ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌ಗೆ ಕೋವಿಡ್‌

ಸಂಪರ್ಕಕ್ಕೆ ಬಂದವರು ತಪಾಸಣೆಗೆ ಒಳಗಾಗಲು ಪಾಲಿಕೆ ಮನವಿ
Last Updated 22 ಡಿಸೆಂಬರ್ 2020, 14:43 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರಿಗೆ ಕೋವಿಡ್‌ ದೃಢಪಟ್ಟಿದೆ. ಆಯುಕ್ತರು ನಿತ್ಯವೂ ಅನೇಕ ಸಭೆ ಸಮಾರಂಭಗಳಲ್ಲಿ ಅವರು ಭಾಗವಹಿಸುತ್ತಿರುತ್ತಾರೆ. ಇತ್ತೀಚೆಗೆ ಅವರ ಸಂಪರ್ಕಕ್ಕೆ ಬಂದವರು ಕೂಡಾ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುವಂತೆ ಪಾಲಿಕೆ ಸಾರ್ವಜನಿಕರಲ್ಲಿ ಕೋರಿದೆ.

ಮಂಜುನಾಥ ಪ್ರಸಾದ್‌ ಅವರಿಗೆ ಸೋಮವಾರ ಅಲ್ಪ ಪ್ರಮಾಣದಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಹಾಗಾಗಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಿದ್ದರು. ಆಗ ಅವರಿಗೆ ಸೋಂಕು ತಗುಲಿರುವುದು ಮಂಗಳವಾರ ದೃಢಪಟ್ಟಿತ್ತು. ಅವರು ಮಲ್ಲಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾಸದಲ್ಲಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

ವಿವಿಧ ಕಾರ್ಯಕ್ರಮದಲ್ಲಿ ಭಾಗಿ: ಜನಾಗ್ರಹ ಸಂಸ್ಥೆ ಸೋಮವಾರ ಹಮ್ಮಿಕೊಂಡಿದ್ದ ‘ಮೈ ಸಿಟಿ ಮೈ ಬಜೆಟ್‌’ ಕಾರ್ಯಕ್ರಮದಲ್ಲಿಆಯುಕ್ತರು ಭಾಗವಹಿಸಿದ್ದರು. ಆ ಬಳಿಕ ವಿವಿಧ ಸಭೆಗಳನ್ನು ನಡೆಸಿದ್ದರು. ಕೋವಿಡ್‌ ವಾರ್‌ ರೂಂನಲ್ಲಿ ರಾತ್ರಿ 7.30ರವರೆಗೂ ಇದ್ದರು.

‘ಫಿಟ್‌ ಇಂಡಿಯಾ’ ಅಭಿಯಾನದ ಅಂಗವಾಗಿ ಬಿಬಿಎಂಪಿ ಹಾಗೂ ಬೆಂಗಳೂರು ಸ್ಮಾರ್ಟ್‌ಸಿಟಿ ಲಿಮಿಟೆಡ್‌ ಸಂಸ್ಥೆ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸೈಕ್ಲಥಾನ್‌ ಕಾರ್ಯಕ್ರಮದಲ್ಲೂ ಆಯುಕ್ತರು ಭಾಗವಹಿಸಿದ್ದರು. ಈ ಸೈಕಲ್‌ ಜಾಥಾದಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ಗೌರವ ಗುಪ್ತ, ಬೆಂಗಳೂರು ಸ್ಮಾರ್ಟ್‌ ಸಿಟಿ ಸಂಸ್ಥೆಯ ವ್ಯವಸ್ತಾಪಕ ನಿರ್ದೇಶಕ ರಾಜೇಂದ್ರ ಚೋಳನ್‌ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. ಇದೇ ಕಾರ್ಯಕ್ರಮದಲ್ಲಿ ಕೋವಿಡ್ ಯೋಧರನ್ನು ಸನ್ಮಾನಿಸಲಾಗಿತ್ತು. ಮಕ್ಕಳನ್ನು ಭಿಕ್ಷಾಟಣೆಗೆ ಬಳಸುತ್ತಿರುವುದರ ಕುರಿತು ಸಮೀಕ್ಷೆ ನಡೆಸುವ ಬಗ್ಗೆ ಶುಕ್ರವಾರ ಸಭೆ ನಡೆಸಿದ್ದರು.

‘ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಹಾಗೂ ಸಭೆಗಳನ್ನು ನಡೆಸುವಾಗ ಆಯುಕ್ತರು ಇತರರ ಜೊತೆ ಅಂತರ ಕಾಪಾಡಿದ್ದರು ಹಾಗೂ ಮಾಸ್ಕ್‌ ಧರಿಸಿದ್ದರು. ಆದರೂ ನಾಲ್ಕೈದು ದಿನಗಳಿಂದ ಈಚೆಗೆ ಆಯುಕ್ತರ ನೇರ ಹಾಗೂ ಪರೋಕ್ಷ ಸಂಪರ್ಕಕ್ಕೆ ಬಂದವರು ಕೋವಿಡ್‌ ತಪಾಸಣೆ ಮಾಡಿಸಿಕೊಳ್ಳಬೇಕಾಗುತ್ತದೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

ಕಾರ್ಯಕ್ರಮವೊಂದರ ಬಗ್ಗೆ ಚರ್ಚಿಸುವ ಸಲುವಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನೂ ಆಯುಕ್ತರು ಭಾನುವಾರ ಭೇಟಿ ಮಾಡಿದ್ದರು. ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಜೊತೆಗೆ ಕಳೆದ ವಾರ ಕೆಲವು ಸಭೆಗಳಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT