ಬುಧವಾರ, ಏಪ್ರಿಲ್ 14, 2021
31 °C
ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಬೇಸರ

ವಿಧಾನಪರಿಷತ್‌: ಪುನರ್ವಸತಿ ಕೇಂದ್ರವಾದ ಚಿಂತಕರ ಚಾವಡಿ - ಬಸವರಾಜ ಹೊರಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಚಿಂತಕರ ಚಾವಡಿಯಂಬ ಹೆಗ್ಗಳಿಕೆ ಹೊಂದಿದ್ದ ವಿಧಾನಪರಿಷತ್‌ ಇತ್ತೀಚೆಗೆ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡವರ ಪುನರ್ವಸತಿ ಕೇಂದ್ರವಾಗಿ ಪರಿವರ್ತನೆಯಾಗಿದೆ ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಮುರುಘಾ ಮಠದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ಸಾಹಿತಿ, ಕಲಾವಿದರು, ಪತ್ರಕರ್ತರಿಂದ ಕೂಡಿರುತ್ತಿದ್ದ ಹಿರಿಯರ ಸದನ ಕಲುಷಿತವಾಗುತ್ತಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದವರು, ಸಚಿವರಾಗುವ ಅಪೇಕ್ಷೆ ಹೊಂದಿದವರು ಪರಿಷತ್ತಿಗೆ ಆಯ್ಕೆಯಾಗುತ್ತಿದ್ದಾರೆ. ರಾಜಕೀಯ ಪುಡಾರಿಗಳು, ನಾಯಕರ ಹಿಂಬಾಲಕರನ್ನು ವಿಧಾನಪರಿಷತ್ತಿಗೆ ತರುವುದು ಸರಿಯಲ್ಲ. ದೇಗುಲ ಸಮಾನವಾದ ಪರಿಷತ್‌ ಅಪವಿತ್ರ ಆಗಬಾರದು’ ಎಂದು ಅಭಿಪ್ರಾಯಪಟ್ಟರು.

‘ವಿಧಾನಪರಿಷತ್ತಿನಲ್ಲಿ ಡಿ.15ರಂದು ನಡೆದ ಘಟನೆ ಕಪ್ಪುಚುಕ್ಕೆಯಾಗಿ ಉಳಿದಿದೆ. ವಿಧಾನಪರಿಷತ್‌ ರದ್ದು ಮಾಡುವ ಕೂಗು ಕೇಳಿ ಬೇಸರವಾಗಿದೆ. 41 ವರ್ಷಗಳಿಂದ ಪರಿಷತ್ತಿನಲ್ಲಿರುವ ಕಾರಣಕ್ಕೆ ನೋವಾಗಿದೆ. ಈ ಘಟನೆಗೆ ಪರಿಷತ್ತಿನ ಎಲ್ಲ ಸದಸ್ಯರು ಜವಾಬ್ದಾರರು. ರಾಜಕಾರಣದಲ್ಲಿ ನ್ಯಾಯ, ನೀತಿ, ಧರ್ಮ ಕಡಿಮೆಯಾಗುತ್ತದೆ’ ಎಂದರು.

‘ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಸಂಘವೊಂದನ್ನು ಸ್ಥಾಪಿಸಿದಾಗ ಶಿಕ್ಷಕರ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಸದಸ್ಯರ ವರ್ತನೆ ರಾಜಕೀಯಕ್ಕೆ ಕರೆತಂದಿತು. ಆಕಸ್ಮಿಕವಾಗಿ ರಾಜಕೀಯ ಪ್ರವೇಶಿಸಿ 31ನೇ ವಯಸ್ಸಿಗೆ ವಿಧಾನಪರಿಷತ್‌ ಸದಸ್ಯನಾದೆ. ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ಸದಸ್ಯ ಸಭಾಪತಿ ಹುದ್ದೆ ಅಲಂಕರಿಸಿದ್ದು ಇದೇ ಮೊದಲು. ಈ ಅಭಿನಂದನೆಯನ್ನು ಶಿಕ್ಷಕರಿಗೆ ಅರ್ಪಣೆ ಮಾಡುತ್ತೇನೆ’ ಎಂದು ಹೇಳಿದರು.

ಅಧ್ಯಕ್ಷರ ಅಧಿಕಾರ ಚಲಾವಣೆ: ಮಾರ್ಚ್‌ ತಿಂಗಳಲ್ಲಿ ನಡೆಯುವ ಕಲಾ‍ಪಕ್ಕೆ ಸಹಕರಿಸದಿದ್ದರೆ ವಿಧಾನಪರಿಷತ್‌ ಸಭಾಧ್ಯಕ್ಷರು ಅಧಿಕಾರ ಚಲಾಯಿಸುತ್ತಾರೆ ಎಂದು ಬಸವರಾಜ ಹೊರಟ್ಟಿ ಎಚ್ಚರಿಕೆ ನೀಡಿದರು.

‘ಕಲಾಪದಲ್ಲಿ ಪೇಪರ್‌ ಹರಿದು ಹಾಕುವುದು, ಕೆಟ್ಟದಾಗಿ ವರ್ತಿಸುವುದು ಪರಿಷತ್ತಿಗೆ ಶೋಭೆ ತರುವುದಿಲ್ಲ. ಕಾಲಮಿತಿಯಲ್ಲಿ ಎಲ್ಲವೂ ನಡೆಯಬೇಕು. ಅಜೆಂಡದಲ್ಲಿ ನಿಗದಿಯಾಗಿರುವ ವಿಷಯಗಳ ಪಾಲನೆಗೆ ಗಮನ ಹರಿಸಲಾಗುವುದು. ಶಿಸ್ತು ಕಾಪಾಡಲಾಗುವುದು’ ಎಂದು ಹೇಳಿದರು.

‘ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರ ನೀಡಲು ₹6 ಲಕ್ಷ ವೆಚ್ಚವಾಗಿತ್ತು. ಸದಸ್ಯರು ಕೇಳುವ ಪ್ರತಿ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ₹50 ಸಾವಿರದಿಂದ ₹1 ಲಕ್ಷದವರೆಗೆ ಹಣ ಖರ್ಚಾಗುತ್ತದೆ. ಜನರ ತೆರಿಗೆ ಹಣ ಪೋಲಾಗಬಾರದು’ ಎಂದರು.

ಅಪ್ರಬುದ್ಧರ ಆಯ್ಕೆ ತಪ್ಪಲಿ: ಸಮಾಜದಲ್ಲಿ ರಾಜಕಾರಣಿಗಳ ಸಂಖ್ಯೆ ಹೆಚ್ಚಿದೆ. ಆದರೆ, ಬದ್ಧತೆ ಹೊಂದಿದವರ ಸಂಖ್ಯೆ ಕಡಿಮೆ ಇದೆ. ಪ್ರಬುದ್ಧರು ರಾಜಕೀಯಕ್ಕೆ ಬಂದರೆ, ಅಪ್ರಬುದ್ಧರು ಆಯ್ಕೆ ಆಗುವುದು ತಪ್ಪುತ್ತದೆ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

‘ರಾಜಕಾರಣಿಗೆ ಪ್ರಜ್ಞಾವಂತಿಕೆ ಇದ್ದರೆ ಸರ್ವಜನಾಂಗದ ಹಿತಕ್ಕೆ ಶ್ರಮಿಸುತ್ತಾನೆ. ಜೀವಪರವಾದ ಕಾಳಜಿ ತೋರುತ್ತಾನೆ. ಅನಾಹುತ ಸಂಭವಿಸದಂತೆ ಎಚ್ಚರ ವಹಿಸುತ್ತಾನೆ. ಕ್ಲಿಷ್ಟ ಸಮಸ್ಯೆಗೆ ಪರಿಹಾರ ಹುಡುಕುತ್ತಾನೆ. ಆದರೆ, ಚುನಾವಣೆಯಲ್ಲಿ ಅಪ್ರಬುದ್ಧರನ್ನೇ ಜನರು ಆಯ್ಕೆ ಮಾಡುತ್ತಿರುವುದು ವಿಪರ್ಯಾಸ’ ಎಂದರು.

ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ, ‘ರಾಜಕಾರಣದಲ್ಲಿ ಸಭ್ಯತೆ ಮರೆಯಾಗುತ್ತಿದೆ. ಅಧಿಕಾರದ ಆಸೆಗೆ ಅಡ್ಡದಾರಿ ಹಿಡಿಯುವರ ಸಂಖ್ಯೆ ಹೆಚ್ಚಾಗುತ್ತಿದೆ. ಸಂವೇದನೆ ಹೊಂದಿದ, ಸಮುದಾಯದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ರಾಜಕಾರಣಿ ಮಾತ್ರ ನಾಯಕನಾಗಬಲ್ಲ. ಶಿಕ್ಷಣ ರಂಗದಲ್ಲಿ ಇಂತಹ ಸಂವೇದನಾಶೀಲ ಹೆಜ್ಜೆಗುರುತುಗಳನ್ನು ಹೊರಟ್ಟಿ ಉಳಿಸಿದ್ದಾರೆ. ಇಂತಹ ಸಭ್ಯ ರಾಜಕಾರಣಿಗಳ ಸಂಖ್ಯೆ ಹೆಚ್ಚಾಗುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್‌ ಮುಖಂಡ ಹನುಮಲಿ ಷಣ್ಮುಖಪ್ಪ, ಮುರುಘಾ ಮಠದ ಮಲ್ಲಿಕಾರ್ಜುನಸ್ವಾಮಿ, ಕೆ.ಇ.ಬಿ. ಷಣ್ಮುಖಪ್ಪ ಇದ್ದರು.

***

ಸಭಾಪತಿ ಸ್ಥಾನದಲ್ಲಿ ಕುಳಿತಾಗ ಪಕ್ಷಪಾತ ಮಾಡಬಾರದು. ಹೀಗಾಗಿ, ಜೆಡಿಎಸ್‌ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತೇನೆ.

–ಬಸವರಾಜ ಹೊರಟ್ಟಿ, ವಿಧಾನಪರಿಷತ್‌ ಸಭಾಪತಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು