ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ತೆರಿಗೆ ಸಂಗ್ರಹದಲ್ಲೇ ₹500 ಕೋಟಿ ಅಕ್ರಮ ಪತ್ತೆ

ಬಿಬಿಎಂಪಿ ಕಚೇರಿಗಳಲ್ಲಿ ಮುಂದುವರಿದ ಎಸಿಬಿ ಶೋಧ
Last Updated 28 ಫೆಬ್ರುವರಿ 2022, 22:00 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಂದಾಯ ವಿಭಾಗವು ಆಸ್ತಿ ತೆರಿಗೆ ಸಂಗ್ರಹದಲ್ಲೇ ₹ 500 ಕೋಟಿಗೂ ಹೆಚ್ಚು ಅಕ್ರಮ ನಡೆಸಿರುವುದನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸೋಮವಾರ ಪತ್ತೆಮಾಡಿದೆ.

ಬಿಬಿಎಂಪಿಯ 25 ಕಚೇರಿಗಳ ಮೇಲೆ ಶುಕ್ರವಾರ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು, ಶೋಧ ನಡೆಸಿದ್ದರು. ಸೋಮವಾರವೂ ಶೋಧ ಕಾರ್ಯಾಚರಣೆ ಮುಂದುವರಿಯಿತು. ಕಂದಾಯ, ಎಂಜಿನಿಯರಿಂಗ್‌ ಮತ್ತು ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್‌) ವಿಭಾಗಗಳಲ್ಲಿ ಭಾರಿ ಪ್ರಮಾಣದ ಅಕ್ರಮಗಳು ನಡೆದಿರುವುದನ್ನು ತನಿಖಾ ತಂಡ ಪತ್ತೆಹಚ್ಚಿದೆ.

‘ಹಲವು ಬಹುರಾಷ್ಟ್ರೀಯ ಕಂಪನಿಗಳು, ಮಾಲ್‌ಗಳು, ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿಂದ ತೆರಿಗೆ ಸಂಗ್ರಹಿಸದೇ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರಕ್ಕೆ ₹500 ಕೋಟಿಗೂ ಹೆಚ್ಚು ನಷ್ಟ ಉಂಟುಮಾಡಿರುವುದು ಪತ್ತೆಯಾಗಿದೆ. ಕೆಲವು ಬಹುರಾಷ್ಟ್ರೀಯ ಕಂಪನಿಗಳು, ಮಾಲ್‌ಗಳು ಮತ್ತು ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿಗೆ ಸರ್ಕಾರದ ಮಾನದಂಡಗಳಿಗೆ ವಿರುದ್ಧವಾಗಿ ಕಡಿಮೆ ತೆರಿಗೆ ವಿಧಿಸುವ ಮೂಲಕ ಅಕ್ರಮವಾಗಿ ಲಾಭ ಮಾಡಿಕೊಡಲಾಗಿದೆ’ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಬಹುರಾಷ್ಟ್ರೀಯ ಕಂಪನಿಗಳಿಗೆ ಸೇರಿದ ಕಟ್ಟಡಗಳು, ಕೆಲವು ಮಾಲ್‌ಗಳು ಮತ್ತು ಅಪಾರ್ಟ್‌ಮೆಂಟ್‌ಗಳಿಗೆ ಅಕ್ರಮವಾಗಿ ಸ್ವಾಧೀನ ಪ್ರಮಾಣಪತ್ರ (ಒ.ಸಿ) ನೀಡಿರುವುದು ದಾಖಲಾತಿಗಳ ಪರಿಶೀಲನೆ ವೇಳೆ ಕಂಡುಬಂದಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರಿ ಪ್ರಮಾಣದ ನಷ್ಟವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ನಕಲಿ ಬಿಲ್‌ ಸೃಷ್ಟಿಸಿ ಲೂಟಿ: ಪಾಲಿಕೆಯ ಎಂಜಿನಿಯರಿಂಗ್‌ ವಿಭಾಗದಲ್ಲಿ ಒಂದೇ ಕಾಮಗಾರಿಗೆ ಹಲವು ಬಿಲ್‌ಗಳನ್ನು ಸೃಷ್ಟಿಸಿ, ಹಣ ಲೂಟಿ ಮಾಡಿರುವುದು ಪತ್ತೆಯಾಗಿದೆ. ಕೆಲವು ಕಡೆಗಳಲ್ಲಿ ಕಾಮಗಾರಿಯನ್ನೇ ನಡೆಸದೇ ಬಿಲ್‌ ಸೃಷ್ಟಿಸಿ, ಹಣ ಪಾವತಿಸಲಾಗಿದೆ ಎಂದು ತನಿಖಾ ತಂಡ ತಿಳಿಸಿದೆ.

ಕೆಲವು ಕಡೆಗಳಲ್ಲಿ ಟೆಂಡರ್‌ ಷರತ್ತುಗಳನ್ನು ಅನುಸರಿಸದೇ ಕಳಪೆ ಕಾಮಗಾರಿ ಮಾಡಿದ್ದರೂ, ಹೆಚ್ಚಿನ ಮೊತ್ತದ ಬಿಲ್‌ ಮಂಜೂರು ಮಾಡಿರುವುದಕ್ಕೆ ದಾಖಲೆಗಳು ಲಭ್ಯವಾಗಿವೆ ಎಂದು ಎಸಿಬಿ ಮಾಹಿತಿ ನೀಡಿದೆ.

ಸುಳ್ಳು ಮಾಹಿತಿ ನೀಡಿ ಟಿಡಿಆರ್‌ !

‘ಟಿಡಿಆರ್‌ ವಿಭಾಗದಲ್ಲೂ ಭಾರಿ ಪ್ರಮಾಣದ ಅಕ್ರಮಗಳು ಪತ್ತೆಯಾಗಿವೆ. ಒಂದು ಮಹಡಿ ಇರುವ ಕಟ್ಟಡಗಳನ್ನು ಎರಡು, ಮೂರು ಮಹಡಿಗಳ ಕಟ್ಟಡ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಹೆಚ್ಚಿನ ಟಿಡಿಆರ್‌ ವಿತರಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ ಸ್ವತ್ತಿನ ನೈಜ ಮಾಲೀಕರನ್ನು ಬಿಟ್ಟು ಅನ್ಯ ವ್ಯಕ್ತಿಗಳಿಗೆ ಟಿಡಿಆರ್‌ ನೀಡಿರುವುದೂ ಕಂಡುಬಂದಿದೆ’ ಎಂದು ತನಿಖಾ ಸಂಸ್ಥೆ ಹೇಳಿದೆ.

ರಸ್ತೆ ವಿಸ್ತರಣೆಗೆ ಕಟ್ಟಡಗಳು ಬಳಕೆಯಾಗದಿದ್ದರೂ ಸುಳ್ಳು ಮಾಹಿತಿ ನೀಡಿ ಟಿಡಿಆರ್‌ ನೀಡಲಾಗಿದೆ. ಸ್ವಾಧೀನಪಡಿಸಿಕೊಂಡ ಕಟ್ಟಡಗಳ ಎದುರು ನಿಂತು ಫೋಟೊ ತೆಗೆಸಿ, ಅವುಗಳನ್ನು ಅಕ್ರಮಕ್ಕೆ ಬಳಸಲಾಗಿದೆ. ಈ ಹಗರಣದಲ್ಲಿ ಬಹುರಾಷ್ಟ್ರೀಯ ಕಂಪನಿಗಳು, ಮಧ್ಯವರ್ತಿಗಳು ಮತ್ತು ಕೆಲವು ಭೂಮಾಲೀಕರು ಭಾಗಿಯಾಗಿದ್ದಾರೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT