ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವೀಣ್‌ ನೆಟ್ಟಾರು ಹತ್ಯೆ: ರಾಜ್ಯ ಸರ್ಕಾರದ ‘ಜನೋತ್ಸವ’ ರದ್ದು– ಸಿಎಂ ಬೊಮ್ಮಾಯಿ

Last Updated 27 ಜುಲೈ 2022, 20:03 IST
ಅಕ್ಷರ ಗಾತ್ರ

ಬೆಂಗಳೂರು: ‘ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ
ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಗುರುವಾರ (ಜುಲೈ 28) ಹಮ್ಮಿಕೊಂಡಿದ್ದ ಸಾಧನಾ ಸಮಾವೇಶ– ‘ಜನೋತ್ಸವ’ವನ್ನು ರದ್ದುಪಡಿಸಲಾಗಿದೆ.

ಆರ್‌.ಟಿ. ನಗರದಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ರಾತ್ರಿ 12.30ಕ್ಕೆ ತುರ್ತು ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ, ಬೊಮ್ಮಾಯಿ,‘ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆಯ ಹಿನ್ನೆಲೆಯಲ್ಲಿ ಜನೋತ್ಸವವನ್ನು ರದ್ದುಪಡಿಸಲಾಗಿದೆ’ ಎಂದು ತಿಳಿಸಿದರು.

ಬೆಳಿಗ್ಗೆಯಿಂದ ಅನೇಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಪ್ರವೀಣ ಹತ್ಯೆ ಹಾಗೂ ನಮ್ಮ ಪಕ್ಷದ ಯುವಕರ ಆಕ್ರೋಶವನ್ನೂ ಗಮನಿಸಿದೆ. ನನ್ನ ಮನಸ್ಸಿಗೂ ತುಂಬಾ ನೋವಾಗಿದೆ.

ಬಹಳ ತೊಳಲಾಟದಲ್ಲಿದ್ದೆ.ಹತ್ಯೆಯಾದ ಪ್ರವೀಣ್‌ ಅವರ ತಾಯಿಯ ಆಕ್ರಂದನ ನೋಡಿದ ಬಳಿಕ ಕಾರ್ಯಕ್ರಮ ರದ್ದುಪಡಿಸಲು ತೀರ್ಮಾನಿಸಿದೆ.

‌ಜನೋತ್ಸವ ಮಾಡಲು ನನ್ನ ಮನಃಸಾಕ್ಷಿ ಒಪ್ಪಲಿಲ್ಲ. ಹಾಗಾಗಿ ಮುಂದೂಡಲು ತೀರ್ಮಾನಿಸಿದೆ. ಪತ್ರಿಕಾಗೋಷ್ಠಿಗೆ ಬರುವ ಮುನ್ನ ನಮ್ಮ ಪಕ್ಷದ ಅಧ್ಯಕ್ಷರಾದ ಜೆ.ಪಿ. ನಡ್ಡಾ ಸೇರಿದಂತೆ ಪ್ರಮುಖರಿಗೆ ಈ ಮಾಹಿತಿಯನ್ನು ನೀಡಲಾಗಿದೆ ಎಂದರು.

ಜನೋತ್ಸವ ನಡೆಸುವ ಮೂಲಕ ನಮ್ಮ ಸರ್ಕಾರ ಜನಪರವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದನ್ನು, ಮುಂದಿನ ಯೋಜನೆಗಳನ್ನು ಘೋಷಿಸಬೇಕು ಎಂದು ನಿಶ್ಚಯಿಸಿದ್ದೆವು. ನಮ್ಮ ಪಕ್ಷದ ಅಮಾಯಕ ಹಾಗೂ ನಿಷ್ಠಾವಂತ ಕಾರ್ಯಕರ್ತ ಪ್ರವೀಣರ ಹತ್ಯೆಯ ನೋವು ಹಾಗೂ ಯುವ ಸಮುದಾಯದಭಾವನೆಯನ್ನು ಗಮನಿಸಿದೆ. ಹಾಗಂತ, ಯುವಕರು, ದಲಿತರು, ಹಿಂದುಳಿದವರು ಹಾಗೂ ಮಹಿಳೆಯರ ಪರವಾದ ಕಾರ್ಯಕ್ರಮಗಳನ್ನು ಮುಂದುವರಿಸುತ್ತೇವೆ. ದೊಡ್ಡಬಳ್ಳಾಪುರ ಹಾಗೂ ವಿಧಾನಸೌಧದಲ್ಲಿ ಇಂದು ನಡೆಯುವ ಎಲ್ಲ ಕಾರ್ಯಕ್ರಮಗಳು ರದ್ದಾಗಿವೆ. ಆದರೆ, ಜನಪರ ಕಾರ್ಯಕ್ರಮ–ಯೋಜನೆಗಳನ್ನು ಮಾಧ್ಯಮದವರ ಮೂಲಕ ಪ್ರಕಟಿಸುತ್ತೇವೆ ಎಂದೂ ಅವರು ಹೇಳಿದರು.

ಪ್ರವೀಣ್‌ ಹತ್ಯೆಯ ಆರೋಪಿಗಳನ್ನು ಸದೆಬಡಿಯಲು ಸರ್ಕಾರ ಬದ್ಧ. ಮಾಮೂಲಾದ ಕ್ರಮಗಳ ಹೊರತಾಗಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.ಇಂಥ ಕೃತ್ಯದಲ್ಲಿ ಭಾಗಿಯಾದ ಸಂಘಟನೆಗಳನ್ನು ನಾಶ ಮಾಡಲು, ಈಗ ಇರುವ ವ್ಯವಸ್ಥೆಯ ಹೊರತಾಗಿ ವಿಶೇಷವಾದ ಭಯೋತ್ಪಾದನಾ ನಿಗ್ರಹ ಕಮಂಡೋವನ್ನು ರಚಿಸಲುನಾವು ಉದ್ದೇಶಿಸಿದ್ದೇವೆ ಎಂದರು.

ಜನೋತ್ಸವ ರದ್ದಾಗಿರುವುದಕ್ಕೆ ಸಚಿವರಾದ ಸುಧಾಕರ್, ಮುನಿರತ್ನ, ನಾಗರಾಜ್ ಹಾಗೂ ಎಲ್ಲ ಕಾರ್ಯಕರ್ತರ ಕ್ಷಮೆ ಕೇಳುತ್ತೇನೆ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT