ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಡಿ ಪ್ರಕರಣ | ಪ್ರಾಥಮಿಕ ತನಿಖೆ ವರದಿ ಆಧರಿಸಿ ಎಫ್‌ಐಆರ್‌: ಬಸವರಾಜ ಬೊಮ್ಮಾಯಿ

Last Updated 11 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ವಿರುದ್ಧದ ಆರೋಪಕ್ಕೆ ಸಂಬಂಧಿಸಿದ ಸಿ.ಡಿ ಪ್ರಕರಣದ ಕುರಿತು ವಿಶೇಷ ತನಿಖಾ ತಂಡವು (ಎಸ್‌ಐಟಿ) ಪ್ರಾಥಮಿಕ ವಿಚಾರಣೆ ನಡೆಸಿ ಸಲ್ಲಿಸುವ ವರದಿಯನ್ನು ಆಧರಿಸಿ ಎಫ್‌ಐಆರ್‌ ದಾಖಲಿಸುವ ಬಗ್ಗೆ ನಿರ್ಧಾರಕ್ಕೆ ಬರಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳ ಜತೆ ಗುರುವಾರ ಮಾತನಾಡಿದ ಅವರು, ‘ಸಿ.ಡಿ ಬಿಡುಗಡೆ ಹಿಂದೆ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿ ರಮೇಶ ಜಾರಕಿಹೊಳಿ ಪತ್ರ ಬರೆದಿದ್ದರು. ಅವರ ಮನವಿಯಂತೆ ಎಸ್‌ಐಟಿ ತನಿಖೆಗೆ ಆದೇಶಿಸಲಾಗಿದೆ. ಇಂತಿಷ್ಟೇ ದಿನಗಳಲ್ಲಿ ವರದಿ ನೀಡಬೇಕೆಂದು ತನಿಖಾ ತಂಡಕ್ಕೆ ಗಡುವು ವಿಧಿಸಲಾಗದು. ಆದಷ್ಟು ಬೇಗ ವರದಿ ಸಲ್ಲಿಸುವ ನಿರೀಕ್ಷೆ ಇದೆ’ ಎಂದರು.

ತನಿಖೆಯಲ್ಲಿ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಕಬ್ಬನ್‌ ಪಾರ್ಕ್‌ ಪೊಲೀಸ್ ಠಾಣೆಗೆ ರಮೇಶ ಜಾರಕಿಹೊಳಿ ವಿರುದ್ಧ ದೂರು ನೀಡಿರುವುದು, ನಂತರ ದೂರನ್ನು ವಾಪಸ್‌ ಪಡೆದಿರುವುದು ಸೇರಿದಂತೆ ಎಲ್ಲ ಸಂಗತಿಗಳ ಬಗ್ಗೆಯೂ ಪೊಲೀಸರು ಸಮಗ್ರವಾಗಿ ತನಿಖೆ ನಡೆಸುತ್ತಾರೆ. ತನಿಖೆಯ ವರದಿಯನ್ನು ಆಧರಿಸಿ ಅಗತ್ಯ ಕಂಡುಬಂದಲ್ಲಿ ಎಫ್‌ಐಆರ್‌ ದಾಖಲಿಸಿ, ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.

‘ನಕಲಿ ಸಿ.ಡಿ ಆಗಿದ್ದಲ್ಲಿ ತನಿಖೆ ಏಕೆ?’ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರಶ್ನೆ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು, ‘ನಕಲಿ ಸಿ.ಡಿ ತಯಾರಿಸಿದವರು ಯಾರು? ದರ ಹಿಂದೆ ಯಾರೆಲ್ಲ ಇದ್ದರು? ಯಾವ ಸ್ಥಳಗಳಲ್ಲಿ ಸಿ.ಡಿ ತಯಾರಿಸಲಾಗಿದೆ? ಅದರ ಹಿಂದೆ ಏನೆಲ್ಲಾ ನಡೆದಿದೆ ಎಂಬ ಸಂಗತಿಗಳ ಕುರಿತು ತನಿಖೆ ನಡೆಯಬೇಕಲ್ಲವೆ’ ಎಂದು ಮರುಪ್ರಶ್ನೆ ಹಾಕಿದರು.

ಶರ್ಟ್‌, ಪ್ಯಾಂಟ್‌ ಬಿಚ್ಚುವುದಕ್ಕೂ ಕಾಂಗ್ರೆಸ್‌ನವರು ಕಾರಣವೇ ಎಂಬ ಶಿವಕುಮಾರ್‌ ಹೇಳಿಕೆ ಕುರಿತು ಕೇಳಿದಾಗ, ‘ಅದೆಲ್ಲವೂ ತನಿಖೆಯಲ್ಲಿ ಗೊತ್ತಾಗುತ್ತದೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಯಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT