಂದರು.

ಮೀಸಲು: ಸಮಿತಿಗೆ ನ್ಯಾ. ಸುಭಾಷ್ ಅಡಿ ಅಧ್ಯಕ್ಷ
ವಿವಿಧ ಸಮುದಾಯಗಳ ಮೀಸಲಾತಿ ಬೇಡಿಕೆಯ ಬಗ್ಗೆ ಪರಾಮರ್ಶೆ ನಡೆಸಿ, ವರದಿ ನೀಡಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಮತ್ತು ಮೈಸೂರು ಮಹಾರಾಣಿ ಕಾಲೇಜಿನ ಪ್ರಾಧ್ಯಾಪಕ ಡಾ.ಬಿ.ವಿ.ವಸಂತಕುಮಾರ್‌ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸುವ ಕುರಿತ ತೀರ್ಮಾನ ತೆಗೆದುಕೊಂಡು, ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿಯ ಅಧಿಕಾರವನ್ನು ಮುಖ್ಯಮಂತ್ರಿಗೆ ನೀಡಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು