ಶುಕ್ರವಾರ, ಫೆಬ್ರವರಿ 3, 2023
25 °C

ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ಸಂವಿಧಾನದ ಪ್ರತಿ: ಸಿಎಂ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತದ ಸಂವಿಧಾನದ‌ ಕುರಿತು ಗ್ರಾಮೀಣ ಪ್ರದೇಶಗಳಲ್ಲೂ ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳಿಗೆ ಸಂವಿಧಾನದ ಪ್ರತಿಯನ್ನು ಪೂರೈಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸಂವಿಧಾನ ದಿನದ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಶನಿವಾರ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, 'ಗ್ರಾಮೀಣ ಪ್ರದೇಶದ ಜನರು ಅಲ್ಲಿನ ಗ್ರಂಥಾಲಯಗಳಲ್ಲಿ ಸಂವಿಧಾನ ಓದಲು ಅವಕಾಶ ಕಲ್ಪಿಸಲಾಗುವುದು' ಎಂದರು.

ಸಂವಿಧಾನದ ಪ್ರತಿಗಳ ಜತೆಯಲ್ಲೇ ಸ್ಥಳೀಯ ಸಂಸ್ಥೆಗಳ ರಚನೆಯ ಮೂಲಕ ಆಡಳಿತ ವಿಕೇಂದ್ರೀಕರಣಕ್ಕೆ ಅವಕಾಶ ಕಲ್ಪಿಸಿದ ಸಂವಿಧಾನದ 73 ಮತ್ತು 74ನೇ‌ತಿದ್ದುಪಡಿಗಳಿಗೆ ಸಂಬಂಧಿಸಿದ ಗ್ರಂಥಗಳನ್ನೂ ಗ್ರಾಮೀಣ ಪ್ರದೇಶಗಳ ಗ್ರಂಥಾಲಯಗಳಿಗೆ ಒದಗಿಸಲಾಗುವುದು ಎಂದು ಹೇಳಿದರು.

ಅಂಬೇಡ್ಕರ್ ನೇತೃತ್ವದ ಸಂವಿಧಾನ ರಚನಾ ಸಮಿತಿಯು ಜಗತ್ತಿನ ಹಲವು ರಾಷ್ಟ್ರಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ದೇಶಕ್ಕೆ ಅತ್ಯುತ್ತಮ ಮತ್ತು ಬಲಿಷ್ಠವಾದ ಸಂವಿಧಾನವನ್ನು ನೀಡಿದೆ. ಸಂವಿಧಾನದ ಬಲದಿಂದಲೇ ದೇಶವು  75 ವರ್ಷಗಳ ಕಾಲ ಉತ್ತಮವಾಗಿ ನಡೆದುಕೊಂಡು ಬಂದಿದೆ. ದೇಶದಲ್ಲಿ ಕಾನೂನು ಪಾಲನೆ ಅತ್ಯುತ್ತಮವಾಗಿರುವುದಕ್ಕೂ ಇದೇ ಕಾರಣ ಎಂದರು.

ದೇಶದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾ ರಂಗ ಎಲ್ಲವೂ ಸಂವಿಧಾನದ ಆಶಯದಂತೆ ಸಾಗುತ್ತಿವೆ.‌ ಸಂವಿಧಾನದ ಕಾರಣದಿಂದ ಸಾಮಾಜಿಕ ಮತ್ತು ರಾಜಕೀಯ ವಿಕೇಂದ್ರೀಕರಣ ಸಾಧ್ಯವಾಗಿದೆ. ಆರ್ಥಿಕ ವಿಕೇಂದ್ರೀಕರಣ ಇನ್ನಷ್ಟು ಆಗಬೇಕಿದೆ ಎಂದು ಮುಖ್ಯಮಂತ್ರಿ ಹೇಳಿದರು.

ದೇಶಕ್ಕೆ ಶಾಶ್ವತವಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನೀಡಿರುವುದು ಸಂವಿಧಾನ ರಚನಾ ಸಮಿತಿಯ ದೊಡ್ಡ ಕೊಡುಗೆ. ಅದರಿಂದಾಗಿಯೇ ದೇಶದಲ್ಲಿ ಕಾನೂನಿನ ಆಡಳಿತ ಭದ್ರವಾಗಿದೆ ಎಂದರು.

ನಂತರ ವಿಧಾನಸೌಧದ ಸಮ್ಮೇಳನ‌ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆಯ ವಾಚನ ಹಾಗೂ ಸಂವಿಧಾನದ ಆಶಯದಂತೆ ನಡೆದುಕೊಳ್ಳುವ ಪ್ರಮಾಣ ಸ್ವೀಕರಿಸಲಾಯಿತು.

ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ , ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.‌ಮಣಿವಣ್ಣನ್ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು